
ಗದಗ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ ತಿಳಿಸಿದರು.
ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ಜನಿಸಿದ ತಕ್ಷಣ ಬಹಳಷ್ಟು ಹಕ್ಕುಗಳನ್ನು ಪಡೆದುಕೊಳ್ಳುತ್ತಾನೆ. ಮಾನವ ಹಕ್ಕುಗಳು ಎಲ್ಲ ಮನುಷ್ಯರು ಜನಿಸಿದ ತಕ್ಷಣ ನೈಸರ್ಗಿಕವಾಗಿ ಬರುವ ಹಕ್ಕುಗಳಾಗಿವೆ ಮನುಷ್ಯನು ಜೀವಿಸುವ ಹಕ್ಕು , ಧರ್ಮ ಸ್ವಾತಂತ್ರ್ಯ ಹಕ್ಕು, ಸಮಾನತೆ ಹಕ್ಕು, ಸಂಚರಿಸುವ ಹಕ್ಕು, ಪ್ರಾಣ ರಕ್ಷಣೆ ಹಕ್ಕು, ಯೋಗ್ಯ ಪರಿಸರದ ಹಕ್ಕು , ಶಿಕ್ಷಣದ ಹಕ್ಕು ಇವುಗಳೆಲ್ಲ ಮಾನವ ಹಕ್ಕುಗಳಾಗಿರುತ್ತವೆ. ಬೇರೆಯವರ ಸ್ವಾತಂತ್ರ್ಯವನ್ನು ಹರಣ ಮಾಡುವ ಅಧಿಕಾರ ಯಾರಿಗೂ ಇರುವುದಿಲ್ಲ.ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಮಾನವ ಹಕ್ಕುಗಳ ಆಯೋಗಕ್ಕೆ ಲಿಖಿತವಾಗಿ ಅಥವಾ ಆನ್‌ಲೈನ್ ಮೂಲಕವಾದರೂ ದೂರು ನೀಡಬಹುದು ಎಂದರು.
ಕಾರಾಗೃಹದಲ್ಲಿ ಕೈದಿಗಳಿಗೆ, ಜೀತ ಪದ್ಧತಿ, ಭಯೋತ್ಪಾದನೆ, ಬಾಲ್ಯ ವಿವಾಹ ಇಂತಹ ಪ್ರಕರಣಗಳಲ್ಲ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ಸಂಭವವಿರುತ್ತದೆ. ಕ್ರಿ.ಶ.1993 ರಲ್ಲಿ ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಯಿತು. ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಬಹುದು ಅಥವಾ ನ್ಯಾಯಾಲಯಕ್ಕೂ ದೂರು ನೀಡಬಹುದಾಗಿದೆ.
ಮಾನವ ಹಕ್ಕುಗಳ ಆಯೋಗಕ್ಕೆ ಶಿಕ್ಷೆ ಕೊಡುವ ಅಧಿಕಾರವಿರುವುದಿಲ್ಲ ಆಯೋಗವು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ವರದಿಯನ್ನು ಶಿಫಾರಸ್ಸು ಮಾಡುತ್ತದೆ ಎಂದರು. ಸಂವಿಧಾನದ ಮೂಲಭೂತ ಹಕ್ಕುಗಳೂ ಸಹ ಮಾನವ ಹಕ್ಕುಗಳಾಗಿವೆ. ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಹಕ್ಕು ಮತ್ತು ಕರ್ತವ್ಯಗಳು ಇವೆ. ಯಾರೂ ಸಹ ಅವುಗಳನ್ನು ಉಲ್ಲಂಘನೆ ಮಾಡಬಾರದೆಂದು ಸಿ.ಎಸ್.ಶಿವನಗೌಡರ ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ನಂತರ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿ ಬೋಧಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ ಮಾತನಾಡಿ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕು. ನಾವೂ ಬದುಕಬೇಕು. ಇತರರಿಗೂ ಬದುಕಲು ಬಿಡಬೇಕು ಎಂದರು.
ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ.ಪಲ್ಲೇದ ಅವರು ಮಾತನಾಡಿ 1948 ರಲ್ಲಿ ವಿಶ್ವ ಸಂಸ್ಥೆಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಕುರಿತು ಠರಾವು ರೆಸಲ್ಯೂಷನ್ ಪಾಸ್ ಮಾಡಲಾಯಿತು.ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಆಯೋಗ 1993 ರಲ್ಲಿ ಸ್ಥಾಪನೆಯಾಯಿತು. ಜೈಲಿನಲ್ಲಿ, ಪೊಲೀಸ ಠಾಣೆ, ಶಾಲಾ ಕಾಲೇಜು, ಕಚೇರಿಯಲ್ಲಿಯೂ ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ಸಂಭವಗಳಿರುತ್ತವೆ. 12 ನೇ ಶತಮಾನದಲ್ಲಿಯೇ ಬಸವಣ್ಣನವರು ಮಾನವೀಯತೆಯ, ಸಮಾನತೆಯ ಸಂದೇಶ ಸಾರಿದ್ದಾರೆ. ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು, ಶಿಕ್ಷಣ ಪಡೆಯುವ ಹಕ್ಕು, ಆರೋಗ್ಯದಿಂದಿರುವ ಹಕ್ಕುಗಳು ಮಾನವ ಹಕ್ಕುಗಳಾಗಿವೆ. ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಆಯೋಗಕ್ಕೆ ಶಿಕ್ಷಿಸುವ ಹಕ್ಕು ಇರುವುದಿಲ್ಲ. ಆದರೆ ವಿಚಾರಣೆ ವರದಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಶಿಕ್ಷಿಸುವ ಹಕ್ಕು ಸರ್ಕಾರಕ್ಕೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ಮಹಾಂತೇಶ ಸಜ್ಜನರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಶೀಲ್ದಾರರಾದ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಇಲಾಖೆ ಅಧಿಕಾರಿ ಹಾಗು ಸಿಬ್ಬಂದಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
ವೆಂಕಟೇಶ ಅಲ್ಕೋಡ್ ಅವರು ನಾಡಗೀತೆ ಪ್ರಸ್ತುತಪಡಿಸಿದರು. ಎಂ.ಎ.ಯರಗುಡಿ ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP