
ನವದೆಹಲಿ, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ಇಂದಿನಿಂದ ಮೂರು ದಿನಗಳ ಕಾಲ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ್ ವಿನಾಯಕ ದಾಮೋದರ್ ಸಾವರ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಡಾ. ಭಾಗವತ್ ಇಂದು ಶ್ರೀ ವಿಜಯಪುರಕ್ಕೆ ಆಗಮಿಸ, ಸಂಜೆ ವೇಳೆ ಸಂಘದ ಅಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಸಂಘಟನೆಗೆ ಸಂಬಂಧಿಸಿದ ಸಭೆಯನ್ನು ನಡೆಸಲಿದ್ದಾರೆ. ಡಿಸೆಂಬರ್ 12 ರಂದು ದಕ್ಷಿಣ ಅಂಡಮಾನ್‌ನ ಬಿಯೋಡ್ನಾಬಾದ್‌ನಲ್ಲಿ ಸ್ಥಾಪಿಸಿರುವ ವೀರ್ ಸಾವರ್ಕರ್ ಅವರ ಪ್ರತಿಮೆಯನ್ನು ಅವರು ಅನಾವರಣಗೊಳಿಸಲಿದ್ದಾರೆ.
ನಂತರ ಪೋರ್ಟ್ ಬ್ಲೇರ್‌ನ ಡಾ. ಬಿ.ಆರ್. ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಸಾವರ್ಕರ್ ಅವರ ವಿಚಾರಧಾರೆಯನ್ನು ಆಧರಿಸಿದ ಗೀತೆಯನ್ನು ಡಾ. ಭಾಗವತ್ ಬಿಡುಗಡೆ ಮಾಡಲಿದ್ದಾರೆ.
ಡಿಸೆಂಬರ್ 13 ರಂದು ಸಂಘದ ಮುಖ್ಯಸ್ಥರು ಶ್ರೀ ವಿಜಯಪುರದ ನೇತಾಜಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಬ್ರಿಟಿಷರ ಕಾಲದಲ್ಲಿ 'ಕಾಲಾ ಪಾನಿ' ಶಿಕ್ಷೆಯನ್ನು ಅನುಭವಿಸಿದ ವೀರ ಸಾವರ್ಕರ್, 1911 ರ ಜುಲೈ 4 ರಿಂದ 1921 ರ ಮೇ 21 ರವರೆಗೆ ಅಂಡಮಾನ್‌ನ ಸೆಲ್ಯುಲಾರ್ ಜೈಲಿನಲ್ಲಿ ಬಂಧಿತರಾಗಿದ್ದರು ಎಂಬುದು ಇತಿಹಾಸದ ಮಹತ್ತರ ಅಂಶವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa