
ನವದೆಹಲಿ, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಅಯೋಧ್ಯೆ ಹಾಗೂ ಹರಿಯಾಣದ ಕರುಕ್ಷೇತ್ರದ ಪ್ರವಾಸದಲ್ಲಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಾಣ ಪೂರ್ಣಗೊಂಡ ಶ್ರೀರಾಮ ಜನ್ಮ ಭೂಮಿ ಮಂದಿರದ ಶಿಖರದಲ್ಲಿ ಮಧ್ಯಾಹ್ನ 12 ಗಂಟೆಗೆ ಅವರು ಕೇಸರಿ ಧ್ವಜಾರೋಹಣ ಮಾಡಲಿದ್ದಾರೆ. ಇದಕ್ಕೂ ಮೊದಲು ರೋಡ ಶೋ ನಡೆಸಲಿದ್ದು ನಂತರ ಅವರು ಸಪ್ತಮಂದಿರ, ಶೇಷಾವತಾರ ಹಾಗೂ ಅಣ್ಣಪೂರ್ಣೇಶ್ವರಿ ದೇವಿ ಮಂದಿರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ರಾಮ ದರ್ಬಾರ್ ಗರ್ಭಗುಡಿ ಹಾಗೂ ರಾಮಲಲಾ ಮಂದಿರದ ದರ್ಶನ ಪಡೆಯಲಿದ್ದಾರೆ.
ಈ ಧ್ವಜಾರೋಹಣ ಕಾರ್ಯಕ್ರಮ ಮಾರ್ಗಶಿರ ಮಾಸದ ಶುಕ್ಲ ಪಕ್ಷ ಪಂಚಮಿಯ ಶುಭ ಸಂದರ್ಭದಲ್ಲಿ ನಡೆಯಲಿದ್ದು, ರಾಮ–ಸೀತೆಯ ವಿವಾಹ ಪಂಚಮಿಯ ಅಭಿಜೀತ ಮುಹೂರ್ತಕ್ಕೂ ಹೊಂದುತ್ತದೆ. ಧ್ವಜದಲ್ಲಿ 'ಓಂ' ಚಿಹ್ನೆ, ಸೂರ್ಯ ಸಂಕೇತ ಮತ್ತು ಕೋವಿದಾರ ಮರದ ಚಿತ್ರ ಅಂಕಿತವಾಗಿದ್ದು, ರಾಮನ ತೇಜಸ್ಸು ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತಿರೂಪವಾಗಿದೆ.
ಬಳಿಕ ಪ್ರಧಾನಿ ಮೋದಿ ಹರಿಯಾಣದ ಕರುಕ್ಷೇತ್ರಕ್ಕೆ ತೆರಳಲಿದ್ದು ಸಂಜೆ 'ಪಾಂಚಜನ್ಯ' ಶಂಖದ ಅನಾವರಣ, ಮಹಾಭಾರತ ಅನುಭವ ಕೇಂದ್ರದ ಭೇಟಿ ಹಾಗೂ ಗುರು ತೇಜ್ ಬಹಾದೂರ್‌ರ 350ನೇ ಹುತಾತ್ಮ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭ ವಿಶೇಷ ನಾಣ್ಯ ಹಾಗೂ ಸ್ಮಾರಕ ಅಂಚೆಚೀಟಿ ಬಿಡುಗಡೆ ಮಾಡಲಿದ್ದು, ನಂತರ ಬ್ರಹ್ಮಸರೋವರದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa