ಮುಖ್ಯಮಂತ್ರಿ ಗದ್ದುಗೆ ಗುದ್ದಾಟ ನಡುವೆ ಸಚಿವ ಸ್ಥಾನಕ್ಕಾಗಿ ರೋಣ ಶಾಸಕರ ಲಾಬಿ
ಗದಗ, 23 ನವೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿದೆ ಈ ವೇಳೆಗೆ, ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಇದೀಗ ಸಚಿವ ಸ್ಥಾನಕ್ಕಾಗಿ ನೇರವಾಗಿ ಒತ್ತಾಯ ಪ್ರಾರಂಭಿಸಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು ತಮ್ಮ ಕ್ಷೇತ್ರದ ಜನರು ಸಚಿವ ಸ್ಥಾನಕ್ಕೆ ಒತ್
ಫೋಟೋ


ಗದಗ, 23 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿದೆ ಈ ವೇಳೆಗೆ, ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಇದೀಗ ಸಚಿವ ಸ್ಥಾನಕ್ಕಾಗಿ ನೇರವಾಗಿ ಒತ್ತಾಯ ಪ್ರಾರಂಭಿಸಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು ತಮ್ಮ ಕ್ಷೇತ್ರದ ಜನರು ಸಚಿವ ಸ್ಥಾನಕ್ಕೆ ಒತ್ತಾಯಿಸುತ್ತಿರುವುದನ್ನು ಬಹಿರಂಗಪಡಿಸಿದರು.

ಜನರ ಹಕ್ಕೊತ್ತಾಯ – ಕಾರ್ಯಕರ್ತರ ಆತಂಕಕಾರಿ ಪ್ರತಿಭಟನೆ

“ನನಗೆ ಸಚಿವ ಸ್ಥಾನ ಕೊಡಬೇಕು ಅಂತಾ ಜನ ಹಕ್ಕೊತ್ತಾಯ ಮಾಡ್ತಿದ್ದಾರೆ. ಆದರೆ ನನ್ನ ಗಮನಕ್ಕೆ ತರದೆ ಕೆಲವರು ಉಗ್ರ ಹೋರಾಟ ಮಾಡ್ತಿದ್ದಾರೆ. ಆತ್ಮಹತ್ಯೆಗೆ ಯತ್ನಿಸುವುದಂತೂ ದೊಡ್ಡ ತಪ್ಪು,” ಎಂದು ಪಾಟೀಲ್ ಕಾರ್ಯಕರ್ತರಿಗೆ ಸಂದೇಶ ನೀಡಿದರು.

ರೋಣಕ್ಕೆ ಅನ್ಯಾಯ? ಗದಗ–ರೋಣ ತಾರತಮ್ಯ ಆರೋಪ

“ಗದಗ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗುತ್ತೆ… ಆದರೆ ರೋಣಕ್ಕೆ ಮಾತ್ರ ಮಲತಾಯಿ ಧೋರಣೆ. ಎಚ್.ಕೆ. ಪಾಟೀಲ್ ಯಾವಾಗಲೂ ಅಧಿಕಾರದಲ್ಲೇ ಇರ್ತಾರೆ. ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ಅವರಿಗೆ ಸಚಿವ ಸ್ಥಾನ ಗ್ಯಾರಂಟಿ. ಈ ಬಾರಿಯಾದರೂ ರೋಣ ಕ್ಷೇತ್ರಕ್ಕೂ ಗೌರವ ಸಿಗಬೇಕು,” ಎಂದು ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಲಿಂಗಾಯತ ಮಠಾಧೀಶರ ಬೆಂಬಲದ ಉಲ್ಲೇಖ

“ನಾನು ಲಿಂಗಾಯತ… ಎಲ್ಲ ಮಠಾಧೀಶರ ಜೊತೆ ಉತ್ತಮ ಸಂಬಂಧ ಇದೆ. ಈ ಬಾರಿ ನನಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋ ವಿಶ್ವಾಸ ಇದೆ,” ಎಂದು ಅವರು ಹೇಳಿದರು.

ಡಿ.ಕೆ. ಶಿವಕುಮಾರ್ ಭೇಟಿ ವಿವಾದಕ್ಕೆ ಸ್ಪಷ್ಟನೆ

ಪಾಟೀಲ್ ಡಿಕೆಶಿ ಭೇಟಿ ವಿಚಾರವನ್ನು ರಾಜಕೀಯ ಬಣಗಳ ದೃಷ್ಟಿಯಿಂದ ನೋಡುವುದನ್ನು ತಳ್ಳಿ ಹಾಕಿದರು.

“ಡಿ.ಕೆ. ಶಿವಕುಮಾರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು, ನಾನು ಜಿಲ್ಲೆಯ ಅಧ್ಯಕ್ಷ. ನನ್ನ ಕ್ಷೇತ್ರದ ಕೆಲಸಗಳಿಗಾಗಿ ಅವರನ್ನು ಭೇಟಿಯಾಗಿದ್ದೇನೆ. ಮಂತ್ರಿಯಾಗಬೇಕು ಎಂದರೆ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರನ್ನು ಭೇಟಿ ಮಾಡೋದು ಸಹಜ,” ಎಂದರು.

ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಗೆ ಉತ್ತರ

“ಮುಖ್ಯಮಂತ್ರಿ ಬದಲಾವಣೆ ವಿಷಯ ನಮ್ಮದು ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಯಾವ ನಿರ್ಣಯ ಮಾಡಿದರೂ ನಮಗೆ ಬದ್ದತೆ ಇದೆ,” ಎಂದು ಪಾಟೀಲ್ ಪ್ರತಿಕ್ರಿಯಿಸಿದರು.

ಅಂತಿಮವಾಗಿ ಅವರು ಮಹತ್ವದ ಸುಳಿವು ನೀಡಿದರು:

“ನನಗೆ ಸಚಿವ ಸ್ಥಾನಕ್ಕೆ ವರಿಷ್ಠರು ಗ್ರೀನ್ ಸಿಗ್ನಲ್ ತೋರಿಸಿದ್ದಾರೆ,” ಎಂದು ಹೇಳುವುದರ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ತಿರುಳು ತುಂಬಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande