
ಬೆಂಗಳೂರು, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಶಾಂತಿಯುತ ಧರಣಿಯನ್ನು ಪೊಲೀಸರು ಬಲಪ್ರಯೋಗದಿಂದ ಹತ್ತಿಕ್ಕಿದ ರಾಜ್ಯ ಸರ್ಕಾರದ ಕ್ರಮವನ್ನು ಎಸ್‌ಯುಸಿಐ(ಸಿ) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಸರ್ಕಾರದ ಕ್ರಮವನ್ನು “ಅಮಾನವೀಯ ಹಾಗೂ ದಮನಕಾರಿ” ಎಂದು ಹೇಳಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಖಾಲಿ ಹುದ್ದೆಗಳ ಭರ್ತಿ, ವಯೋಮಿತಿ ಐದು ವರ್ಷ ಹೆಚ್ಚಳ, ಪರೀಕ್ಷಾ ಶುಲ್ಕ ಕಡಿತ, ಭ್ರಷ್ಟಾಚಾರ ತಡೆ, ಪರೀಕ್ಷೆಗೆ ತೆರಳುವವರಿಗೆ ಉಚಿತ ಸಾರಿಗೆ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿದ್ದರು. ಮಾನವ ಹಕ್ಕುಗಳ ದಿನದಂದೇ ಯುವಜನರ ಧ್ವನಿಯನ್ನು ಮುಚ್ಚಲು ರಾಜ್ಯ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿರುವುದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೊಲೀಸರ ಬೆದರಿಕೆಗಳಿಗೆ ಮಣಿಯದೆ ಹೋರಾಟ ನಡೆಸಿದ ಯುವಕರಿಗೆ ಪಕ್ಷವು “ಕ್ರಾಂತಿಕಾರಿ ಅಭಿನಂದನೆ” ಸಲ್ಲಿಸಿದೆ. ಬಿಜೆಪಿ ಪರ್ಯಾಯವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೇ ದಮನಕಾರಿ ನಡೆ ತೋರಿರುವುದು ಶೋಚನೀಯ ಎಂದಿದ್ದಾರೆ.
ಬಂಧಿತರನ್ನು ತಕ್ಷಣ ಬೇಷರತ್ ಬಿಡುಗಡೆ ಮಾಡಬೇಕು ಹಾಗೂ ರಾಜ್ಯ–ಕೇಂದ್ರ ಸರ್ಕಾರಗಳು ಹೋರಾಟಗಾರರೊಂದಿಗೆ ಮಾತುಕತೆ ಆರಂಭಿಸಿ ನ್ಯಾಯಯುತ ಆಗ್ರಹಗಳನ್ನು ಈಡೇರಿಸಬೇಕು ಎಂದು ಎಸ್‌ಯುಸಿಐ(ಸಿ) ಒತ್ತಾಯಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa