ಆರ್‌ಎಸ್‌ಎಸ್‌ ಪಥಸಂಚಲನದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ : ಗೃಹ ಸಚಿವರ ಲಿಖಿತ ಹೇಳಿಕೆ
ಬೆಳಗಾವಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರದ ವ್ಯಾಪ್ತಿಯ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ಮತ್ತು ಪಥಸಂಚಲನಗಳಿಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ನಾಯಕರಿಂದ, ವಿಶೇಷವಾಗಿ ಸಚಿವ ಪ್ರಿಯಾಂಕ್ ಖರ್ಗೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಈ ವರ್ಷ ರಾಜ್ಯದ
Answer


ಬೆಳಗಾವಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರದ ವ್ಯಾಪ್ತಿಯ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ಮತ್ತು ಪಥಸಂಚಲನಗಳಿಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ನಾಯಕರಿಂದ, ವಿಶೇಷವಾಗಿ ಸಚಿವ ಪ್ರಿಯಾಂಕ್ ಖರ್ಗೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಈ ವರ್ಷ ರಾಜ್ಯದಾದ್ಯಂತ ನಡೆದ ಆರ್‌ಎಸ್‌ಎಸ್ ಪಥಸಂಚಲನಗಳ ಕುರಿತು ಸರ್ಕಾರವೇ ಸ್ಪಷ್ಟನೆ ನೀಡಿದೆ. ರಾಜ್ಯದೆಲ್ಲೆಡೆ ಒಟ್ಟು 518 ಕಡೆ ಪಥಸಂಚಲನ ನಡೆದಿದ್ದು, ಯಾವುದೂ ಗಲಾಟೆ ಅಥವಾ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಿಲ್ಲ ಎಂದು ಸರ್ಕಾರ ವಿಧಾನ ಸಭೆಯಲ್ಲಿ ಲಿಖಿತವಾಗಿ ತಿಳಿಸಿದೆ.

ವಿಧಾನ ಸಭೆಯ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ, ಈ ವರ್ಷ ನಡೆದ ಆರ್‌ಎಸ್‌ಎಸ್ ಪಥಸಂಚಲನಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದಾರೆ, ಪಥಸಂಚಲನ ನಡೆದ ಯಾವುದೇ ಸ್ಥಳದಲ್ಲಿ ಉದ್ವಿಗ್ನತೆ, ದೊಂಬಿ ಅಥವಾ ಕೋಮು ಗಲಭೆ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸುವ ವೇಳೆ ಕಲಬುರಗಿ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಸಮಸ್ಯೆ ಯನ್ನು ಕಾರಣವಾಗಿ ನೀಡಿತ್ತು. ಆದರೆ ಇದೀಗ ಸರ್ಕಾರ ನೀಡಿರುವ ಉತ್ತರದಲ್ಲಿ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮದಿಂದ ಕಾನೂನು ಸುವ್ಯವಸ್ಥೆಗೆ ತೊಂದರೆ ಉಂಟಾಗಿಲ್ಲ ಎಂದು ಹೇಳಿದೆ . ಪ್ರಿಯಾಂಕ್ ಖರ್ಗೆಯ ತವರು ಜಿಲ್ಲೆಯಾದ ಕಲಬುರಗಿಯಲ್ಲೇ 51 ಪಥಸಂಚಲನಗಳು ನಡೆದಿದ್ದು, 6–7 ಸಾವಿರ ಸ್ವಯಂಸೇವಕರು ಭಾಗವಹಿಸಿದ್ದರೆ, ಅತಿ ಹೆಚ್ಚು ಪಥಸಂಚಲನಗಳು ಬೆಂಗಳೂರು ನಗರದಲ್ಲಿ 97 ದಾಖಲಾಗಿವೆ.

ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಗಣನೀಯ ಸಂಖ್ಯೆಯಲ್ಲಿ ಪಥಸಂಚಲನಗಳು ನಡೆದಿವೆ. ಉತ್ತರ ಕನ್ನಡದಲ್ಲಿ 45, ಬೀದರ್‌ನಲ್ಲಿ 41, ಬಾಗಲಕೋಟೆಯಲ್ಲಿ 33, ಶಿವಮೊಗ್ಗದಲ್ಲಿ 19, ವಿಜಯಪುರದಲ್ಲಿ 18, ಬೆಳಗಾವಿಯಲ್ಲಿ 17, ತುಮಕೂರು, ಚಿತ್ರದುರ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 11, ದಕ್ಷಿಣ ಕನ್ನಡ, ಉಡುಪಿ ಮತ್ತು ರಾಯಚೂರಿನಲ್ಲಿ ತಲಾ 10 ಪಥಸಂಚಲನಗಳು ನಡೆದಿವೆ ಎಂದು ಸರಕಾರ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande