ಮಹಿಳಾ ನೌಕರರ ಮಾಸಿಕ ರಜೆ ; ಸರ್ಕಾರದ ಆದೇಶಕ್ಕೆ ತಡೆ ನಿರಾಕರಿಸಿದ ಹೈಕೋರ್ಟ್
ಬೆಂಗಳೂರು, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯದ ಮಹಿಳಾ ನೌಕರರಿಗೆ ಋತುಚಕ್ರದ ಅವಧಿಯಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ಕಲ್ಪಿಸುವ ರಾಜ್ಯ ಸರ್ಕಾರದ ಅಧಿಸೂಚನೆಗೆ ತಡೆ ನೀಡುವುದನ್ನು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲುಗಳ
High court


ಬೆಂಗಳೂರು, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯದ ಮಹಿಳಾ ನೌಕರರಿಗೆ ಋತುಚಕ್ರದ ಅವಧಿಯಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ಕಲ್ಪಿಸುವ ರಾಜ್ಯ ಸರ್ಕಾರದ ಅಧಿಸೂಚನೆಗೆ ತಡೆ ನೀಡುವುದನ್ನು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲುಗಳ ಸಂಘ ಹಾಗೂ ಅವಿರತ ಎಎಫ್‌ಎಲ್‌ ಕನೆಕ್ಟಿವಿಟಿ ಸಿಸ್ಟಮ್ಸ್ ಲಿಮಿಟೆಡ್ ಸಲ್ಲಿಸಿದ್ದ ಮನವಿಗಳನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಪೀಠ ತಿರಸ್ಕರಿಸಿತು.

ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, “ಮಹಿಳಾ ನೌಕರರ ಹಿತದೃಷ್ಟಿಯಿಂದ ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಜಾರಿಯಾಗದ ಪ್ರಗತಿಪರ ಕ್ರಮವನ್ನು ಕರ್ನಾಟಕ ಜಾರಿಗೊಳಿಸಿದೆ” ಎಂದರು. ಅಧಿಸೂಚನೆಗೆ 72 ಆಕ್ಷೇಪಣೆಗಳು ಬಂದಿದ್ದು, ಎಲ್ಲವನ್ನೂ ಪರಿಶೀಲಿಸಲಾಗಿದೆ ಎಂದು ಅವರು ತಿಳಿಸಿದರು.

ಸಂವಿಧಾನದ 42ನೇ ವಿಧಿ ಕೆಲಸದ ಸ್ಥಳದಲ್ಲಿ ಮಾನವೀಯ ಪರಿಸ್ಥಿತಿ ಹಾಗೂ ಮಾತೃತ್ವದ ರಕ್ಷಣೆಗಾಗಿ ಸರ್ಕಾರಕ್ಕೆ ಆದೇಶ ಹೊರಡಿಸುವ ಅಧಿಕಾರ ನೀಡುತ್ತದೆ. ಜೊತೆಗೆ, 15(3)ನೇ ವಿಧಿಯ ಪ್ರಕಾರ ಮಹಿಳೆಯರ ಹಿತದಲ್ಲಿ ರಾಜ್ಯ ಸರ್ಕಾರ ಜನಪರ ಕ್ರಮ ಕೈಗೊಳ್ಳಬಹುದೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದೂ ಎಜಿ ವಾದಿಸಿದರು. ಸರ್ಕಾರದ ಆದೇಶವು ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸುತ್ತದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲ ಬಿ.ಕೆ. ಪ್ರಶಾಂತ್, ವಿಚಾರಣೆ ಮುಗಿಯುವವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ವಿನಂತಿಸಿದರು. ಈಗಾಗಲೇ ಸಂಬಂಧಿತ ಹಲವು ಕಾನೂನುಗಳು ಅಸ್ತಿತ್ವದಲ್ಲಿದ್ದು, ಅವುಗಳಲ್ಲಿ ತಿದ್ದುಪಡಿ ಮಾಡದೆ ಕಾರ್ಯಕಾರಿ ಆದೇಶದ ಮೂಲಕ ಶಾಸನಬದ್ಧ ಕ್ರಮವನ್ನು ಮೀರಿ ಸರ್ಕಾರ ಮುಂದೆ ಸಾಗಬಹುದೇ ಎಂಬ ಪ್ರಶ್ನೆಯನ್ನು ಅವರು ಎತ್ತಿದರು.

ಪೀಠವು, ಇದು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರಕರಣವಾಗಿದ್ದು, ತುರ್ತು ತಡೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಅರ್ಜಿದಾರರು ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ಸರ್ಕಾರದ ಪ್ರತಿವಾದಕ್ಕೆ ಪ್ರತ್ಯುತ್ತರ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande