


ಬಳ್ಳಾರಿ, 14 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರತಿದಿನ ವ್ಯಾಜ್ಯ ಪ್ರಕರಣಗಳೊಂದಿಗೆ ಬದುಕುವ ಬದಲು ಮುತುವರ್ಜಿ ವಹಿಸಿ ಉದಾರ ಮನಸ್ಸಿನಿಂದ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಿಕೊಂಡರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಹೇಳಿದ್ದಾರೆ.
ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯದ ಪೀಠಗಳಲ್ಲಿ ಆಯೋಜಿಸಿದ್ದ 2025 ರ ಕೊನೆಯ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯವನ್ನು ವೀಕ್ಷಣೆ ನಡೆಸಿ ಮಾಧ್ಯಮದವರನ್ನುದ್ದೇಶಿಸಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ದೊಡ್ಡ ಪ್ರಮಾಣದ ಬಾಕಿ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಮತ್ತು ಸಂಧಾನದ ಮೂಲಕ ಇತ್ಯರ್ಥಪಡಿಸುವುದು ಅದಾಲತ್‌ನ ಮುಖ್ಯ ಉದ್ದೇಶವಾಗಿತ್ತು ಎಂದರು.
ಅದಾಲತ್‌ನಲ್ಲಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಲ್ಲಿ ಅನೇಕ ವ್ಯಾಜ್ಯಪೂರ್ವ ಪ್ರಕರಣಗಳು ಕೂಡ ಸೇರಿವೆ, ಅವುಗಳು ನ್ಯಾಯಾಲಯಕ್ಕೆ ಹೋಗುವುದನ್ನು ತಡೆಯುತ್ತದೆ. ಲೋಕ್ ಅದಾಲತ್ ಮೂಲಕ ಅಪಘಾತ ವಿಮೆ ಪ್ರಕರಣಗಳು, ಚೆಕ್ ಬೌನ್ಸ್, ವಿವಾಹ ವಿವಾದಗಳು, ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಗಳು ಮತ್ತು ಗ್ರಾಹಕರ ದೂರುಗಳು ಸೇರಿದಂತೆ ವಿವಿಧ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಕರಣಗಳಿಗೂ ಪರಿಹಾರ ದೊರಕಿದೆ. ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದವರಿಗೆ ಸಂಪೂರ್ಣ ನ್ಯಾಯಾಲಯ ಶುಲ್ಕ ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದರು.
ವಿವಿಧ ಬಗೆಯ ಪ್ರಕರಣ ಇತ್ಯರ್ಥ:
ಜಿಲ್ಲೆಯಲ್ಲಿನ 09 ಕೌಟುಂಬಿಕ ಪ್ರಕರಣಗಳಲ್ಲಿನ ವಿವಾದಗಳನ್ನು ಬಗೆಹರಿಸಿ ದೂರ-ದೂರ ಇದ್ದ ಪತಿ-ಪತ್ನಿಯನ್ನು ಒಂದು ಮಾಡಿ ಒಟ್ಟಿಗೆ ಜೀವನ ಮಾಡುವಂತೆ ಸಂಧಾನ ಮಾಡಲಾಯಿತು.
ಸುಮಾರು 85 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಮುಖಾಂತರ ಸಂಧಾನ ಮಾಡಿ ಸುಮಾರು ರೂ. 2,48,41,056/- ಗಳನ್ನು ಪರಿಹಾರವಾಗಿ ನೀಡಲಾಯಿತು.
44 ಬ್ಯಾಂಕ್ ದಾವೆಗಳನ್ನು ರಾಜಿ ಮೂಲಕ ಸಂಧಾನ ಮಾಡಿ ರೂ. 1,83,17,626 ಗಳನ್ನು ಮತ್ತು 18 ಹಣವಸೂಲಾತಿ ದಾವೆಗಳನ್ನು ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸಿ ರೂ. 46,15,167/- ಗಳನ್ನು ಪಾವತಿಸಲಾಗಿದೆ. ಅದೇ ರೀತಿ 48 ಅಪಘಾತ ಪರಿಹಾರದ ಪ್ರಕರಣಗಳನ್ನು ಮುಕ್ತಾಯಗೊಳಿಸಿ ರೂ. 5,46,85,000/- ಗಳನ್ನು ಪರಿಹಾರವಾಗಿ ನೀಡಿದೆ.
ನೌಕರರ ಪರಿಹಾರದ ಕಾಯ್ದೆ ಅಡಿ 04 ಪ್ರಕರಣಗಳಲ್ಲಿ 54,80,000/- ರೂಗಳನ್ನು ಪರಿಹಾರವಾಗಿ ಕೊಡಮಾಡಲಾಗಿದೆ. 17 ಪಾಲುವಿಭಾಗ ದಾವೆಗಳನ್ನು, 20 ಎಂ.ವಿ.ಸಿ. ಅಮಲ್ದಾರಿ ಪ್ರಕರಣಗಳನ್ನು ಹಾಗೂ 71 ಇತರೆ ಅಮಲ್ದಾರಿ ಪ್ರಕರಣಗಳನ್ನು ಮುಕ್ತಾಯಗೊಳಿಸಿ ರೂ. 45,930,818/- ಗಳನ್ನು ಪರಿಹಾರವಾಗಿ ಕೊಡಮಾಡಲಾಗಿದೆ. 14 ಜೀವನಾಂಶ ಕೋರಿ ಹಾಕಿದ ಅರ್ಜಿಗಳು ರಾಜಿ ಸಂಧಾನ ಮೂಲಕ ತೀರ್ಮಾನಗೊಂಡು ರೂ. 4,17,000/- ಗಳನ್ನು ಪರಿಹಾರವಾಗಿ ಕೊಡಮಾಡಲಾಗಿದೆ.
ಹಲವಾರು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಈ ಲೋಕ್ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸಲಾಗಿದೆ ಎಂದು ತಿಳಿಸಿದರು.
23 ವರ್ಷದಿಂದ ಬಾಕಿ ಇದ್ದ ಸಿವಿಲ್ ದಾವೆ ನಂ.335/2002 ಈ ಪ್ರಕರಣವನ್ನು, 09 ವರ್ಷದಿಂದ ಬಾಕಿ ಇದ್ದ ಸಿವಿಲ್ ದಾವೆ ನಂ.643/2016 ಇವುಗಳನ್ನು ಹಾಗೂ 05 ವರ್ಷಕ್ಕಿಂತ ಮೇಲ್ಪಟ್ಟು ಬಾಕಿ ಇದ್ದ 04 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಖಾಂತರ ಮುಕ್ತಾಯಗೊಳಿಸಲಾಗಿದೆ.
ಎಲ್ಲಾ ಪಾಲುದಾರರ ಸಹಕಾರ:
ಈ ಅದಾಲತ್‌ನ ಯಶಸ್ಸಿಗೆ ನ್ಯಾಯಾಧೀಶರು, ವಕೀಲರು, ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳು ಸೇರಿದಂತೆ ಎಲ್ಲ ಪಾಲುದಾರರ ಸಹಕಾರ ಕಾರಣವಾಗಿದೆ ಎಂದು ತಿಳಿಸಿದರು.
ಲೋಕ್ ಅದಾಲತ್‌ನ ಅಂಕಿಅಂಶ:
ಇತ್ಯರ್ಥಗೊಂಡ ಬಾಕಿ ಪ್ರಕರಣಗಳ ಒಟ್ಟು ಸಂಖ್ಯೆ: 7,354 ಪ್ರಕರಣಗಳು.
ವಸೂಲಾದ ಪರಿಹಾರ ಮೊತ್ತ: ರೂ.16,99,82,418 ಕೋಟಿ.
ಇತ್ಯರ್ಥಗೊಂಡ ವ್ಯಾಜ್ಯ ಪೂರ್ವ ಪ್ರಕರಣಗಳು: 3,43,762.
ವಸೂಲಾದ ಪರಿಹಾರ ಮೊತ್ತ: ರೂ. 168,37,95,909 ಕೋಟಿ.
ಇತ್ಯರ್ಥಗೊಳಿಸಿದ ಪ್ರಕರಣಗಳು:
ನ್ಯಾಯಾಲಯದಲ್ಲಿ ದೀರ್ಘಕಾಲದಿಂದ ಬಾಕಿ ಇದ್ದ 9557 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿತ್ತು. ಇವುಗಳಲ್ಲಿ 7354 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ.
ರಾಷ್ಟ್ರೀಯ ಲೋಕ್ ಅದಾಲತ್ ಗೆ ಸಂಬಂಧಿಸಿದಂತೆ ಶನಿವಾರ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 13 ನ್ಯಾಯಪೀಠಗಳನ್ನು (ಬೆಂಚ್) ಸ್ಥಾಪಿಸಲಾಗಿತ್ತು.
ವಿವಾದಗಳ ಪರಿಹಾರಕ್ಕೆ ಮತ್ತು ಸಮುದಾಯದಲ್ಲಿ ಪರಸ್ಪರ ವಿಶ್ವಾಸವನ್ನು ಹೆಚ್ಚಿಸಲು ಲೋಕ್ ಅದಾಲತ್‌ಗಳು ಪರಿಣಾಮಕಾರಿ ಸಾಧನಗಳಾಗಿವೆ.
ಲೋಕ್ ಅದಾಲತ್‌ಗಳು ವಿವಾದಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸುವಲ್ಲಿ ಎಷ್ಟು ಯಶಸ್ವಿಯಾಗಿವೆ ಎಂಬುದನ್ನು ತೋರಿಸುತ್ತವೆ. ಇದು ನ್ಯಾಯಾಂಗದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಲು ಸಹಾಯ
ಮಾಡುತ್ತದೆ. ಈ ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ವಿಯಾಗಲು ಕಾರಣರಾದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ರಾಜೇಶ್.ಎನ್ ಹೊಸಮನೆ ಸೇರಿದಂತೆ ನ್ಯಾಯಾಲಯಗಳ ನ್ಯಾಯಾಧೀಶರು, ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್