
ಕೋಲ್ಕತ್ತಾ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಭಾರತವು ಈಗ “ದೊಡ್ಡ ಮತ್ತು ದಿಟ್ಟ ಬಾಹ್ಯಾಕಾಶ ಕನಸುಗಳನ್ನು” ನನಸಾಗಿಸುವ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಬುಧವಾರ ಹೇಳಿದರು.
ಕೋಲ್ಕತ್ತಾದ ಇಂಡಿಯನ್ ಸೆಂಟರ್ ಫಾರ್ ಸ್ಪೇಸ್ ಫಿಸಿಕ್ಸ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು,ಬಾಹ್ಯಾಕಾಶ ಆಳವಾದ ಶಾಂತಿಯನ್ನು ನೀಡುವ ಅದ್ಭುತ ಸ್ಥಳ ಎಂದು ಹೇಳಿದರು. ನಿಜ ಹೇಳಬೇಕೆಂದರೆ, ಹಿಂತಿರುಗಲು ನನಗೆ ಆಸೆ ಆಗಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು.
ಬಾಹ್ಯಾಕಾಶದಲ್ಲಿ ಪಡೆದ ನೈಜ ಅನುಭವವು ತರಬೇತಿಗಿಂತ ಸಂಪೂರ್ಣ ಭಿನ್ನವಾಗಿದ್ದು, ಭಾರತ ನಡೆಸಲಿರುವ ಮುಂದಿನ ಮಾನವ ಬಾಹ್ಯಾಕಾಶ ಯಾನಗಳಿಗೆ ಇದು ಅಮೂಲ್ಯ ಮಾರ್ಗದರ್ಶನವಾಗಲಿದೆ ಎಂದು ಅವರು ಹೇಳಿದರು. ತಮ್ಮ ISS ಮಿಷನ್‌ನ್ನು “ವಿಷನ್ ಗಗನಯಾನ ಕಡೆಗೆ ನಿರ್ಣಾಯಕ ಮೆಟ್ಟಿಲು ಎಂದು ಶುಕ್ಲಾ ವಿವರಿಸಿದರು.
ಅವರು ಭಾರತದ ಮುಂಬರುವ ಗಗನಯಾನ ಯೋಜನೆಗಳಲ್ಲಿ ಗಗನಯಾನ ಮಾನವ ಹಾರಾಟ, ದೇಶದ ಸ್ವಂತ ‘ಭಾರತೀಯ ಬಾಹ್ಯಾಕಾಶ ನಿಲ್ದಾಣ’, ಹಾಗೂ ಮಾನವ ಚಂದ್ರಯಾನ ಸೇರಿವೆ ಎಂದು ತಿಳಿಸಿದರು. 2040ರೊಳಗೆ ಚಂದ್ರನ ಮೇಲೆ ಭಾರತೀಯ ಮಾನವ ಯಾನ ಇಳಿಯುವ ಗುರಿ ಹೊಂದಲಾಗಿದೆ. ಬಾಹ್ಯಾಕಾಶ ಕ್ಷೇತ್ರವು ಮುಂದಿನ 10–20 ವರ್ಷಗಳಲ್ಲಿ ವೇಗವಾಗಿ ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ ಶುಕ್ಲಾ, ಇವು ಸವಾಲಿನ ಗುರಿಗಳು, ಆದರೆ ಯುವಕರಿಗೆ ಸಂಪೂರ್ಣ ಸಾಧ್ಯ ಎಂದು ಹೇಳಿದರು. ಮಾನವ ಬಾಹ್ಯಾಕಾಶ ಹಾರಾಟ ವಿಸ್ತರಣೆ ಅಗಾಧ ಉದ್ಯೋಗಾವಕಾಶಗಳು ತರಲಿದೆ ಎಂದು ಅವರು ಹೇಳಿದರು.
ಭವಿಷ್ಯದಲ್ಲಿ ಬಾಹ್ಯಾಕಾಶ ನಡಿಗೆ ಮಾಡುವ ಕನಸು ಹೊಂದಿರುವ ಶುಕ್ಲಾ, ಅದಕ್ಕಾಗಿ ಹೆಚ್ಚುವರಿ ಎರಡು ವರ್ಷಗಳ ತರಬೇತಿ ಅಗತ್ಯವಿದೆ ಎಂದರು. ಇಂತಹ ಕಾರ್ಯಕ್ರಮಗಳು ಲಕ್ಷಾಂತರ ಮಕ್ಕಳ ಕನಸುಗಳನ್ನು ನನಸಾಗಿಸುತ್ತವೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳಿಗೆ ಹೊಸ ದಿಕ್ಕು ನೀಡುತ್ತವೆ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa