ಬೆಳೆ ಹಾನಿ, ಮಳೆ ಹಾನಿ ಪರಿಹಾರ: ಶ್ವೇತಪತ್ರ ಹೊರಡಿಸಲು ಆರ್‌.ಅಶೋಕ ಆಗ್ರಹ
ಬೆಳಗಾವಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್‌ ಸರ್ಕಾರ ಪರಿಹಾರ ನೀಡಿಲ್ಲ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಶ್ವೇತಪತ್ರ ಬಿಡುಗಡೆ ಮಾ
Session


ಬೆಳಗಾವಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್‌ ಸರ್ಕಾರ ಪರಿಹಾರ ನೀಡಿಲ್ಲ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ಜನರು ಗಂಜಿ ಕೇಂದ್ರದಲ್ಲಿರುತ್ತಾರೆ. ಆಗ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಕಾಂಗ್ರೆಸ್‌ ಸರ್ಕಾರದಲ್ಲಿ, 2013-2014 ರ ಜುಲೈನಲ್ಲಿ 9 ತಿಂಗಳಾದ ನಂತರ, 2014-15 ರಲ್ಲಿ 8 ತಿಂಗಳ ನಂತರ, 2015-16 ರಲ್ಲಿ 7 ತಿಂಗಳ ನಂತರ ಪರಿಹಾರ ನೀಡಲಾಗಿದೆ. ನಮ್ಮ ಬಿಜೆಪಿ ಸರ್ಕಾರದಲ್ಲಿ 2019-20 ರ ಆಗಸ್ಟ್‌ ಪ್ರವಾಹದ ನಂತರ ಎರಡೇ ತಿಂಗಳಲ್ಲಿ ಪ್ರವಾಹ ನೀಡಲಾಗಿದೆ. 2022 ರ ಪ್ರವಾಹದಲ್ಲಿ ಎರಡು ತಿಂಗಳಲ್ಲಿ, 2021-22 ರ ಪ್ರವಾಹದಲ್ಲಿ ಎರಡು ತಿಂಗಳಲ್ಲಿ, 2023 ರ ಪ್ರವಾಹದಲ್ಲಿ ಒಂದೇ ತಿಂಗಳಲ್ಲಿ ಪ್ರವಾಹ ನೀಡಲಾಗಿತ್ತು. ಇಷ್ಟು ವಿಳಂಬ ಮಾಡಿ ಪರಿಹಾರ ನೀಡಬಾರದು ಎಂದರು.

ಎನ್‌ಡಿಆರ್‌ಎಫ್‌ ನಿಯಮ ಪ್ರಕಾರ ಮನೆ ಹಾನಿಗೆ 95,000 ರೂ. ನೀಡಲಾಗುತ್ತದೆ. ಬಿಜೆಪಿ ರಾಜ್ಯ ಸರ್ಕಾರದಿಂದ ನಾಲ್ಕು ಲಕ್ಷ ಸೇರಿಸಿ ಒಟ್ಟು 5 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಉತ್ತರ ಕರ್ನಾಟಕದಲ್ಲಿ ಮನೆ ಹಾನಿಗೆ ಈ ರೀತಿ ಪರಿಹಾರ ನೀಡದೆ, ಕೇಂದ್ರದ ಪಾಲನ್ನು ಮಾತ್ರ ನೀಡುತ್ತಿದೆ. ಕೇವಲ 95,000 ರೂ. ನಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದಿಂದ 6,651.15 ಕೋಟಿ ರೂ. ಬೆಳೆ ಹಾನಿ ಪರಿಹಾರವನ್ನು 51.95 ಲಕ್ಷ ರೈತರ ಬ್ಯಾಂಕ್‌ ಖಾತೆಗೆ ಹಾಕಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಡಿಬಿಟಿ ಬದಲು ಫ್ರೂಟ್‌ ತಂತ್ರಾಂಶ ತಂದು ನಾಲ್ಕು ತಿಂಗಳು ವಿಳಂಬ ಮಾಡಿದೆ. ಈಗ ಪರಿಹಾರ ನೀಡಲು ತಡವಾಗುತ್ತಿದೆ ಎಂದರು.

2014-2022 ರವರೆಗೆ ನರೇಂದ್ರ ಮೋದಿ ಸರ್ಕಾರ 11,603 ಕೋಟಿ ರೂ. ಪರಿಹಾರ ನೀಡಿದ್ದರೆ, ಮನಮೋಹನ್‌ ಸಿಂಗ್‌ ಸರ್ಕಾರ 3,233 ಕೋಟಿ ರೂ. ನೀಡಿತ್ತು. ಅಂದರೆ ನಾಲ್ಕು ಪಟ್ಟು ಪರಿಹಾರ ದೊರೆತಿದೆ. ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ನೀಡಲಿ ಎಂದು ಕೇಳಿರಲಿಲ್ಲ. ರಾಜ್ಯದ ಖಜಾನೆಯಿಂದಲೇ ಮೊದಲು ಹಣ ನೀಡಲಾಗಿತ್ತು. ಕೇಂದ್ರ ಸರ್ಕಾರಕ್ಕಾಗಿ ಕಾಯಬಾರದು ಎಂಬುದು ನನ್ನ ಅಭಿಪ್ರಾಯ. ಅದೇ ರೀತಿ ಈಗಲೂ ಕಾಂಗ್ರೆಸ್‌ ಸರ್ಕಾರ ಖಜಾನೆಯಿಂದ ಹಣ ತೆಗೆದು ನೀಡಲಿ ಎಂದು ಆಗ್ರಹಿಸಿದರು.

ಕಲಬುರ್ಗಿ, ಬೀದರ್‌, ವಿಜಯಪುರ, ಯಾದಗಿರಿ ಮೊದಲಾದ ಜಿಲ್ಲೆಗಳಲ್ಲಿ 117 ಕ್ಕೂ ಅಧಿಕ ಹಳ್ಳಿಗಳು ಜಲಾವೃತವಾಗಿದೆ. 20,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿ, 14.58 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. 2,890 ಶಾಲೆಗಳಿಗೆ ಹಾನಿಯಾಗಿದೆ. ಮೈಸೂರಿನಲ್ಲಿ ದಸರಾ ಆಚರಿಸುತ್ತಿದ್ದರೆ, ಉತ್ತರ ಕರ್ನಾಟಕದ ಜನರು ನೀರಿನಲ್ಲಿದ್ದರು. ನಾವೆಲ್ಲರೂ ಕಾರಿನಲ್ಲಿ ಹೋಗಿ ಭೇಟಿ ಮಾಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡಿದರು. ಅದರ ಬದಲು ಕಾರಿನಲ್ಲೇ ಬಂದು ಜನರನ್ನು ಭೇಟಿ ಮಾಡಬಹುದಿತ್ತು. ಎಲ್ಲವೂ ಸರಿ ಇದೆ ಎಂದು ಐಎಎಸ್‌ ಅಧಿಕಾರಿಗಳು ಹೇಳುತ್ತಾರೆ. ಮುಖ್ಯಮಂತ್ರಿ ಪ್ರತಿ ಹಳ್ಳಿಗೆ ಹೋಗಬೇಕಿತ್ತು. ಅಧಿಕಾರಿಗಳು ಕೂಡ ಸಮೀಕ್ಷೆಗಾಗಿ ಗ್ರಾಮಗಳಿಗೆ ಬಂದಿಲ್ಲ. ಅನೇಕ ಕಡೆ ಪ್ರವಾಹ ಬಂದಿಲ್ಲ ಎಂದು ತಪ್ಪು ವರದಿ ನೀಡಿದ್ದಾರೆ ಎಂದರು.

ಮಂಡಿ ಉದ್ದ ಕಬ್ಬು ಎದೆಮಟ್ಟ ಸಾಲ ಎಂಬ ಮಾತಿನಂತೆ ಕಬ್ಬು ಬೆಳೆಗಾರರ ಪರಿಸ್ಥಿತಿ ಇದೆ. ರಾಜ್ಯದಲ್ಲಿ 41 ಲಕ್ಷ ಟನ್‌ ಕಬ್ಬು ಉತ್ಪಾದನೆಯಾಗುತ್ತಿದ್ದು, 9.81 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. 81 ಸಕ್ಕರೆ ಕಾರ್ಖಾನೆಗಳಿದ್ದು ಎಲ್ಲವೂ ನಷ್ಟದಲ್ಲಿವೆ ಎನ್ನುತ್ತಿದ್ದಾರೆ. ಹೊಸದಾಗಿ 31 ಕಾರ್ಖಾನೆ ಆರಂಭಕ್ಕೆ ಅರ್ಜಿ ಬಂದಿದೆ. ತೂಕ ಯಂತ್ರದಲ್ಲಿ ಮೋಸವಾಗುತ್ತಿದ್ದು, ಶೇ.50 ರಷ್ಟು ಮಾತ್ರ ತೂಕ ಯಂತ್ರಗಳನ್ನು ಅಳವಡಿಸಲಾಗಿದೆ. ಯಂತ್ರ ಕಟಾವಿನಲ್ಲಿ ಶೇ.6 ರಷ್ಟು ಕಡಿತವಾಗುತ್ತಿದೆ. ಹಳೆ ಮಾದರಿ ಆರ್‌ಎಸ್‌ಪಿ, ಎಸ್‌ಎಪಿ ಕಡೆ ಸರ್ಕಾರ ಗಮನ ಕೊಡಬೇಕಿದೆ. ಮುಧೋಳದಲ್ಲಿ 240 ಟ್ರಾಕ್ಟರ್‌ಗಳಿಗೆ ಬೆಂಕಿ ಬಿದ್ದು 1,033 ಟನ್‌ ಕಬ್ಬು ಭಸ್ಮ ಆಗಿತ್ತು. ಪೊಲೀಸ್‌ ಇಲಾಖೆಯ ಭಯವಿದ್ದಿದ್ದರೆ ಇಷ್ಟೆಲ್ಲ ಆಗಲು ಸಾಧ್ಯವಿತ್ತೇ? 32 ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯಭಾಗದ ರೈತ ಲಕ್ಕಪ್ಪ ಗುಣಕಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಯಾವುದೇ ಸಚಿವರು ಭೇಟಿ ಮಾಡಲಿಲ್ಲ ಎಂದು ಆರೋಪಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande