
ವಿಜಯಪುರ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಡಿಸೆಂಬರ್ 7 ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ಅಂಗವಾಗಿ ಆಯೋಜಿಸಲಾಗಿದ್ದ ನಿಬಂಧ ಸ್ಪರ್ಧೆಗೆ ವಿದ್ಯಾರ್ಥಿಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಂದು ರವಿವಾರ ಬೆಳಿಗ್ಗೆ ಗಗನ್ ಮಹಲ್ದಲ್ಲಿ ನಿಬಂಧ ಸ್ಪರ್ಧೆಯಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಗಮನ ಸೆಳೆದಿದ್ದಾರೆ.
ಕಳೆದ ವಾರ ನಗರದ ಪ್ರಾಚೀನ ಸ್ಮಾರಕಗಳನ್ನು ಕುಂಚದ ಮೂಲಕ ಬಿಡಿಸಿದ್ದ ಮಕ್ಕಳು ಇಂದು ಕಳೆದ ಒಂದು ದಶಕದಲ್ಲಿ ಬಸವನಾಡಿನ ಪರಿಸರದಲ್ಲಿ ಆಗಿರುವ ಅಮೂಲಾಗ್ರ ಬದಲಾವಣೆಯ ಕುರಿತು ನಿಬಂಧ ಬರೆಯುವ ಮೂಲಕ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಪ್ರಾಥಮಿಕ, ಹೈಸ್ಕೂಲ್ ಹಾಗೂ ಪಿಯು ಕಾಲೇಜು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
ಒಂದೂವರೆ ಗಂಟೆಗಳ ಕಾಲ 300 ಶಬ್ದಗಳಲ್ಲಿ ಜಿಲ್ಲೆಯ ಪರಿಸರದ ಕುರಿತು ಅಕ್ಷರ ರೂಪದಲ್ಲಿ ಬರೆದರು.
ನೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿದ್ದ ಬರದ ಕುರಿತು ಬ್ರಿಟೀಷರ ದಾಖಲೆಯಲ್ಲಿಯೇ ಪ್ರಸ್ತಾಪವಾಗಿತ್ತು. ವಿಜಯಪುರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದೇ ದಾಖಲಾಗಿತ್ತು. ಆದರೆ, ಈಗ ಒಂದು ದಶಕದಲ್ಲಿ ಪರಿಸ್ಥಿತಿ ಅಮೂಲಾಗ್ರವಾಗಿ ಬದಲಾಗಿದೆ. ಕೋಟಿ ವೃಕ್ಷ ಅಭಿಯಾನದಿಂದ ಪ್ರಾರಂಭವಾದ ಅರಣ್ಯ ಕ್ರಾಂತಿ ಈಗ ಒಂದೂವರೆ ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಲಾಗಿದೆ. ಕರಾಡ ದೊಡ್ಡಿನಲ್ಲಿ ಮತ್ತು ಮಮದಾಪುರ ಬಳಿ ಮಾನವ ನಿರ್ಮಿತ ಅರಣ್ಯ ವಾತಾರವಣವನ್ನೇ ಬದಲಾಯಿಸಿದೆ.
ನೀರಾವರಿಯಿಂದಾಗಿ ಜಿಲ್ಲೆಯಲ್ಲಿ ಹಸಿರು ಕ್ರಾಂತಿಯೂ ಆಗಿದೆ. ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಾಗಿದ್ದು, ಬಿಸಿಲಿನ ತಾಪಮಾನವೂ ಕಡಿಮೆಯಾಗಿದೆ. ಮಳೆಯ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆ ಶುದ್ಧ ಗಾಳಿಯಲ್ಲಿ ದೇಶದಲ್ಲಿಯೇ ಮೊದಲ ಮೂರು ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ಈ ಎಲ್ಲ ವಿಷಯಗಳನ್ನು ಆಧರಿಸಿ ಜಿಲ್ಲೆಯಲ್ಲಿ ಉಂಟಾಗಿರುವ ಪರಿಸರ ಕ್ರಾಂತಿಯ ಬಗ್ಗೆ ವಿದ್ಯಾರ್ಥಿಗಳು ನಿಬಂಧ ಬರೆದರು.
ನಿಬಂಧದ ಮೂರು ಬೇರೆ ಬೇರೆ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ರೂ. 10 ಸಾವಿರ, ದ್ವಿತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ರೂ. 7 ಸಾವಿರ, ತೃತೀಯ ಸ್ಥಾನ ಪಡೆಯುವವರಿಗೆ ರೂ. 3 ಸಾವಿರ ಹಾಗೂ ತಲಾ ಇಬ್ಬರಿಗೆ ಸಮಾಧಾನಕರ ರೂ. 2500 ನಗದು ಬಹುಮಾನ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸ್ಪರ್ಧೆಯ ಉಸ್ತುವಾರಿಗಳಾದ ಅಮೀತ ಬಿರಾದಾರ ಮತ್ತು ರಮೇಶ ಬಿರಾದಾರ ಮಾಹಿತಿ ನೀಡಿದ್ದಾರೆ.
ಈ ಸ್ಪರ್ಧೆಯ ಕುರಿತು ಪ್ರತಿಕ್ರಿಯೆ ನೀಡಿದ ಪೋಷಕರಾದ ಅರವಿಂದ ಯಾದವ ಮತ್ತು ಶ್ರೀಮಂತ ಡೊಣಗಿ, ನಮ್ಮ ಮಕ್ಕಳು ಇಲ್ಲಿಗೆ ಬಂದು ನಿಬಂಧ ಬರೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯ ಪರಿಸರದಲ್ಲಿ ಆಗಿರುವ ಬದಲಾವಣೆಯನ್ನು ಕಂಡಿರುವ ಮಕ್ಕಳು ಅದನ್ನು ಅಕ್ಷರ ರೂಪದಲ್ಲಿ ಮನಮುಟ್ಟುವಂತೆ ಬರೆಯುತ್ತಿರುವುದು ಸಂತಸ ಮೂಡಿಸಿದೆ. ಇಂಥ ಸ್ಪರ್ಧೆಗಳು ಮಕ್ಕಳಲ್ಲಿ ಜ್ಞಾನ ವೃದ್ಧಿಗೆ ಮತ್ತು ಸ್ಪರ್ಧೆಗಳಲ್ಲಿ ಪಾಲ್ಗೋಳ್ಳಲು ಮತ್ತಷ್ಟು ಉತ್ತೇಜನ ನೀಡುತ್ತವೆ ಎಂದು ತಿಳಿಸಿದರು.
ಈ ಸ್ಪರ್ಧೆ ಆಯೋಜನೆ ವೇಳೆ ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಮತ್ತು ವೃಕ್ಷಥಾನ್ ಕೋರ್ ಕಮಿಟಿಯ ಡಾ. ಮಹಾಂತೇಶ ಬಿರಾದಾರ, ಡಾ. ಮುರುಗೇಶ ಪಟ್ಟಣಶೆಟ್ಟಿ, ಡಾ. ಪ್ರವೀಣ ಚೌರ, ವಿನಯ ಕಂಚ್ಯಾಣಿ, ಶಿವಾನಂದ ಯರನಾಳ, ಸೋಮಶೇಖರ ಸ್ವಾಮಿ, ಶಿವನಗೌಡ ಪಾಟೀಲ, ಸೋಮು ಮಠ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande