
ನವದೆಹಲಿ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸ್ವಾತಂತ್ರ್ಯ ಹೋರಾಟಗಾರ, ಚಿಂತಕ, ಬುದ್ಧಿಜೀವಿ ಮತ್ತು ರಾಜ್ಯಕಾರಣಿ ಸಿ. ರಾಜಗೋಪಾಲಾಚಾರಿ (ರಾಜಾಜಿ) ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಬುಧವಾರ ಅವರಿಗೆ ಗೌರವ ಸಲ್ಲಿಸಿದರು.
ರಾಜಾಜಿ ಇಪ್ಪತ್ತನೇ ಶತಮಾನದ ಅತ್ಯಂತ ಪ್ರಕಾಶಮಾನ ಚಿಂತಕರಲ್ಲಿ ಒಬ್ಬರಾಗಿದ್ದು, ಸಮಾಜದಲ್ಲಿ ಮೌಲ್ಯಗಳ ಸ್ಥಾಪನೆ ಮತ್ತು ಮಾನವ ಘನತೆಗೆ ಮಹತ್ವ ನೀಡಿದ ವ್ಯಕ್ತಿತ್ವವೆಂದು ಪ್ರಧಾನ ಮಂತ್ರಿ ಪ್ರಶಂಸಿಸಿದ್ದಾರೆ.
ಪ್ರಧಾನಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸನಲ್ಲಿ, ಸ್ವಾತಂತ್ರ್ಯ ಹೋರಾಟ ಹಾಗೂ ಸಾರ್ವಜನಿಕ ಜೀವನಕ್ಕೆ ರಾಜಾಜಿ ನೀಡಿದ ಅಪಾರ ಕೊಡುಗೆಯನ್ನು ದೇಶ ಕೃತಜ್ಞತೆಯಿಂದ ಸ್ಮರಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರ, ಚಿಂತಕ, ವಿದ್ವಾಂಸ ಮತ್ತು ರಾಜನೀತಿಜ್ಞ ಈ ಎಲ್ಲ ಗುಣಗಳು ರಾಜಾಜಿ ಅವರ ಜೀವನವನ್ನು ಅನನ್ಯಗೊಳಿಸುತ್ತವೆ,” ಎಂದು ಬರೆದಿದ್ದಾರೆ.
ರಾಷ್ಟ್ರ ನಿರ್ಮಾಣಕ್ಕೆ ರಾಜಾಜಿ ನೀಡಿದ ಮಾರ್ಗದರ್ಶನ ಮತ್ತು ಅವರ ವಿಶಿಷ್ಟ ಉದಾರ ದೃಷ್ಟಿಕೋನ ದೇಶಕ್ಕೆ ಹೊಸ ಚೈತನ್ಯ ನೀಡಿದೆಯೆಂದು ಪ್ರಧಾನಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಕೆಲವು ಸ್ಮರಣಗಳನ್ನು ಹಂಚಿಕೊಂಡ ಅವರು, ರಾಜಾಜಿ ಅವರ ಜೀವನದ ಐತಿಹಾಸಿಕ ಛಾಯಾಚಿತ್ರಗಳು ಮತ್ತು ದಾಖಲೆಗಳಿದ್ದ ಆರ್ಕೈವ್ ಕುರಿತ ಮಾಹಿತಿಯನ್ನೂ ಉದಾಹರಿಸಿದರು.
ಈ ಆರ್ಕೈವ್‌ನಲ್ಲಿ ರಾಜಗೋಪಾಲಾಚಾರಿ ಅವರ ಯೌವನದ ಛಾಯಾಚಿತ್ರ, ಕ್ಯಾಬಿನೆಟ್ ಸಚಿವರಾಗಿ ನೇಮಕಗೊಂಡ ಅಧಿಸೂಚನೆ, 1920ರ ದಶಕದ ಸ್ವಯಂಸೇವಕರೊಡನೆ ತೆಗೆದ ಫೋಟೋ ಹಾಗೂ ಮಹಾತ್ಮಾ ಗಾಂಧಿ ಜೈಲಿನಲ್ಲಿದ್ದಾಗ ಅವರು ಸಂಪಾದಿಸಿದ 1922ರ ಯಂಗ್ ಇಂಡಿಯಾ ಆವೃತ್ತಿ ಸೇರಿದಂತೆ ಹಲವು ಅಪರೂಪದ ದಾಖಲೆಗಳಿರುವುದನ್ನು ಪ್ರಧಾನಿ ನೆನಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa