
ಗದಗ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ಗದ್ದುಗೆಯ ರಾಜಕಾರಣದ ನಡುವೆ, ರೋಣ ಕ್ಷೇತ್ರದಲ್ಲಿ ಸಂಪೂರ್ಣ ವಿಭಿನ್ನ ಚಿತ್ರ ಕಂಡುಬಂತು. ಇಲ್ಲಿ ಪಕ್ಷದ ಕಾರ್ಯಕರ್ತರು “ನಮ್ಮ ಶಾಸಕರಿಗೆ ಸಚಿವ ಸ್ಥಾನ ಕೊಡಲೇಬೇಕು” ಎಂಬ ಒತ್ತಾಯದೊಂದಿಗೆ ಬೀದಿಗಿಳಿದು ಹೋರಾಟಕ್ಕೆ ಇಳಿದರು.
ಗಜೇಂದ್ರಗಡದಲ್ಲಿ ಬೃಹತ್ ಪ್ರತಿಭಟನೆ
ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಸರ್ಕಲ್‌ನಲ್ಲಿ ರೋಣ ಮತ್ತು ಗಜೇಂದ್ರಗಡ ಮಹಿಳಾ ಕಾಂಗ್ರೆಸ್ ಘಟಕದ ನಾಯಕಿಯರು, ಕಾರ್ಯಕರ್ತೆಯರು ಹಾಗೂ ಹಿರಿಯ ಮುಖಂಡರು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಮಾನವ ಸರಪಳಿ ನಿರ್ಮಿಸಿ, “ಜಿ.ಎಸ್. ಪಾಟೀಲ್‌ಗೆ ನ್ಯಾಯ ಕೊಡಿರಿ”, “ನಿಷ್ಠಾವಂತರಿಗಾದರೂ ಗೌರವ” ಎಂಬ ಘೋಷಣೆಗಳಿಂದ ಪ್ರದೇಶ ಮೂಸಿಕೊಂಡಿತ್ತು.
ಕಾರ್ಯಕರ್ತರ ಆಕ್ರೋಶ ಕೇವಲ ಘೋಷಣೆಯ ಮಟ್ಟಕ್ಕೆ ಸೀಮಿತವಾಗಿರದೆ, ಕೈ ಹೈಕಮಾಂಡ್ ವಿರುದ್ಧವನ್ನೇ ಗಟ್ಟಿಯಾಗಿ ಪ್ರಶ್ನಿಸುವ ರೀತಿಯಲ್ಲಿ ಹೊರಹೊಮ್ಮಿತು.
ಪ್ರತಿಭಟನೆಯ ನಡುವೆಯೇ ಘಟನೆಗೆ ಹೊಸ ತಿರುವು ನೀಡುವಂತಾಗಿ, ಕಾರ್ಯಕರ್ತರಾದ ಸಂಗಪ್ಪ ತೇಲಿ ಮತ್ತು ರವಿಕುಮಾರ್ ದಿಢೀರ್ ಮೈ ಮೇಲೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಅವರು ಬೆಂಕಿ ಹಚ್ಚಿಕೊಳ್ಳುವ ಮುನ್ನವೇ ಸ್ಥಳೀಯ ಪೊಲೀಸರ ಹಾಗೂ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.
ಘಟನೆಯ ನಂತರ ಸಂಗಪ್ಪ ತೇಲಿ ಮಾಧ್ಯಮದ ಮುಂದೆ ಭಾವೋದ್ರಿಕ್ತರಾದರು.
“ನಮ್ಮ ಶಾಸಕರಿಗೆ ಸಚಿವ ಸ್ಥಾನ ಬಂದೇ ಬರಬೇಕು. ಇಲ್ಲದಿದ್ದರೆ ನಾವು ಬದುಕೋ ಬದುಕಿಲ್ಲ”
ಎಂದು ನೇರ ಎಚ್ಚರಿಕೆ ನೀಡಿದರು. ಈ ಹೇಳಿಕೆ ಸ್ಥಳದಲ್ಲಿದ್ದ ಜನರಲ್ಲಿ ಆತಂಕ ಉಂಟುಮಾಡಿತು.
ಪಾಟೀಲ್ ಅವರ ರಾಜಕೀಯ ಪಯಣ ಕಾರ್ಯಕರ್ತರ ಅಸಮಾಧಾನದ ಮೂಲ
78 ವರ್ಷದ ಜಿ.ಎಸ್. ಪಾಟೀಲ್ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೈನಿಕರಾಗಿದ್ದಾರೆ.
– 8 ಬಾರಿ ಚುನಾವಣೆಗೆ ಸ್ಪರ್ಧೆ
– 4 ಬಾರಿ ಶಾಸಕರಾಗಿ ಗೆಲುವು
– ಯಾವುದೇ ಬಾರಿ ಸಚಿವ ಸ್ಥಾನ ಸಿಗದ ಅನ್ಯಾಯ
ಇಷ್ಟೊಂದು ಸೇವೆ ಮಾಡಿದ ನಾಯಕನಿಗೆ ಸಚಿವ ಸ್ಥಾನ ನೀಡದಿರುವುದು ಪಕ್ಷದ ಅನ್ಯಾಯ ಎಂದು ಸ್ಥಳೀಯರು ಮತ್ತು ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಪಾಟೀಲ್ ಅವರ ದೀರ್ಘ ರಾಜಕೀಯ ಪಯಣವೇ ಇಂದಿನ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮೂಹಿಕ ರಾಜೀನಾಮೆ ಹೋರಾಟಕ್ಕೆ ಹೊಸ ತೀವ್ರತೆ
ರೋಣ, ಗಜೇಂದ್ರಗಡ, ನರೇಗಲ್ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತಮ್ಮ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೈಕಮಾಂಡ್‌ಗೆ ನೇರ ಸಂದೇಶ ಕಳುಹಿಸಿದ್ದಾರೆ.
“ಸಚಿವ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ನಾವು ಎಲ್ಲರೂ ಸಾಮೂಹಿಕವಾಗಿ ರಾಜೀನಾಮೆ ಕೊಡುತ್ತೇವೆ” ಎಂಬ ಘೋಷಣೆ ಹೋರಾಟವನ್ನು ಮತ್ತಷ್ಟು ಗಂಭೀರ ಸ್ಥಿತಿಗೆ ತಳ್ಳಿದೆ.
ರಾಜಕೀಯ ಕುತೂಹಲಕ್ಕೆ ತಿರುವು ಕಾಂಗ್ರೆಸ್ ಏನೆದುರುಗೊಳ್ಳಲಿದೆ?
ಒಂದೆಡೆ ರಾಜ್ಯ ಮಟ್ಟದಲ್ಲಿ ನಾಯಕತ್ವದ ಪೈಪೋಟಿ ನಡೆಯುತ್ತಿದ್ರೆ, ಮತ್ತೊಂದೆಡೆ ಕೆಳಮಟ್ಟದಲ್ಲಿ ಸದಸ್ಯರು, ಕಾರ್ಯಕರ್ತರು ತಮ್ಮದೇ ಸರ್ಕಾರ ಮತ್ತು ಹೈಕಮಾಂಡ್ ವಿರುದ್ಧ ಸಮರ ಸಾರುತ್ತಿರುವುದು ಕಾಂಗ್ರೆಸ್‌ಗಾಗಿ ದೊಡ್ಡ ರಾಜಕೀಯ ಬಿರುಕು ಎಂಬಂತೆ ಪರಿಣಿತರ ಅಂದಾಜು.
ರೋಣ ಕ್ಷೇತ್ರದ ಹೋರಾಟ ಈಗ ಕೇವಲ ಒಂದು ಬೇಡಿಕೆಯ ವಿಚಾರವಲ್ಲ, ಇದು ಪಕ್ಷದ ಒಳ ಕಲಹ, ಅನ್ಸುತಿರುವ ಅನ್ಯಾಯ ಮತ್ತು ನಾಯಕತ್ವದ ನಿರ್ಲಕ್ಷ್ಯದ ಚಿತ್ರಣ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಕೈ ಹೈಕಮಾಂಡ್ ಇದೀಗ ಯಾವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತದೆ? ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯಾ? ಅಥವಾ ಹೋರಾಟ ಇನ್ನಷ್ಟು ಉಗ್ರಗೊಳ್ಳುತ್ತದೆಯಾ?
ಗದಗ–ರೋಣ–ಗಜೇಂದ್ರಗಡದಲ್ಲಿ ರಾಜಕೀಯ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವುದರಲ್ಲಿ ಸಂಶಯವಿಲ್ಲ.
ಹಿಂದೂಸ್ತಾನ್ ಸಮಾಚಾರ್ / lalita MP