
ಅಡುಗೆಯನು ಮಾಡಬೇಕಣ್ಣ, ನಾನೀಗ ಸುಜ್ಞಾನದ ಅಡುಗೆಯನು ಮಾಡಬೇಕಣ್ಣ
ಅಡುಗೆಯನು ಮಾಡಬೇಕಣ್ಣ,
ನಾನೀಗ ಸುಜ್ಞಾನದ ಅಡುಗೆಯನು ಮಾಡಬೇಕಣ್ಣ
ಮದಿಸಬೇಕು ಮದಗಳನ್ನು
ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಿ
ಈ ಮನೆಯ ಸಾರಿಸಿ ಅಡುಗೆಯನು ಮಾಡಬೇಕಣ್ಣ
ಕನಕದಾಸರ ಈ ಮೇಲಿನ ಕೃತಿಯು ಆಧ್ಯಾತ್ಮಿಕ ಅರ್ಥವನ್ನು ಒಳಗೊಂಡಿದೆ. ಕನಕದಾಸರು ಇಲ್ಲಿ ಆಧ್ಯಾತ್ಮಿಕ ಜೀವನವನ್ನು ಅಡುಗೆಯೊಂದಿಗೆ ಹೋಲಿಸಿದ್ದಾರೆ. ನಾವು ಜ್ಞಾನವೆಂಬ ಅಡುಗೆಯನ್ನು ಮಾಡಬೇಕು. ನಮ್ಮಲ್ಲಿರುವ ಅಹಂಕಾರ, ಕಾಮ, ಕ್ರೋಧ, ಲೋಭ ದುರ್ಗುಣಗಳನ್ನು ನಾಶಪಡಿಸಿಕೊಳ್ಳಬೇಕು. ಒಡೆಯ ಎಂದರೆ ದೇವರ ಆಜ್ಞೆಯಂತೆ ಸಂತೋಷದಿಂದ ಮತ್ತು ಉತ್ಸಾಹದಿಂದ ಈ ಮನೆ ( ದೇಹವನ್ನು) ಶುದ್ಧಿಕರಿಸಿಕೊಂಡು ಜ್ಞಾನದ ಅಡುಗೆ ಮಾಡಬೇಕು ಎಂದಿದ್ದಾರೆ. ಜ್ಞಾನ, ಭಕ್ತಿ, ವೈರಾಗ್ಯದ ಮೂರ್ತಿಯಾದ ಕನಕದಾಸರು ಪ್ರತಿಯೊಬ್ಬರೂ ಜ್ಞಾನದ ಅಡುಗೆಯನ್ನು ಪರಮಾತ್ಮನಿಗೆ ಅರ್ಪಿಸಿ ತಮ್ಮ ಆತ್ಮೋದ್ದಾರ ಮಾಡಿಕೊಳ್ಳಬೇಕು ಎಂದು ತಮ್ಮ ಪದ್ಯದ ಮೂಲಕ ಹೇಳುತ್ತಾರೆ.
ಕನಕದಾಸರು ಕ್ರಿ.ಶ 1509 ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಬಚ್ಚಮ್ಮ ಮತ್ತು ಬೀರಪ್ಪನಾಯಕ ದಂಪತಿಗಳ ಪುತ್ರರಾಗಿ ಜನಿಸಿದರು. ಇವರ ಮೊದಲ ಹೆಸರು ತಿಮ್ಮಪ್ಪ ನಾಯಕ.
ತಿಮ್ಮಪ್ಪ ನಾಯಕರು ತಮ್ಮ ತಂದೆಯಿಂದ ಕುದುರೆ ಸವಾರಿ, ಬಿಲ್ಲು, ಖಡ್ಗ ಯುದ್ಧ ಮುಂತಾದ ಶೂರತನದ ವಿದ್ಯೆಗಳನ್ನು ಕಲಿತಿದ್ದರು. ತಿಮ್ಮಪ್ಪ ನಾಯಕರಿಗೆ ಗ್ರಾಮ ನವೀಕರಿಸುವಾಗ ಭೂಮಿ ಅಗೆಯುವಾಗ ಹೇರಳವಾದ ಧನ, ಕನಕ, ವೈಜ್ಯ ವೈಡರ‍್ಯಗಳು ದೊರೆತವು. ದೊರೆತ ದ್ರವ್ಯವನ್ನು ರಂಗನಾಥ ದೇವಾಲಯ ನಿರ್ಮಾಣಕ್ಕೆ ಹಾಗೂ ಬಡಜನರಿಗೆ ದಾನ ಮಾಡಿದರು. ಪ್ರಜೆಗಳು ಇವರ ಉದಾರಗುಣಗಳನ್ನು ಸ್ಮರಿಸಿ ಸಂತೋಷದಿAದ ಕನಕನಾಯಕರೆಂದು ಕರೆದರು. ಕನಕನಾಯಕರು ದಂಡನಾಯಕರಾಗಿದ್ದು ಯುದ್ಧವೊಂದರ ನಂತರ ವೈರಾಗ್ಯ ಉಂಟಾಗಿ ಕನಕದಾಸರಾದರು.
ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರಾಗಿದ್ದರು. ವ್ಯಾಸರಾಯರ ಅಚ್ಚುಮೆಚ್ಚಿನ ಶಿಷ್ಯರಾದ ಇವರು ಮಧ್ವ ತತ್ವ ಶಾಸ್ತçವನ್ನು ಕಲಿತು ಹರಿದಾಸರಾಗಿ ಜ್ಞಾನ , ಭಕ್ತಿ , ವೈರಾಗ್ಯದ ಮೂರ್ತಿಯೆನಿಸಿಕೊಂಡರು. ನೆಲೆಯಾದಿಕೇಶವ' ಅಥವಾ 'ಕಾಗಿನೆಲೆಯಾದಿ ಕೇಶವರಾಯ ಎಂಬುದು ಇವರ ಅಂಕಿತ ನಾಮವಾಗಿತ್ತು. ಕನಕದಾಸರು ಮತ್ತು ಪುರಂದರದಾಸರನ್ನು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.
ಭಕ್ತಿಯ ಪರಿಮಳ ಸೂಸುವ ಕನಕದಾಸರ ಶ್ರೇಷ್ಟ ಕೃತಿ ಹರಿಭಕ್ತಿ ಸಾರ: ‘ಹರಿಭಕ್ತಿಸಾರ'ವು ಕನಕದಾಸರ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದ್ದು, ಶ್ರೀ ಮಹಾವಿಷ್ಣುವಿನ ಮಹಿಮೆಯನ್ನು ಕೊಂಡಾಡುತ್ತದೆ. ಶ್ರೀಹರಿಯಲ್ಲಿ ವಿನಮ್ರವಾದ ಮತ್ತು ಭಾವನಾತ್ಮಕವಾದ ಪ್ರಾರ್ಥನೆಯನ್ನು ಕಾಣಬಹುದಾಗಿದೆ. ಕೃತಿಯು ಶ್ರೀಹರಿಯ ಪಾರಮ್ಯವನ್ನು ಹೊಗಳುವುದರ ಜೊತೆಗೆ, ಭಕ್ತಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಹರಿಭಕ್ತಿಸಾರ'ವು ಭಕ್ತಿಭಾವದಿಂದ ಕೂಡಿದ, ಸರಳ ಮತ್ತು ಅರ್ಥಪೂರ್ಣವಾದ ಭಾಷೆಯಲ್ಲಿ ರಚನೆಯಾಗಿದೆ. ಇದು ಶ್ರೀಹರಿಯನ್ನು ಸ್ತುತಿಸುವ ಒಂದು ಭಕ್ತಿಯ ಪರಿಮಳ ಸೂಸುವ ಹೂಮಾಲೆಯಾಗಿದೆ.
ಲೋಕದೊಳಗತ್ಯಧಿಕವೆನಿಸುವ
ಕಾಗಿನೆಲೆಸಿರಿಯಾದಿಕೇಶವ
ತಾ ಕೃಪೆಯೊಳಗೆ ನುಡಿದನು ಈ ಭಕ್ತಿಸಾರವನು
ಜೋಕೆಯಲಿ ಬರೆದೋದಿಕೇಳ್ವರ
ನಾಕುಲದಿ ಮಾಧವನು ಕರುಣಿಪ
ಶ್ರೀಕಮಲವಲ್ಲಭನುಮಿಗೆ ಬಿಡದಾದಿಕೇಶವನು
ಲೋಕದಲ್ಲಿ ಅತ್ಯಧಿಕ ಮಹಿಮೆಯುಳ್ಳ ದೇವರು ಕಾಗಿನೆಲೆಯಾದಿ ಕೇಶವನೇ ತನ್ನ ಕೃಪೆಯಿಂದ ನನಗೆ ಭಕ್ತಿಸಾರವನ್ನು ಹೇಳಿಸಿದನು. ಇದನ್ನು ಓದಿ ಕೇಳ್ವರನು ಮಾಧವನು ಕರುಣಿಸುವನು. ನಾನು ಬರೆದಿರುವ ಈ ಭಕ್ತಿಸಾರವು ಕೇವಲ ನನ್ನ ಬುದ್ಧಿಯಿಂದ ಅಲ್ಲ ಲಕ್ಷ್ಮಿ ದೇವಿಯ ಪ್ರಿಯನಾದ ಶ್ರೀ ಕಮಲವಲ್ಲಭ ಆದಿಕೇಶವನ ಕೃಪೆಯಿಂದಲೇ ಬರೆದಿರುವೆ ಎಂದು ಹೇಳಿದ್ದಾರೆ.
ಶುದ್ಧ ಭಕ್ತಿ ಹಾಗೂ ದೇವರ ಕೃಪೆ ದೊರೆತರೆ ಮಾತ್ರ ದೇವರ ಸಾಕ್ಷಾತ್ಕಾರವಾಗುತ್ತದೆ. ಇದರಿಂದ ಕನಕದಾಸರಿಗೆ ಕಾಗಿನೆಲೆಯಾದಿ ಕೇಶವನ ಮೇಲಿನ ಪ್ರೀತಿ, ನಿಷ್ಕಪಟ ಭಕ್ತಿ, ವಿನಯ ಅನನ್ಯವಾದದ್ದು ಎಂದು ತೋರಿಸುತ್ತದೆ.
ಕನಕದಾಸರು ಕೀರ್ತನೆಗಳನ್ನಷ್ಟೇ ಅಲ್ಲದೆ ಕಾವ್ಯ, ಮಹಾಕಾವ್ಯ, ಮುಂಡಿಗೆಗಳನ್ನೂ ಪದಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಮೋಹನ ತರಂಗಿಣಿ, ನಳ ಚರಿತೆ,್ರ ರಾಮಧಾನ್ಯ ಚರಿತ್ರೆ ಹರಿಭಕ್ತಿ ಸಾರ ಕೃತಿಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ. ಇವರು ಮುಂಡಿಗೆಗಳನ್ನು ಹಾಗೂ ಅನೇಕ ಭಕ್ತಿಗೀತೆಗಳನ್ನು ರಚಿಸಿ ದಾಸಸಾಹಿತ್ಯದಲ್ಲಿ ರಾರಾಜಿಸಿದ್ದಾರೆ.
ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಅಂತ:ಚಕ್ಷವಿನಿಂದ ಶ್ರೀ ಹರಿಯ ಕಂಡ ಕನಕದಾಸರರು, 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ ಅವರದ್ದಾಗಿದೆ. ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದಿದ್ದಾರೆ.
ಒಡವೆ ಹೋಯಿತು ಮನ ದೃಢವಾಯಿತು ಎಂಬ ಕನಕದಾಸರ ಈ ಪದ್ಯದ ಸಾಲುಗಳು ತುಂಬ ಅರ್ಥಗರ್ಭಿತವಾಗಿವೆ. ಯಾವಾಗ ಮನುಷ್ಯನು ಬಾಹ್ಯ ಆಸಕ್ತಿ, ಲೌಕಿಕ ಆಸೆಗಳ ಬಂಧನದಿಂದ ಮುಕ್ತನಾಗುತ್ತಾನೆ. ಆಗ ಮನಸ್ಸು ನಿಜವಾದ ಶ್ರಧ್ಧೆ, ಭಕ್ತಿ, ಜ್ಞಾನ ಇವುಗಳಿಂದ ದೃಢತೆ ಹೊಂದುತ್ತದೆ. ಪರಮಾತ್ಮನ ಧ್ಯಾನದಲ್ಲಿ ಮನಸ್ಸು ತೊಡಗಿ ಜೀವನ ಪಾವನವಾಗುತ್ತದೆ ಎಂದು ಕನಕದಾಸರು ತಮ್ಮ ಪದ್ಯದ ಮೂಲಕ ತಿಳಿಸಿದ್ದಾರೆ.
ಕನಕದಾಸರು ಶ್ರೇಷ್ಠ ಹರಿದಾಸ, ಸಂತ, ಕವಿ ಮತ್ತು ಸಾಮಾಜಿಕ ಸುಧಾರಕರಾಗಿ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಕೀರ್ತನೆಗಳು ಮತ್ತು ಕಾವ್ಯಗಳ ಮೂಲಕ ಸಮಾಜದಲ್ಲಿನ ಅಂಕುಡೊಕುಗಳನ್ನು ತಿದ್ದಿದರು. ಭಗವಂತನ ಭಕ್ತಿ ಮತ್ತು ಸಾರ್ವತ್ರಿಕ ಮಾನವೀಯತೆಯ ಸಂದೇಶ ನೀಡಿದರು. ಮನುಷ್ಯ ಮಾಡಬೇಕಾದ ಪ್ರತಿ ಕಾರ್ಯವನ್ನು ಶ್ರದ್ಧೆಯಿಂದ ಮಾಡಬೇಕು, ಮತ್ತು ಎಲ್ಲಾ ಜೀವಿಗಳಲ್ಲಿ ದೈವತ್ವವಿದೆ ಎಂದು ಸಂದೇಶ ಸಾರಿದ್ದಾರೆ. ಕನಕದಾಸರ ತತ್ವ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಭಕ್ತಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿ ಪರಮಾತ್ಮನಿಗೆ ಅರ್ಪಿಸಿದರೆ ಯಶಸ್ಸು ಸಿಗುತ್ತದೆ ಎಂದು ಅವರು ತಿಳಿಸಿದ್ದಾರೆ. ಪ್ರತಿಯೊಬ್ಬರೂ ಕನಕದಾಸರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂತೃಪ್ತ ಜೀವನ ನಡೆಸಬಹುದಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗದಗ ವತಿಯಿಂದ ಶ್ರೀಮತಿ ಅಂಜನಾ ರಾಘವೇಂದ್ರ ಕುಬೇರ ಅವರು ವಿಶೇಷ ಲೇಖನವನ್ನು ಬರೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP