
ನವದೆಹಲಿ, 13 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದು, ಇದನ್ನು ಕೇರಳ ರಾಜಕೀಯದಲ್ಲಿ ಒಂದು ಮಹತ್ವದ ತಿರುವು ಎಂದು ಬಣ್ಣಿಸಿದ್ದಾರೆ.
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಸಾಧಿಸಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಸಾಧನೆಯಾಗಿ ಪರಿಗಣಿಸಲಾಗುತ್ತಿದೆ.
ಶನಿವಾರ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಧನ್ಯವಾದಗಳು ತಿರುವನಂತಪುರಂ! ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಬಿಜೆಪಿ–ಎನ್‌ಡಿಎಗೆ ದೊರೆತ ಜನಾದೇಶವು ಕೇರಳ ರಾಜಕೀಯದಲ್ಲಿ ಮಹತ್ವದ ತಿರುವಾಗಿದೆ. ರಾಜ್ಯದ ಅಭಿವೃದ್ಧಿ ಆಕಾಂಕ್ಷೆಗಳನ್ನು ನಮ್ಮ ಪಕ್ಷವೇ ಪೂರೈಸಬಲ್ಲದು ಎಂಬ ವಿಶ್ವಾಸವನ್ನು ಜನರು ವ್ಯಕ್ತಪಡಿಸಿದ್ದಾರೆ. ಈ ಸುಂದರ ನಗರದ ಅಭಿವೃದ್ಧಿಗೆ ಮತ್ತು ಜನರ ಜೀವನ ಸುಗಮತೆಯನ್ನು ಹೆಚ್ಚಿಸಲು ಬಿಜೆಪಿ ಸಂಪೂರ್ಣವಾಗಿ ಕೆಲಸ ಮಾಡಲಿದೆ” ಎಂದು ಹೇಳಿದ್ದಾರೆ.
ಈ ಐತಿಹಾಸಿಕ ಗೆಲುವಿಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರನ್ನು ಪ್ರಧಾನಿ ವಿಶೇಷವಾಗಿ ಶ್ಲಾಘಿಸಿದ್ದು, ಜನರ ನಡುವೆ ಕೆಲಸ ಮಾಡಿ ಈ ಅದ್ಭುತ ಫಲಿತಾಂಶವನ್ನು ತಂದುಕೊಟ್ಟ ಎಲ್ಲಾ ಶ್ರಮಶೀಲ ಬಿಜೆಪಿ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತಲೆಮಾರುಗಳಿಂದ ಕೇರಳದಲ್ಲಿ ತಳಮಟ್ಟದಲ್ಲಿ ಹೋರಾಟ ನಡೆಸಿದ ಕಾರ್ಯಕರ್ತರ ಪರಿಶ್ರಮ ಮತ್ತು ತ್ಯಾಗವನ್ನು ಇಂದು ಸ್ಮರಿಸುವ ದಿನವಾಗಿದೆ. ನಮ್ಮ ಕಾರ್ಯಕರ್ತರು ನಮ್ಮ ಶಕ್ತಿ ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa