


ಕೊಪ್ಪಳ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನಾಡಿನ ಹಂಪೆ, ಬೇಲೂರು, ಹಳೆಬೀಡು, ಚಿತ್ರದುರ್ಗ, ಕಿತ್ತೂರು, ಕೊಪ್ಪಳದ ಇತಿಹಾಸ, ಶಿಲ್ಪ ಕಲೆ, ಸಾಂಸ್ಕೃತಿಕ ಶ್ರೀಮಂತಿಕೆ ಶ್ರೇಷ್ಠವಾದದ್ದು, ಇತಿಹಾಸ ಪ್ರಸಿದ್ದವಾದದ್ದು, ಇತಿಹಾಸದ ವಿದ್ಯಾರ್ಥಿಗಳು ಇಂತಹ ಇತಿಹಾಸವನ್ನು ಚನ್ನಾಗಿ ಅಧ್ಯಯನ ಮಾಡಿದರೆ, ಒಳ್ಳೆಯ ಅವಕಾಶಗಳು ಕೈ ಬೀಸಿ ಕರೆಯಲಿವೆ. ಉಜ್ವಲ ಭವಿಷ್ಯ ನಿಮ್ಮದಾಗಲಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ.ರವಿಯವರು ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯ ಬಾನಾಪುರ ಬಳಿಯ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತಕ್ಕಾಗಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲು ಗೀಳು ತ್ಯಜಿಸಿ ನಾಡಿನ ಇತಿಹಾಸ, ನಾಡಿನ ಸಮಾಜ ಸುಧಾರಕರು, ಶರಣರು, ದಾಸರು, ದಾರ್ಶನಿಕರು ಸ್ವಾತಂತ್ರ‍್ಯ ಯೋಧರ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಿ, ಜನರಿಗೆ ತಿಳಿಸಬೇಕಾದ ಮಹತ್ವದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು. ಇತಿಹಾಸದಲ್ಲಿ ಕೊಪ್ಪಳ ಭಾಗಕ್ಕೆ ತಿರುಳ್ಗನ್ನಡ ನಾಡೆಂಬ ಹೆಸರಿದೆ. ಕವಿರಾಜ ಮಾರ್ಗ ಕೃತಿಯಲ್ಲಿ 'ಕುರಿತೋದೆಯಂ ಕಾವ್ಯ ಪರಿಣಿತ ಮತಿಗಳ್ ಪ್ರದೇಶಂ ಕೊಪಣಾಚಲ ಪ್ರದೇಶಂ' ಎಂಬ ಉಲ್ಲೇಖವಿದೆ. ಈ ಭಾಗಕ್ಕೆ ಒಳ್ಳೆಯ ಇತಿಹಾಸ ಇದೆ, ಇದನ್ನು ಸಮರ್ಪಕವಾಗಿ ಅಧ್ಯಯನ ಮಾಡಿ ನಾಡಿಗೆ ತಿಳಿಸಿಕೊಡಿ ಎಂದರು. ನಾಡಿನ ದಾಸ ಸಾಹಿತ್ಯ, ಚಚನ ಸಾಹಿತ್ಯ, ಇತರ ಕೊಡುಗೆಗಳ ಬಗ್ಗೆ ಈ ವೇಳೆ ತಿಳಿಸಿದರು.
ವಿಶ್ವವಿದ್ಯಾಲಯದ ಕುಲ ಸಚಿವರಾದ ಪ್ರೊ. ಎಸ್.ವಿ. ಡಾಣಿಯವರು ಮಾತನಾಡಿ, ಕನ್ನಡ ನಾಡು ಶ್ರೀಮಂತ ಇತಿಹಾಸವನ್ನು ಹೊಂದಿದೆ. ನಾಡಿಗೆ ಸಿಡಿಲ ಮರಿಗಳನ್ನು ನೀಡಿದೆ ಎಂದರಲ್ಲದೇ ಇತಿಹಾಸದಲ್ಲಿನ ಶ್ರೇಷ್ಠ ಅಂಶಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇತಿಹಾಸ ಅರಿತವರು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಪ್ರೊ.ತಿಮ್ಮಾರೆಡ್ಡಿ ಮೇಟಿಯವರು ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮವಹಿಸಿ ಅಧ್ಯಯನ ಮಾಡಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಸನ್ಮಾನ: ಕೆ.ಸೆಟ್ ಪರೀಕ್ಷೆಯಲ್ಲಿ ಈ ಬಾರಿ ವಿಜೇತರಾದ ಪ್ರಕಾಶ, ಬಸವರಾಜ ಜಾಲಿಹಾಳ ಹಾಗೂ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಈ ವೇಳೆ ಸನ್ಮಾನಿಸಲಾಯಿತು.
ಕೊಪ್ಪಳ ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಗೀತಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಲವು ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ಸೌಜನ್ಯ ಸ್ವಾಗತಿಸಿದರೆ, ಬಸವರಾಜ ಹಾರ್ನಳ್ಳಿ ನಿರೂಪಿಸಿದರು ಮತ್ತು ಹನುಮಂತ ಯಾದವ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್