
ವಾಷಿಂಗ್ಟನ್, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಎರಡು ಮಹತ್ವದ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಮೊದಲ ಆದೇಶವು ದೇಶದ ವೈಜ್ಞಾನಿಕ ಸಂಶೋಧನೆಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯನ್ನು ವಿಸ್ತರಿಸುವ ‘ಜೆನೆಸಿಸ್ ಮಿಷನ್’ ಯೋಜನೆಗೆ ಸಂಬಂಧಿಸಿದ್ದು, ಎರಡನೆಯದು ಅಂತರರಾಷ್ಟ್ರೀಯ ಇಸ್ಲಾಮಿಕ್ ಸಂಘಟನೆಯಾದ ಮುಸ್ಲಿಂ ಬ್ರದರ್‌ಹುಡ್ ಮೇಲೆ ಕುಣಿಕೆ ಬಿಗಿಗೊಳಿಸುವುದಕ್ಕೆ ಉದ್ದೇಶಿತವಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ತಿಳಿಸಿದೆ.
ಶ್ವೇತಭವನದ ಪ್ರಕಾರ, ಜೆನೆಸಿಸ್ ಮಿಷನ್ ಅಡಿಯಲ್ಲಿ ಇಂಧನ ಇಲಾಖೆ ಹಾಗೂ ರಾಷ್ಟ್ರೀಯ ಪ್ರಯೋಗಾಲಯಗಳು ಸೂಪರ್‌ಕಂಪ್ಯೂಟರ್‌ಗಳ ನೆರವಿನಿಂದ ಏಕೀಕೃತ ಎಐ ವೇದಿಕೆಯನ್ನು ಅಭಿವೃದ್ಧಿಪಡಿಸಲಿವೆ. ಈ ಯೋಜನೆ ವೈದ್ಯಕೀಯ ಸಂಶೋಧನೆಗೆ, ರೋಗಗಳ ಚಿಕಿತ್ಸೆಗೆ ಹಾಗೂ ವೈಜ್ಞಾನಿಕ ಆವಿಷ್ಕಾರಗಳಿಗೆ ವೇಗ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಖಾಸಗಿ ವಲಯವೂ ಭಾಗಿಯಾಗುವ ಸಾಧ್ಯತೆ ಇದೆ. ಆದರೆ ಯೋಜನೆಗೆ ಬೇಕಾಗುವ ನಿಧಿ ಮೂಲಗಳ ಬಗ್ಗೆ ಸ್ಪಷ್ಟತೆ ಇನ್ನೂ ಲಭ್ಯವಿಲ್ಲ.
ಇನ್ನೊಂದು ಕಾರ್ಯಕಾರಿ ಆದೇಶದಲ್ಲಿ, ಅಧ್ಯಕ್ಷ ಟ್ರಂಪ್ ಮುಸ್ಲಿಂ ಬ್ರದರ್‌ಹುಡ್‌ಗೆ ಸಂಯೋಜಿತವಾಗಿರುವ ಮಧ್ಯಪ್ರಾಚ್ಯದ ಸಂಸ್ಥೆಗಳನ್ನು ಭಯೋತ್ಪಾದಕ ಗುಂಪುಗಳೆಂದು ಪಟ್ಟಿ ಮಾಡುವ ಕುರಿತು ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿವರಣೆ ವರದಿಯನ್ನು 30 ದಿನಗಳಲ್ಲಿ ಸಲ್ಲಿಸಲು ಹಾಗೂ ಅಂತಿಮ ಕ್ರಮಕ್ಕೆ 45 ದಿನಗಳ ಗಡುವು ನಿಗದಿಪಡಿಸಲಾಗಿದೆ.
ಈಜಿಪ್ಟ್, ಲೆಬನಾನ್, ಜೋರ್ಡಾನ್ ಸೇರಿದಂತೆ ಮೂರು ದೇಶಗಳಲ್ಲಿರುವ ಬ್ರದರ್‌ಹುಡ್-ಸಂಯೋಜಿತ ಸಂಘಟನೆಗಳು ಹಿಂಸಾಚಾರ ಮತ್ತು ಅಸ್ಥಿರತೆಯನ್ನು ಉತ್ತೇಜಿಸುತ್ತಿವೆ ಎಂದು ಆದೇಶದಲ್ಲಿ ಹೇಳಲಾಗಿದೆ. 1928ರಲ್ಲಿ ಹಸನ್ ಅಲ್-ಬನ್ನಾ ಅವರು ಈಜಿಪ್ಟ್‌ನಲ್ಲಿ ಸ್ಥಾಪಿಸಿದ ಮುಸ್ಲಿಂ ಬ್ರದರ್‌ಹುಡ್ ಜಗತ್ತಿನ ಪ್ರಮುಖ ಇಸ್ಲಾಮಿಕ್ ಚಳುವಳಿಗಳಲ್ಲೊಂದು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa