ಮಾನವ-ವನ್ಯಜೀವಿಗಳ ಸಂಘರ್ಷ
ಹೊಸಪೇಟೆ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮನುಷ್ಯನು ಅರಣ್ಯವನ್ನು ಆಕ್ರಮಿಸಿಕೊಂಡು ವಸತಿ ಪ್ರದೇಶಗಳು, ರಸ್ತೆಗಳು ಮತ್ತು ಕೃಷಿ ಭೂಮಿಯನ್ನು ವಿಸ್ತರಿಕೊಳ್ಳುತ್ತಿದ್ದಾನೆ. ಇದರಿಂದ ವನ್ಯಜೀವಿಗಳಿಗೆ ಜಾಗವಿಲ್ಲದೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ನಾಡಿಗೆ ಬರುತ್ತಿರುವುದು ಮಾನವ ಮತ್ತು ವನ್ಯ
ಮಾನವ-ವನ್ಯಜೀವಿಗಳ ಸಂಘರ್ಷ


ಮಾನವ-ವನ್ಯಜೀವಿಗಳ ಸಂಘರ್ಷ


ಮಾನವ-ವನ್ಯಜೀವಿಗಳ ಸಂಘರ್ಷ


ಹೊಸಪೇಟೆ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮನುಷ್ಯನು ಅರಣ್ಯವನ್ನು ಆಕ್ರಮಿಸಿಕೊಂಡು ವಸತಿ ಪ್ರದೇಶಗಳು, ರಸ್ತೆಗಳು ಮತ್ತು ಕೃಷಿ ಭೂಮಿಯನ್ನು ವಿಸ್ತರಿಕೊಳ್ಳುತ್ತಿದ್ದಾನೆ. ಇದರಿಂದ ವನ್ಯಜೀವಿಗಳಿಗೆ ಜಾಗವಿಲ್ಲದೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ನಾಡಿಗೆ ಬರುತ್ತಿರುವುದು ಮಾನವ ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷಕ್ಕೆ ಮುಖ್ಯ ಕಾರಣವಾಗಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್.ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ದರೋಜಿಯ ದರೋಜಿ ಕರಡಿ ಸಂರಕ್ಷಣಾ ಪ್ರದೇಶದಲ್ಲಿ ಜಿಲ್ಲಾ ನ್ಯಾಯಾಂಗ ಬಳ್ಳಾರಿ ಹಾಗೂ ವಿಜಯನಗರ, ಅರಣ್ಯ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಳ್ಳಾರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾನವ ಮತ್ತು ವನ್ಯಜೀವಿಗಳ (ಕಾರಣಗಳು, ಸವಾಲುಗಳು ಮತ್ತು ಪರಿಹಾರ) ಸಂಘರ್ಷದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಭೂಮಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರಕೃತಿಯ ಭಾಗವಾಗಿರುವ ಪ್ರತಿಯೊಂದು ಜೀವಿಯ ಹಕ್ಕು ಆಗಿದೆ. ಇತ್ತೀಚಿನ ದಿನಗಳಲ್ಲಿ ಮಾನವ ಸಮುದಾಯಗಳ ಬೆಳವಣಿಗೆ ಮತ್ತು ವನ್ಯಜೀವಿಗಳ ವಾಸಸ್ಥಾನಗಳ ನಷ್ಟದಿಂದಾಗಿ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಾವು ಕಾಡುಗಳನ್ನು ಆಕ್ರಮಿಸಿಕೊಳ್ಳುತ್ತಿದ್ದೇವೆ. ಇದರಿಂದ ವನ್ಯಜೀವಿಗಳು ಅಹಾರ ಕೊರತೆಯಿಂದಾಗಿ ನಾಡಿಗೆ ಬರುತ್ತವೆ ಎಂದರು.

ಆನೆಗಳು ಕಬ್ಬು ಮತ್ತು ಬಾಳೆ ತೋಟಗಳಿಗೆ, ಚಿರತೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿ ಜಾನುವಾರುಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಕಾಡಿನಲ್ಲಿ ವನ್ಯಜೀವಿಗಳಿಗೆ ಬೇಕಾದ ಆಹಾರ ಮತ್ತು ನೀರು ಸಿಗದಿರುವುದು ಮುಖ್ಯ ಕಾರಣವಾಗಿದೆ. ಬೇಸಿಗೆಯಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ. ಅರಣ್ಯದ ನಡುವೆ ಹಾದು ಹೋಗುವ ಹೆದ್ದಾರಿಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳು ಪ್ರಾಣಿಗಳ ಸಾಂಪ್ರದಾಯಿಕ ಚಲನೆಯ ಮಾರ್ಗಗಳನ್ನು ತಡೆಹಿಡಿಯುತ್ತವೆ. ಇದರಿಂದ ಪ್ರಾಣಿಗಳು ದಾರಿ ತಪ್ಪಿ ಮಾನವ ವಾಸಸ್ಥಾನಗಳಿಗೆ ಬರುತ್ತಿವೆ. ಇದರಿಂದಾಗಿ ಆನೆ ಅಥವಾ ಹುಲಿಯ ದಾಳಿಯಿಂದ ಪ್ರಾಣಹಾನಿ ಸಂಭವಿಸಬಹುದು ಎಂದರು.

ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಳೆದುಕೊಳ್ಳುತ್ತಾರೆ. ಜಾನುವಾರು ನಷ್ಟದಿಂದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ನಿರಂತರ ಭಯ ಮತ್ತು ಆತಂಕದಲ್ಲಿ ಜೀವಿಸಬೇಕಾಗುತ್ತದೆ. ಮನುಷ್ಯರು ಸೇಡು ತೀರಿಸಿಕೊಳ್ಳಲು ವಿಷವಿಟ್ಟು ಅಥವಾ ವಿದ್ಯುತ್ ಬೇಲಿ ಹಾಕಿ ಪ್ರಾಣಿಗಳನ್ನು ಕೊಲ್ಲುತ್ತಾರೆ. ಇಂತಹ ಸಂರಕ್ಷಣೆಯ ಪ್ರಯತ್ನಗಳಿಗೆ ಹಿನ್ನಡೆಯನ್ನುಂಟು ಮಾಡುತ್ತದೆ. ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತದೆ ಎಂದರು.

ಸಂಘರ್ಷವನ್ನು ಶಾಶ್ವತವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ನಾವು ಸಹಬಾಳ್ವೆಯ ಹೊಸ ಮಾರ್ಗವನ್ನು ಕಂಡುಕೊಳ್ಳಬೇಕು. ಪ್ರಾಣಿಗಳು ಮತ್ತು ಮನುಷ್ಯರು ಪರಸ್ಪರ ಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಿಸಬೇಕು. ಆರಣ್ಯದ ಅಂಚಿನಲ್ಲಿ ಕಂದಕ, ಸೌರಶಕ್ತಿ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್‌ಗಳಂತಹ ಪರಿಣಾಮಕಾರಿ ತಡೆಗೋಡೆಗಳನ್ನು ನಿರ್ಮಿಸಬೇಕು ಮತ್ತು ಅವುಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.

ವನ್ಯಜೀವಿಗಳು ನಾಡಿಗೆ ಬಂದ ತಕ್ಷಣ ಪರಿಸ್ಥಿತಿಯನ್ನು ನಿಭಾಯಿಸಲು ತರಬೇತಿ ಪಡೆದ ಅರಣ್ಯ ಸಿಬ್ಬಂದಿ ಮತ್ತು ಅರಣ್ಯ ಮಿತ್ರರನ್ನು ಒಳಗೊಂಡ ಕ್ಷಿಪ್ರ ಸ್ಪಂದನ ತಂಡಗಳು ಸದಾ ಸಿದ್ಧವಾಗಿರಬೇಕು. ನಷ್ಟ ಮತ್ತು ಜೀವ ಹಾನಿ ಸಂಭವಿಸಿದಾಗ ಸರ್ಕಾರವು ತ್ವರಿತವಾಗಿ ಮತ್ತು ನ್ಯಾಯಯುತವಾಗಿ ಪರಿಹಾರ ಧನ ನೀಡಬೇಕು. ಇದು ಜನರ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಕಾಡಿನೊಳಗೆ ನೀರು ಮತ್ತು ಆಹಾರ ಸಿಗುವಂತೆ ಮಾಡಬೇಕು ಎಂದರು.

ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷೆ ಕೆ.ಜಿ.ಶಾಂತಿ ಮಾತನಾಡಿ, ಮಾನವ ತನ್ನ ಸ್ವಾರ್ಥಕ್ಕಾಗಿ ಕಾಡನ್ನು ಅತಿಕ್ರಮಿಸಿ ತನ್ನ ಜಮೀನನ್ನು ವಿಸ್ತರಿಸುತ್ತಾ ಹೋದಾಗ ಸಹಜವಾಗಿ ಪ್ರಾಣಿಗಳ ಕ್ಷೇತ್ರ ಕಡಿಮೆಯಾಗಿ ಅವು ನಾಡಿಗೆ ಬರುವುದು ಸ್ವಭಾವಿಕ. ಆದ್ದರಿಂದ ಮನುಷ್ಯ ತನ್ನ ಆಸೆಯನ್ನು ಇತಿಮಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದರು.

ದೇವರು ಈ ಭೂಮಿಯನ್ನು ಸಕಲ ಜೀವರಾಶಿಗಳಿಗಾಗಿ ಸೃಷ್ಟಿಸಿದ್ದು ಅದನ್ನು ನಾವು ಎಲ್ಲರೂ ಸರಿಯಾಗಿ ಬಳಸಿಕೊಳ್ಳಬೇಕು. ಈ ಕಾರ್ಯಾಗಾರವು ಕೇವಲ ಚರ್ಚಾ ವೇದಿಕೆಯಾಗಿರದೇ ಸಮಸ್ಯೆಗೆ ಸಮಗ್ರ, ವೈಜ್ಞಾನಿಕ ಮತ್ತು ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವ ಒಂದು ಗಂಭೀರ ಪ್ರಯತ್ನವಾಗಿದೆ. ವನ್ಯಜೀವಿ ಸಂಘರ್ಷ ನಿರ್ವಹಣೆಯಲ್ಲಿರುವ ಹೊಸ ತಂತ್ರಜ್ಞಾನಗಳನ್ನು ಮತ್ತು ಉತ್ತಮ ಅಭ್ಯಾಸಗಳ ಕುರಿತು ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವುದು. ಕಾಡಂಚಿನ ಪ್ರದೇಶಗಳಲ್ಲಿ ವಾಸಿಸುವ ಜನರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವರ ಸಹಕಾರದೊಂದಿಗೆ ಪರಿಣಾಮಕಾರಿ ತಡೆಗಟ್ಟುವ ಕ್ರಮಗಳನ್ನು ರೂಪಿಸುವುದು. ಪರಿಹಾರ, ಮುನ್ನೆಚ್ಚರಿಕೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸುವುದನ್ನು ಮಾಡಿದರೆ ಮಾತ್ರ ಈ ಕಾರ್ಯಾಗಾರ ಯಶಸ್ವಿಯಾದಂತೆ ಎಂದರು.

ವಿಜಯನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಅನುಪಮ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಇರುವ ಕಾರಣಗಳು, ಸವಾಲುಗಳು ಮತ್ತು ಪರಿಹಾರ ಕುರಿತು ಉಪನ್ಯಾಸ ನೀಡಿದರು.

ಈ ವೇಳೆ ಕಾರ್ಯಾಗಾರದಲ್ಲಿ ವಿಜಯನಗರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ್, ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ್ ಸೇರಿದಂತೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ನ್ಯಾಯಾಧೀಶರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande