

ಕಾರಟಗಿ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ, ತಾಲೂಕು ಆಡಳಿತ ಕಾರಟಗಿ ಮತ್ತು ಸಿದ್ದಾಪುರ ಗ್ರಾಮ ಪಂಚಾಯತ್‌ಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸಿದ್ದಾಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು(ಸಾಂಸ್ಥಿಕ) ರವಿಕುಮಾರ ಪವಾರ ಅವರು ಮಾತನಾಡಿ, ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮೂಲಕ ಮಕ್ಕಳಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ನವೆಂಬರ್-2025 ರಿಂದ ಜನವರಿ-2026 ರವರೆಗೆ 10 ವಾರಗಳ ಕಾಲ ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲಾಗುತ್ತಿದೆ.
ಮಕ್ಕಳ ಸಮಸ್ಯೆಗಳ ನಿವಾರಣೆಗಾಗಿ ಮತ್ತು ಮಕ್ಕಳಿಗಾಗಿ ಗ್ರಾಮ ಪಂಚಾಯತ್‌ನ ಒಟ್ಟು ಅನುದಾನದಲ್ಲಿ ಶೇ.5 ಅನುದಾನವನ್ನು ಮೀಸಲಿಟ್ಟು, ಸ್ಥಳೀಯವಾಗಿಯೇ ಅಗತ್ಯವಾದ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶವನ್ನು ಕಲ್ಪಿಸಿದೆ. ಆದ್ದರಿಂದ ನಿಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂಡುಬರುವ ಮಕ್ಕಳ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ, ಚರ್ಚೆ ಕೈಗೊಳ್ಳಲು ತಾವುಗಳೆಲ್ಲರೂ ಈ ಗ್ರಾಮ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಾಗೂ ಮಕ್ಕಳ ಮೇಲಿನ ಹಲ್ಲೆ, ದೌರ್ಜನ್ಯ, ಕಿರುಕುಳ ಕಂಡುಬ0ದಲ್ಲಿ ಅಥವಾ ಮಕ್ಕಳು ಸಂಕಷ್ಟಕರ ಪರಸ್ಥಿತಿಯಲ್ಲಿ ಸಿಲುಕಿರುವುದು, ಸಿಲುಕುವ ಸಾಧ್ಯತೆಯು ಇದ್ದಲ್ಲಿ ಮಕ್ಕಳ ಸಹಾಯವಾಣಿ-1098 ಅಥವಾ ತುರ್ತು ಸಹಾಯವಾಣಿ-112 ಗೆ ಕರೆ ಮಾಡಿ ಎಂದು ತಿಳಿಸಿದರು.
ಸಿದ್ದಾಪುರ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶಿವಗಂಗಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿದ್ದಾಪುರ ಗ್ರಾಮ ಪಂಚಾಯತ್‌ನ ಸದಸ್ಯರಾದ ಅಜುಮುದ್ದೀನ, ಲಕ್ಷಿದೇವಿ, ಪ್ರಿಯಾಂಕ ಪವಾರ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉಮೇಶ, ಉಪಾಧ್ಯಕ್ಷರಾದ ಚಂದ್ರಮ್ಮ ಹನುಮಂತಪ್ಪ, ಮುಖ್ಯೋಪಾಧ್ಯಾಯರಾದ ಶಾಂತಕುಮಾರ ಮತ್ತು ಶಿಕ್ಷಕರು ಹಾಗೂ ವಿವಿಧ ಶಾಲೆ ಮತ್ತು ಕಾಲೇಜುಗಳ ಮಕ್ಕಳು ಭಾಗವಹಿಸಿದ್ದರು. ಸಿದ್ದಾಪುರ ಗ್ರಾಮ ಪಂಚಾಯತನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಯೋತಿ ಸ್ವಾಗತಿಸಿ, ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್