
ಉಧಮ್‌ಪುರ, 16 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್‌ಒಜಿ) ಜವಾನ್ ಒಬ್ಬರು ಹುತಾತ್ಮರಾದ ಹಿನ್ನೆಲೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಮಜಲ್ಟಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮಂಗಳವಾರ ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಸೋಮವಾರದ ಎನ್‌ಕೌಂಟರ್ ವೇಳೆ ಒಬ್ಬ ಭಯೋತ್ಪಾದಕ ಗಾಯಗೊಂಡಿರುವ ಶಂಕೆಯಿದ್ದು, ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗುಂಡೇಟಿನ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಡಗಿರುವ ಉಗ್ರರನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಮರುಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೇನೆ ಮತ್ತು ಸಿಆರ್‌ಪಿಎಫ್‌ನೊಂದಿಗೆ ಸೇರಿ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಜಂಟಿಯಾಗಿ ಸ್ನಿಫರ್ ಶ್ವಾನಗಳ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಉಧಂಪುರದ ಮಜಲ್ಟಾ ಪ್ರದೇಶದ ಸೋನ್ ಗ್ರಾಮದಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಶಂಕಿಸಲಾದ ಮೂವರು ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸೋಮವಾರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿತ್ತು.
ಸಂಜೆ 6 ಗಂಟೆ ಸುಮಾರಿಗೆ ಸುತ್ತುವರಿದ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿದ್ದು, ಈ ವೇಳೆ ಪೂಂಚ್ ಜಿಲ್ಲೆಯ ಮೆಂಧರ್ ಉಪ ಜಿಲ್ಲೆಯ ಸಾಲ್ವಾ ನಿವಾಸಿ ಎಸ್‌ಒಜಿ ಜವಾನ್ ಅಮ್ಜದ್ ಪಠಾಣ್ ಗಂಭೀರವಾಗಿ ಗಾಯಗೊಂಡು ನಂತರ ಹುತಾತ್ಮರಾದರು.
ಈ ಕುರಿತು ಪ್ರತಿಕ್ರಿಯಿಸಿದ ಜಮ್ಮು ವಲಯದ ಐಜಿಪಿ ಭೀಮ್ ಸೈನ್ ಟುಟು, “ಎಸ್‌ಒಜಿಯ ಸಣ್ಣ ತಂಡವೊಂದು ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡಿತ್ತು. ಆದರೆ ಕತ್ತಲೆ ಮತ್ತು ಕಠಿಣ ಭೂಪ್ರದೇಶವು ಕಾಡು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಗೆ ಅಡ್ಡಿಯಾಯಿತು,” ಎಂದು ಹೇಳಿದರು.
ಉಧಂಪುರದ ಬಸಂತ್‌ಗಢ ಪ್ರದೇಶವು ಪಾಕಿಸ್ತಾನ ಮೂಲದ ಉಗ್ರರು ಕಥುವಾದ ಅಂತಾರಾಷ್ಟ್ರೀಯ ಗಡಿಯಿಂದ ದೋಡಾ, ಕಿಶ್ತ್ವಾರ್ ಜಿಲ್ಲೆಗಳು ಹಾಗೂ ಕಾಶ್ಮೀರ ಕಣಿವೆಯೊಳಗೆ ನುಸುಳಲು ಬಳಸುತ್ತಿದ್ದ ಸಾಂಪ್ರದಾಯಿಕ ಮಾರ್ಗವಾಗಿದೆ ಎಂಬುದನ್ನೂ ಅವರು ಉಲ್ಲೇಖಿಸಿದರು.
ಹುತಾತ್ಮ ಎಸ್‌ಒಜಿ ಜವಾನ್ ಅಮ್ಜದ್ ಪಠಾಣ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಇನ್ನೂ ಬಾಕಿಯಿದ್ದು, ನಂತರ ಉಧಂಪುರದಲ್ಲಿ ಸರ್ಕಾರಿ ಗೌರವಗಳೊಂದಿಗೆ ಮಾಲಾರ್ಪಣೆ ಸಮಾರಂಭ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa