ಗಂಗಾವತಿ : ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
ಗಂಗಾವತಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೊಲೆ ಆರೋಪದಲ್ಲಿ ಪೊಲೀಸ್ ಠಾಣೆಗೆ ಶರಣಾಗಿದ್ದ ಗಂಗಾವತಿಯ ನೂರ್ ಅಹ್ಮದ್ ತಂದೆ ಅಬ್ದುಲ್ ಬಾರಿ ಎಂಬ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾ
ಗಂಗಾವತಿ : ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ


ಗಂಗಾವತಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೊಲೆ ಆರೋಪದಲ್ಲಿ ಪೊಲೀಸ್ ಠಾಣೆಗೆ ಶರಣಾಗಿದ್ದ ಗಂಗಾವತಿಯ ನೂರ್ ಅಹ್ಮದ್ ತಂದೆ ಅಬ್ದುಲ್ ಬಾರಿ ಎಂಬ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಜೀವಾವಧಿ ಶಿಕ್ಷೆ ಹಾಗೂ ರೂ.4.5 ಲಕ್ಷಗಳ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಗಂಗಾವತಿಯ ಅಂಗಡಿ ಸಂಗಣ್ಣ ಕ್ಯಾಂಪ್ ಹಾಲಿ ವಸ್ತಿ ಎಚ್.ಆರ್.ಎಸ್. ಕಾಲೋನಿ ನಿವಾಸಿ ನೂರ್ ಅಹ್ಮದ್ ತಂದೆ ಅಬ್ದುಲ್ ಬಾರಿ ಎಂಬ ಆರೋಪಿಯ ಹೆಂಡತಿ ಮತ್ತು ಮೃತ ಮೌಲಾಹುಸೇನನ ಹೆಂಡತಿ ಇಬ್ಬರೂ ಖಾಸಾ ಅಕ್ಕ-ತಂಗಿಯರಾಗಿದ್ದು, ಆರೋಪಿ ನೂರ್ ಅಹ್ಮದ್‌ನು ಗಂಗಾವತಿಯ ಸೇವಾಲಾಲ್ ಕ್ರಾಸ್‌ನಲ್ಲಿ ಚಿಕನ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಗಂಗಾವತಿಯ ಹೆಚ್.ಆರ್.ಎಸ್. ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಘಟನೆಗಿಂತ ಕೆಲವು ತಿಂಗಳ ಮುಂಚೆ ತನ್ನ ಹೆಂಡತಿಯ ಅಕ್ಕನ ಗಂಡನಾದ ಮೃತ ಮೌಲಾಹುಸೇನ್‌ನನ್ನು ತನ್ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರಲು ಕರೆಯಿಸಿಕೊಂಡು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದನು.

ಘಟನೆಗಿಂತ 1 ದಿನ ಮುಂಚೆ ಆರೋಪಿ ಮತ್ತು ಮೃತನ ಹೆಂಡತಿಯರು ತಮ್ಮ ತವರು ಮನೆಯಾದ ಕಾರಟಗಿಗೆ ತೆರಳಿದ್ದು, ಆ ದಿನ ರಾತ್ರಿ ಆರೋಪಿ ಮತ್ತು ಆರೋಪಿಯ ಹೆಂಡತಿಯ ಮದ್ಯ ಮೊಬೈಲ್ ಫೋನ್‌ನಲ್ಲಿ ಜಗಳವಾಗಿದ್ದು, ಅದಕ್ಕೆ ಆರೋಪಿಯ ಹೆಂಡತಿಯು ತಲಾಖ್ ಕೇಳಿದ್ದಳು. ಇದಕ್ಕೆಲ್ಲಾ ಮೃತ ಮೌಲಾಹುಸೇನನೇ ತನ್ನ ಹೆಂಡತಿಗೆ ತನ್ನ ಬಗ್ಗೆ ಇಲ್ಲಸಲ್ಲದ್ದನ್ನೆಲ್ಲಾ ಹೇಳಿದ್ದಾನೆಂದು ಭಾವಿಸಿ ತನ್ನ ಮನೆಯಲ್ಲಿ ಮಲಗಿದ್ದ ಮೌಲಾಹುಸೇನನನ್ನು 2023ರ ಅಕ್ಟೋಬರ್ 3 ರಂದು ಜಾವ 5.30 ರ ಸುಮಾರಿಗೆ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿ ವ್ಯಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಕೊಲೆ ಮಾಡಿದ ಬಗ್ಗೆ ಸ್ಟೇಟಸ್ ಇಟ್ಟು ಗಂಗಾವತಿ ನಗರ ಪೊಲೀಸ್ ಠಾಣೆಗೆ ಶರಣಾಗಿದ್ದನು.

ಆರೋಪಿತನು ಭಾರತೀಯ ದಂಡ ಸಂಹಿತೆ ಕಲಂ 302 ಪ್ರಕಾರ ಅಪರಾಧವೆಸಗಿದ್ದು, ತನಿಖೆಯಿಂದ ಮತ್ತು ಸಾಕ್ಷಾö್ಯಧಾರಗಳಿಂದ ದೃಢಪಟ್ಟಿದ್ದರಿಂದ ಆರೋಪಿಯ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿಗಳಾದ ಅಡಿವೆಪ್ಪ ಗುದಿಕೊಪ್ಪ, ಮಂಜುನಾಥ ಎಸ್, ಆಂಜನೇಯ ಡಿ.ಎಸ್. ಮತ್ತು ಇನ್ಸ್ಪೆಕ್ಟರ್ ಪ್ರಕಾಶ ಮಾಳಿ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸಾಕ್ಷಿದಾರರ ಸಾಕ್ಷ ಮತ್ತು ದಾಖಲೆಗಳನ್ನು ಪರಿಶೀಲಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಆರೋಪಿಯು ತಪ್ಪಿತಸ್ಥ ಎಂದು ತೀರ್ಪು ನೀಡಿ, ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಕಲಂ 302 ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ 4,50,000/- ರೂಪಾಯಿ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದೆ. ದಂಡದ ಮೊತ್ತವನ್ನ ತೀರ್ಪಿನ ಮೂರು ತಿಂಗಳ ಒಳಗಾಗಿ ಪಾವತಿಸದೇ ಇದ್ದಲ್ಲಿ 1 ವರ್ಷ ಕಾರಗೃಹ ಶಿಕ್ಷೆ ಅನುಭವಿಸುವಂತೆ ಮತ್ತು ದಂಡದ 4 ಲಕ್ಷ ಮೊತ್ತವನ್ನು ಮೃತನ ತಾಯಿ, ಹೆಂಡತಿ, ಆರೋಪಿಯ ಹೆಂಡತಿ ಮತ್ತು ಮಗನಿಗೆ ಸಮಾನವಾಗಿ ಹಂಚಿಕೆಯಾಗುವAತೆ, ಉಳಿದ ರೂ.50,000/- ಹಣವನ್ನು ಸರಕಾರಕ್ಕೆ ಭರಿಸುವಂತೆ ಆದೇಶ ಹೊರಡಿಸಿದ್ದಾರೆ.

ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಜಕರಾದ ನಾಗಲಕ್ಷಿ ಎಸ್. ವಾದ ಮಂಡಿಸಿದ್ದರು. ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ರಾಘವೇಂದ್ರ ತನಿಖೆಯ ಕಾಲಕ್ಕೆ ತನಿಖಾಧಿಕಾರಿಗೆ ಸಹಕರಿಸಿದ್ದು, ಸಿಬ್ಬಂದಿಯವರಾದ ಶ್ರೀನಿವಾಸ ಮತ್ತು ವಿಶ್ವನಾಥ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದು ಸರಕಾರಿ ಅಭಿಯೋಜಕರ ಕಾರ್ಯಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande