
ದಾವಣಗೆರೆ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯಿಂದ ನಾವು ಒಂದು ತಲೆಮಾರಿನ ಹಿರಿಯರನ್ನು ಕಳೆದುಕೊಂಡಿದ್ದೇವೆ. ಅವರ ಸ್ವಂತ ವ್ಯಾಪಾರ, ಶಿಕ್ಷಣ, ಸಮುದಾಯ ಕಟ್ಟುವ ಕೆಲಸದಲ್ಲಿ ಅದ್ವಿತಿಯ ಸಾಧನೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಬಹಳ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಬಹಳ ಸರಳ ಜೀವನ ಮತ್ತು ಸ್ನೇಹಪರ ವ್ಯಕ್ತಿತ್ವ. ವಯಸ್ಸಿಗೆ ಮೀರಿ ಅವರು ಸ್ನೇಹವನ್ನು ಅನುಭವಿಸಿದ್ದಾರೆ. ಸುಮಾರು ಎರಡು ಮೂರು ತಲೆಮಾರುಗಳ ಜೊತೆ ಸ್ನೇಹವನ್ನು ಅವರು ಅನುಭವಿಸಿದ್ದಾರೆ. ಒಬ್ಬ ಹಿರಿಯ ರಾಜಕಾರಣಿ ಮತ್ತು ಸಮಾಜಮುಖಿ ನಾಯಕನನ್ನು ಕರ್ನಾಟಕ ಕಳೆದುಕೊಂಡಿದೆ ಎಂದು ಹೇಳಿದರು. ಅವರು ಕಟ್ಟಿರುವ ನೂರಾರು ಸಂಸ್ಥೆಗಳಲ್ಲಿ ಲಕ್ಷಗಟ್ಟಲೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ವಿವಿಧ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದರೆ ಅದಕ್ಕೆ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಇದೆ. ಇಡಿ ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರು ತಮ್ಮ ಹಿರಿತನ ಮತ್ತು ಸಾಧನೆಯನ್ನು ಎಲ್ಲಿಯೂ ತೋರಿಸಿಕೊಟ್ಟಿಲ್ಲ. ಅಷ್ಟು ಮುತ್ಸದ್ದಿ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭೆ ಅವರನ್ನು ಕಳೆದು ಕೊಂಡು ಅನಾಥವಾಗಿದೆ. ಅವರಿದ್ದ ಸಂದರ್ಭದಲ್ಲಿ ಅವರ ಹಿರಿತನ ಮತ್ತು ನಾಯಕತ್ವ ಒಪ್ಪಿಕೊಂಡು ಎಲ್ಲರೂ ಗೌರವ ಕೊಡುತ್ತಿದ್ದರು. ಈಗ ಆ ಕೊರತೆ ಎದ್ದು ಕಾಣಿಸುತ್ತಿದೆ. ದಾವಣಗೆರೆ ಜನರೂ ಕೂಡ ಅನಾಥರಾಗಿದ್ದಾರೆ. ಏನಾದರೂ ಇದ್ದರೆ ಶಾಮನೂರು ಶಿವಶಂಕರಪ್ಪ ಇದ್ದಾರೆ. ಅವರ ನಾಯಕತ್ವದಲ್ಲಿ ಸಮಸ್ಯೆ ಬಗೆ ಹರಿಸಿಕೊಳ್ಳಬಹುದು ಎನ್ನುವ ವಿಶ್ವಾಸ ಇತ್ತು. ಸಾರ್ವಜನಿಕ ಜೀವನದಲ್ಲಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ತಮ್ಮದೇ ಆದ ವರ್ಚಸ್ಸು ಇಟ್ಟುಕೊಂಡು ಇಳಿ ವಯಸ್ಸಿನಲ್ಲಿಯೂ ದಕ್ಷ ಆಡಳಿತ ಕೊಟ್ಟಂತಹ ಸಚಿವರಾಗಿದ್ದರು. ಹೀಗಾಗಿ ಬಹಳ ಅಪರೂಪದ ವ್ಯಕ್ತಿ ಆಗಿದ್ದರು. ಒಂದು ತಲೆಮಾರಿನ ಕೊಂಡಿ ಕಳಚಿದಂತಾಗಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa