ಅಸುಂಡಿ ಗ್ರಾಮಕ್ಕೆ ಗೋವಿನ ಜೋಳ ಖರೀದಿ ಕೇಂದ್ರ ಬೇಡಿಕೆ: ಸಚಿವ ಎಚ್.ಕೆ. ಪಾಟೀಲ್ ಸ್ಪಂದನೆ
ಗದಗ, 23 ನವೆಂಬರ್ (ಹಿ.ಸ.) ಆ್ಯಂಕರ್:- ಗದಗ ತಾಲೂಕಿನ ಅಸುಂಡಿ ಗ್ರಾಮದ ರೈತರ ದೀರ್ಘಕಾಲದ ಬೇಡಿಕೆಯಾದ ಗೋವಿನ ಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಹೊಸ ದಿಕ್ಕು ಸಿಕ್ಕಂತಾಗಿದೆ. ಇಂದು ಅಸುಂಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ತಂಡ ಸಚಿವ ಎಚ್.ಕೆ. ಪಾಟೀಲ್ ಅವರನ್ನು
ಫೋಟೋ


ಗದಗ, 23 ನವೆಂಬರ್ (ಹಿ.ಸ.)

ಆ್ಯಂಕರ್:- ಗದಗ ತಾಲೂಕಿನ ಅಸುಂಡಿ ಗ್ರಾಮದ ರೈತರ ದೀರ್ಘಕಾಲದ ಬೇಡಿಕೆಯಾದ ಗೋವಿನ ಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಹೊಸ ದಿಕ್ಕು ಸಿಕ್ಕಂತಾಗಿದೆ. ಇಂದು ಅಸುಂಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ತಂಡ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಿ ಖರೀದಿ ಕೇಂದ್ರ ತೆರೆಯುವ ಅಗತ್ಯವನ್ನು ವಿವರಿಸಿ ಮನವಿ ಸಲ್ಲಿಸಿದರು.

ಪದಾಧಿಕಾರಿಗಳು ಸಲ್ಲಿಸಿದ ಮನವಿಯನ್ನು ಸಚಿವರು ಆಲಿಸಿ, “ರೈತರಿಗೆ ಹೆಚ್ಚಿನ ತೊಂದರೆ ಆಗಬಾರದು, ಖರೀದಿ ಪ್ರಕ್ರಿಯೆ ಗ್ರಾಮ ಮಟ್ಟದಲ್ಲೇ ಸುಗಮವಾಗಬೇಕು” ಎಂದು ಹೇಳಿ ತಕ್ಷಣವೇ ಜಿಲ್ಲಾಧಿಕಾರಿ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದು ಮಹತ್ವ ಪಡೆದಿದೆ.

ಅಸುಂಡಿ ಪ್ರದೇಶದಲ್ಲಿ ಮೆಕ್ಕಿಜೋಳ ಬೆಳೆಯು ರೈತರು ಹೆಚ್ಚು ಇರುವುದರಿಂದ, ರೈತರು ದೂರದ ಕೇಂದ್ರಗಳಿಗೆ ತೆರಳದೇ ಗ್ರಾಮದಲ್ಲೇ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂಬ ಅಭಿಪ್ರಾಯಕ್ಕೆ ಸಚಿವರು ಬೆಂಬಲ ವ್ಯಕ್ತಪಡಿಸಿದರು.

ಮಾರಾಟ ಕೇಂದ್ರಗಳ ಕೊರತೆಯಿಂದ, ಅಸುಂಡಿ ಹಾಗೂ ಸುತ್ತಮುತ್ತಲಿನ ರೈತರು ಗದಗ ಹಾಗೂ ಇತರ ಪಟ್ಟಣಗಳಿಗೆ ಮೆಕ್ಕೆಜೋಳ ಸಾಗಿಸಲು ಹೆಚ್ಚುವರಿ ವೆಚ್ಚ ಹಾಗೂ ಸಮಯ ಕಳೆಯಬೇಕಾಗುತ್ತಿತ್ತು. ಕೆಲವೊಮ್ಮೆ ಸಾರಿಗೆ ತೊಂದರೆ, ಮಾರುಕಟ್ಟೆಯಲ್ಲಿ ದೀರ್ಘ ನಿರೀಕ್ಷೆ ಇವೆಲ್ಲವು ರೈತರ ಮೇಲೆ ಭಾರವಾಗಿತ್ತು. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘ ಮುನ್ನಡೆಸಿ, ಅಧಿಕೃತವಾಗಿ ಸಚಿವರಿಗೆ ಮನವಿ ಸಲ್ಲಿಸಿತು.

ಸಚಿವರ ತಕ್ಷಣದ ಸ್ಪಂದನೆ ಗ್ರಾಮದಲ್ಲಿ ಹರ್ಷ ಮೂಡಿಸಿದೆ. ಖರೀದಿ ಕೇಂದ್ರದ ಕಾರ್ಯರೂಪಕ್ಕೆ ಬಂದರೆ ಮೆಕ್ಕಿಜೋಳ ಮಾರಾಟ ಪ್ರಕ್ರಿಯೆ ಪಾರದರ್ಶಕ, ಸುಲಭ ಹಾಗೂ ರೈತ ಸ್ನೇಹಿ ಆಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಶೀಘ್ರ ಕ್ರಮ ಕೈಗೊಳ್ಳುವುದನ್ನು ರೈತ ಸಮುದಾಯ ಕಾತರದಿಂದ ಕಾಯುತ್ತಿದೆ.

ಅಸುಂಡಿ ಗ್ರಾಮಕ್ಕೆ ಗೋವಿನ ಜೋಳ ಖರೀದಿ ಕೇಂದ್ರ ಸಿಗುವ ದಿನ ದೂರದಲ್ಲಿಲ್ಲ ಎಂಬ ವಿಶ್ವಾಸ ಇದೀಗ ಮೂಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande