
ಗದಗ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 9 ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟ ವೇದಿಕೆಗೆ ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಆಗಮಿಸಿ ರೈತರಿಗೆ ನೈತಿಕ ಬೆಂಬಲ ಘೋಷಿಸಿದರು.
ಮಹಾಸ್ವಾಮಿಗಳು ಮಾತನಾಡಿದರು, ಲಕ್ಷ್ಮೀಶ್ವರ ಬಂಗಾರಕ್ಕೆ ಇಂದು ಹೆಚ್ಚಿನ ಬೆಲೆ ಇರಬಹುದು, ಆದರೆ ಜನರು ತಿನ್ನುವ ಅನ್ನಕ್ಕೆ ಬಂಗಾರಕ್ಕಿಂತಲೂ ಹೆಚ್ಚಿನ ಬೆಲೆ ಇದೆ. ಅನ್ನವಿಲ್ಲದೆ ಯಾರೂ ಬದುಕುವ ಸಾಧ್ಯತೆ ಇಲ್ಲ. ಆದರೆ, ಅದೇ ಅನ್ನ ನೀಡುವ ರೈತನ ಬೆಳೆದ ಬೆಳೆಗೆ ಇಂದು ಬೆಲೆ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಇದು ಸಮಾಜದ ದುರಂತ” ಎಂದು ಆಕ್ಷೇಪಿಸಿದರು.
“ಬೆಳೆ ಚೆನ್ನಾಗಿ ಬಂದಾಗ ಬೆಲೆ ಕೊಡಲ್ಲ, ಬೆಳೆ ಬರದಿದ್ದಾಗ ಮಾತ್ರ ಬೆಲೆ ಏರುತ್ತಿದೆ. ಅನ್ನವನ್ನು ನಿರ್ಮಿಸುವ ಮಹಾಶಕ್ತಿ ರೈತನಲ್ಲಿದೆ. ಇಂತಹ ಪವಿತ್ರ ಕೆಲಸ ಮಾಡುವ ರೈತನಿಗೆ ಹೀನಾಯ ಸ್ಥಿತಿ ಬಂದಿರುವುದು ನೋವನ್ನುಂಟು ಮಾಡುತ್ತದೆ. ರೈತರ ನ್ಯಾಯ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದರು.
ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸುವುದಾಗಿ ಹೇಳಿರುವುದು ಸ್ವಾಗತಾರ್ಯ, ವೇಗವಾಗಿ ಕ್ರಮ ಕೈಗೊಳ್ಳಬೇಕೆಂದು ಮಹಾಸ್ವಾಮಿಗಳು ಒತ್ತಾಯಿಸಿದರು.
ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಸ್ಥಳೀಯರು ಮುನ್ನಡೆಸುತ್ತಿರುವ ಹೋರಾಟಕ್ಕೆ ಸ್ವಾಮೀಜಿಯರ ಆಗಮನ ಹೊಸ ಉತ್ಸಾಹ ತುಂಬಿದ್ದು, ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕೆಂಬ ಒತ್ತಡ ಮತ್ತಷ್ಟು ಹೆಚ್ಚಾಗಿದೆ
ಹಿಂದೂಸ್ತಾನ್ ಸಮಾಚಾರ್ / lalita MP