ಕೆಜಿಎಫ್ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ತೆರೆ
ಕೆಜಿಎಫ್ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ತೆರೆ
ಕೆಜಿಎಫ್ ಪೊಲೀಸ್ ಕ್ರೀಡಾಕೂಟದಲ್ಲಿ ಐಜಿಪಿ ಲಾಭೂರಾಮ್, ಎಸ್‌ಪಿ ಶಿವಾಂಶು ರಜಪೂತ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.


ಕೋಲಾರ, ೨೩ ನವೆಂಬರ್ (ಹಿ.ಸ) :

ಆ್ಯಂಕರ್ : ಕೆಜಿಎಫ್ ಪೊಲೀಸ್ ಜಿಲ್ಲೆಯ ೨೦೨೫ನೇ ಸಾಲಿನ ಪೊಲೀಸರ ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಯಿತು. ಕೆಜಿಎಫ್‌ನ ಚಾಂಫೀಯನ್‌ರೀಫ್ಸ್ನಲ್ಲಿನ ಡಿ.ಎ.ಆರ್. ಪೊಲೀಸ್ ಕವಾಯಿತು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ವಾರ್ಷಿಕ ಪೊಲೀಸ್ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಲಯದ ಐಜಿಪಿ ಲಾಭೂರಾಮ್ ವಿಜೇತರುಗಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿ ವರ್ಷಕ್ಕೊಮ್ಮೆ ನಡೆಯುವ ಪೊಲೀಸ್ ಕ್ರೀಡಾಕೂಟದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿರುವುದು ಸಂತಸ ತಂದಿದೆ. ಕರ್ತವ್ಯದ ಒತ್ತಡದ ನಡುವೆ ಸಿಲುಕಿರುವಂತಹ ಪೊಲೀಸರಿಗೂ ಮನೋರಂಜನೆ, ಕ್ರೀಡೋಲ್ಲಾಸ, ಪರಸ್ಪರ ಸ್ನೇಹ ಬಾಂಧವ್ಯಕ್ಕೆ ಕ್ರೀಡಾಕೂಟವು ಸಹಕಾರಿಯಾಗಿರುತ್ತದೆ. ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯನ್ನು ತೋರ್ಪಡಿಸಲು ಕುಟುಂಬ ಸದಸ್ಯರ ಬೆಂಬಲವು ಅಗತ್ಯವಾಗಿ ಬೇಕಿರುತ್ತದೆ. ಕೆಲಸದ ಒತ್ತಡವನ್ನು ಬದಿಗಿಟ್ಟು ಪೊಲೀಸರು ತಮ್ಮ ಕುಟುಂಬದ ಸದಸ್ಯರೊಂದಿಗೂ ಅನ್ಯೋನ್ಯತೆಯಿಂದ ಜೀವನ ನಡೆಸಲು ಕರೆ ನೀಡಿದರು.

ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್ ಮಾತನಾಡಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರು ಮಧ್ಯೆ ಮನೋವಿಕಾಸಕ್ಕಾಗಿ ವರ್ಷಕ್ಕೊಮ್ಮೆ ಕ್ರೀಡಾಕೂಟವನ್ನು ನಡೆಸುತ್ತದೆ. ಪ್ರಸ್ತುತ ಕೆಜಿಎಫ್‌ನಲ್ಲಿ ಮೂರು ದಿನಗಳ ಕಾಲ ನಡೆದ ಪೊಲೀಸ್ ಕ್ರೀಡಾಕೂಟದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸರ ಮಕ್ಕಳಿಗೆ ಎಲ್ಲಾ ರೀತಿಯ ಕ್ರೀಡೆಗಳನ್ನು ನಡೆಸಲಾಯಿತು. ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿರುತ್ತಾರೆಂದರು.

ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಐಜಿಪಿ ಲಾಭೂರಾಮ್ ಅವರ ಪತ್ನಿ ಸಂಗೀತಾ ಅವರು ವಿಶೇಷ ಆಹ್ವಾನಿತರಾಗಿದ್ದು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.

ಕ್ರೀಡಾಕೂಟದ ಅತ್ಯುತ್ತಮ ಪಾರಿತೋಷಕವನ್ನು ಬೇತಮಂಗಲ ವೃತ್ತ ಪೊಲೀಸ್ ತಂಡವು ಪಡೆದುಕೊಂಡಿದೆ. ಕ್ರೀಡಾಕೂಟದಲ್ಲಿ ಆರ್.ಪಿ.ಐ. ವಿ. ಸೋಮಶೇಖರ್ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ, ಪಥಸಂಚಲನ ನಡೆಯಿತು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೊಲೀಸರ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದರು.

ಚಿತ್ರ : ಕೆಜಿಎಫ್ ಪೊಲೀಸ್ ಕ್ರೀಡಾಕೂಟದಲ್ಲಿ ಐಜಿಪಿ ಲಾಭೂರಾಮ್, ಎಸ್‌ಪಿ ಶಿವಾಂಶು ರಜಪೂತ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande