
ಕೋಲಾರ, ೧೦ ಡಿಸೆಂಬರ್(ಹಿ.ಸ) :
ಆ್ಯಂಕರ್ : ಜೆಡಿಎಸ್ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ತಮ್ಮಂಥ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವುದಕ್ಕೆ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಂಟಿಂಗ್ಸ್ ಕಟ್ಟುವುದರಿಂದ ಹಿಡಿದು ಸುಮಾರು ೪೦ ವರ್ಷಗಳಿಂದ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ನಿನ್ನೆ ಮೊನ್ನೆ ಬಂದವರ ಜೊತೆ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಚರ್ಚೆ ನಡೆಸಲಾಗುತ್ತಿದೆ. ನಮ್ಮಂಥವರನ್ನು ಸೌಜನ್ಯಕ್ಕೂ ಕರೆದು ಮಾತನಾಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ನನ್ನಷ್ಟು ಹಿರಿಯ ಕಾರ್ಯಕರ್ತರು ಯಾರೂ ಇಲ್ಲ. ಬೇಕಾದರೆ ಸವಾಲು ಹಾಕುತ್ತೇನೆ. ನನಗೆ ಜಿಲ್ಲಾ ಅಧ್ಯಕ್ಷ ಸ್ಥಾನ ಕೊಡದಿದ್ದರೂ ಪರವಾಗಿಲ್ಲ. ಪಕ್ಷದ ನಿಷ್ಠಾವಂತರಿಗೆ ಕೊಡಿ. ಆದರೆ, ನಿಷ್ಠೆ ಇಲ್ಲದವವರಿಗೆ ಮಣೆ ಹಾಕುವ ಪ್ರಯತ್ನ ನಡೆಯುತ್ತಿದೆ. ಪಕ್ಷದ ಬಗ್ಗೆ ಕಾಳಜಿ ಇಲ್ಲದವರಿಗೆ ಕೊಟ್ಟೇನು ಪ್ರಯೋಜನ? ಹಣ ಇದ್ದವರಿಗೆ ಸ್ಥಾನಮಾನ ನೀಡಿದರೆ ಪಕ್ಷಕ್ಕೆ ಉಪಯೋಗ ಆಗುವುದಿಲ್ಲ. ತತ್ವ, ಸಿದ್ಧಾಂತ ಹೊಂದಿರಬೇಕು, ಪಕ್ಷದ ವಿಚಾರದಲ್ಲಿ ನಿಯತ್ತು ಇರಬೇಕು. ಆದರೆ, ನಿಯತ್ತು ಇಲ್ಲದವರಿಗೆ ಪಟ್ಟ ಕಟ್ಟಲು ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ಜಿಲ್ಲೆಯಲ್ಲಿ ಒಮ್ಮೆಯೂ ಜೆಡಿಎಸ್ ಸಭೆ ನಡೆದಿಲ್ಲ. ಸಂಸದರಿದ್ದಾರೆ, ಇಬ್ಬರು ಶಾಸಕರಿದ್ದಾರೆ, ಒಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಎಲ್ಲರನ್ನೂ ಒಟ್ಟುಗೂಡಿಸಿ ಸಭೆ ನಡೆಸಿಲ್ಲ. ನಾನು ೧೯೮೯ರಿಂದ ಈ ಪಕ್ಷದಲ್ಲಿ ಇದ್ದೇನೆ. ಆಗಿನಿಂದಲೂ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ, ಹೋರಾಟ ಮಾಡಿಕೊಂಡು ಬಂದಿದ್ದೇನೆ. ಯಾರೂ ಇಲ್ಲದಿದ್ದಾಗಲೂ ಪಕ್ಷದ ಬಾವುಟ ಹಿಡಿದಿದ್ದೆವು. ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ತುಂಬಾ ನೋವಾಗುತ್ತದೆ ಎಂದು ಹೇಳಿದ್ದಾರೆ.
ಎಚ್.ಡಿ.ದೇವೇಗೌಡರ ಬಗ್ಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಟೀಕಿಸಿದ್ದಾರೆ. ನಾನು ಆ ಬಗ್ಗೆ ದನಿ ಎತ್ತಿ ಖಂಡಿಸಿದೆ. ಆದರೆ, ಜಿಲ್ಲೆಯ ಜೆಡಿಎಸ್‌ನ ಒಬ್ಬರೂ ಬಾಯಿ ಬಿಚ್ಚಲಿಲ್ಲ. ಅವರಿಗೆ ತಾಕತ್ತು ಇಲ್ಲವೇ? ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನೇ ಟೀಕಿಸಿ ಮಾತನಾಡಿದಾಗಲೂ ಏಕೆ ರೋಷ ಬರಲಿಲ್ಲ? ಇಬ್ಬರು ಶಾಸಕರು, ಒಬ್ಬ ಸಂಸದ, ವಿಧಾನ ಪರಿಷತ್ ಸದಸ್ಯರಿದ್ದು ಏನು ಪ್ರಯೋಜನ? ಪಕ್ಷ ಹಾಗೂ ವರಿಷ್ಠರ ಮೇಲಿನ ಅಭಿಮಾನ ಎಲ್ಲಿ ಹೋಯಿತು?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರಾಗಬಹುದು, ಕುಮಾರಣ್ಣ, ನಿಖಿಲ್ ಕುಮಾರಸ್ವಾಮಿ, ಜೆ.ಕೆ.ಕೃಷ್ಣಾರೆಡ್ಡಿ ಆಗಬಹುದು. ದಯವಿಟ್ಟು ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಿಲ್ಲೆಯ ಮುಖಂಡರ ಸಭೆ ಕರೆದು ಮುಕ್ತವಾಗಿ ಚರ್ಚಿಸಬೇಕು. ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆನಂತರ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ತಮ್ಮ ಇಷ್ಟದಂತೆ ಆಯ್ಕೆ ಮಾಡುವುದು, ನಿಷ್ಠಾವಂತರನ್ನು ಕಡೆಗಣಿಸುವುದು, ದುಡ್ಡಿದ್ದವರಿಗೆ ಮಣೆ ಹಾಕುವ ಕೆಲಸ ಮಾಡಿದರೆ ಜಿಲ್ಲೆಯಲ್ಲಿ ಗುಂಪುಗಾರಿಕೆ ನಡೆಯುತ್ತದೆ. ಪಕ್ಷ ಈಗಲೇ ಸಮಸ್ಯೆಯಲ್ಲಿದೆ. ಮುಂದೆ ಆ ಸಮಸ್ಯೆ ದೊಡ್ಡದಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಇರುವ ಎರಡು ಸ್ಥಾನ ಉಳಿಸಿಕೊಳ್ಳುವುದೂ ಕಷ್ಟವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ವಿಚಾರದಲ್ಲಿ ಒಂದೂ ಹೋರಾಟ ನಡೆದಿಲ್ಲ. ಇನ್ನೆಲ್ಲಿ ಪಕ್ಷ ಸಂಘಟನೆ ಸಾಧ್ಯ? ಆಡಳಿತ ಪಕ್ಷದ ವಿರುದ್ಧ ಹೋರಾಟ ನಡೆಸಬೇಕು. ಜಿಲ್ಲೆ ಹಾಗೂ ತಾಲ್ಲೂಕುವಾರು ಸಭೆ ನಡೆಸಿ ಸಂಘಟನೆ ಕುರಿತು ಚರ್ಚಿಸಬೇಕು ಎಂದೂ ಸಲಹೆ ನೀಡಿದ್ದಾರೆ.
ನಮ್ಮ ಉದ್ದೇಶ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು. ಜಿಲ್ಲೆಯಲ್ಲಿ ಆರಕ್ಕೆ ಆರೂ ಸ್ಥಾನ ಗೆಲ್ಲಬೇಕು. ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಅದಕ್ಕೆ ಸಿದ್ಧವಾಗಬೇಕು. ಈ ನಿಟ್ಟಿನಲ್ಲಿ ಮುಂದಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು, ಸಂಘಟನೆಗೆ ಒತ್ತು ನೀಡಬೇಕು, ಈ ಬಗ್ಗೆ ರಾಜ್ಯಮಟ್ಟದ ನಾಯಕರು ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಚಿತ್ರ ; ಬಣಕನಹಳ್ಳಿ ನಟರಾಜ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್