ಸಿ.ಎಸ್.ಆರ್ ಅನುದಾನದಡಿ ಸ್ಮಾರ್ಟ್ ಕ್ಲಾಸ್ ಮತ್ತು ಕ್ರೀಡಾ ಸೌಲಭ್ಯ
ವಿಜಯಪುರ, 22 ನವೆಂಬರ್ (ಹಿ.ಸ.) : ಆ್ಯಂಕರ್ : ವಿದ್ಯಾರ್ಥಿಗಳನ್ನು ಬೌದ್ಧಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡಲು ಸಿ.ಎಸ್.ಆರ್ ಅನುದಾನದಡಿ ಸ್ಮಾರ್ಟ್ ಕ್ಲಾಸ್ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ
ಸಚಿವ


ವಿಜಯಪುರ, 22 ನವೆಂಬರ್ (ಹಿ.ಸ.) :

ಆ್ಯಂಕರ್ : ವಿದ್ಯಾರ್ಥಿಗಳನ್ನು ಬೌದ್ಧಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡಲು ಸಿ.ಎಸ್.ಆರ್ ಅನುದಾನದಡಿ ಸ್ಮಾರ್ಟ್ ಕ್ಲಾಸ್ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಉನ್ನತೀಕರಿಸಿದ ಸರಕಾರಿ ಪ್ರೌಢಶಾಲೆ ಪ್ರಾರಂಭೋತ್ಸವದ ಅಂಗವಾಗಿ 9ನೇ ತರಗತಿ ಉದ್ಘಾಟನೆ, ಸರಸ್ವತಿ ಪೂಜೆ ಹಾಗೂ ಸಿ.ಎಸ್.ಆರ್ ಅನುದಾನದಲ್ಲಿ ಶಾಲಾ ಮಕ್ಕಳಿಗಾಗಿ ಅಳವಡಿಸಿರುವ ಕ್ರೀಡಾ ಸಲಕರಣೆಗಖನ್ನು ವಿದ್ಯಾರ್ಥಿಗಳಿಂದ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಇಲ್ಲಿನ ವಿದ್ಯಾರ್ಥಿಗಳು ಹೈಸ್ಕೂಲು‌ ಶಿಕ್ಷಣಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಮತ್ತು ಪೋಷಕರ ಕಾಳಜಿಗೆ ಸ್ಪಂದಿಸಲು‌ ಸರಕಾರಿ ಹೈಸ್ಕೂಲು ಪ್ರಾರಂಭಿಸಬೇಕು ಎಂಬ ಬಹುದಿನಗಳ ಬೇಡಿಕೆಯನ್ನು ಈಗ ಈಡೇರಿಸಿದ್ದೇನೆ. ವಿಶೇಷವಾಗಿ ವಿದ್ಯಾರ್ಥಿನಿಯರು ತಮ್ಮೂರಿನಲ್ಲಿಯೇ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಲು ಇದರಿಂದ ಅನುಕೂಲವಾಗಲಿದೆ. ಹೈಸ್ಕೂಲು ಪ್ರಾರಂಭಿಸಲು ಸಾಕಷ್ಟು ಶ್ರಮ ವಹಿಸಿದ್ದೇವೆ. ಮಕ್ಕಳಿಂದಲೇ ಈಗ ಉದ್ಘಾಟನೆ ಮಾಡಿಸಿದ್ದೇನೆ. ಕೆಂಪೆಗೌಡ ಅಂತಾರಾಷ್ಡ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿ.ಎಸ್.ಆರ್ ಅನುದಾನ ಬಳಸಿ ಇಲ್ಲಿ ಶಾಲೆ ಉನ್ನತೀಕರಿಸಲಾಗಿದೆ. ಈ ಶಾಲೆಗೆ ಅಲ್ಲಿನ ಅಧಿಕಾರಿಗಳು ಇಂದು ಭೇಟಿ ನೀಡಿದ್ದು, ಈ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಿದ್ದಾರೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಸಿ.ಎಸ್.ಆರ್ ಅನುದಾನದಡಿ ರೂ. 200 ಕೋ. ವೆಚ್ಚದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಒಟ್ಟು 211 ಕೊಠಡಿಗಳನ್ನು ನಿರ್ಮಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಈವರೆಗೆ ರೂ. 53 ಕೋ. ವೆಚ್ಚ ಮಾಡಲಾಗಿದೆ. ಹೊಂಡಾ ಕಂಪನಿಯವರು ಇಲ್ಲಿ ರೂ. 2.50 ಕೋ. ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲಿದ್ದಾರೆ ಎಂದು ಅವರು ತಿಳಿಸಿದರು‌.

ಮತಕ್ಷೇತ್ರದ ಎಲ್ಲ ಹೈಸ್ಕೂಲುಗಳ 10ನೇ ತರಗತಿಗಳಲ್ಲಿ ಈಗಾಗಲೇ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ವರ್ಷ 8 ಮತ್ತು 9 ತರಗತಿಗಳಿಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಹೈನೋದ್ಯಮಕ್ಕೆ ಮತ್ತು ಆಹಾರ ಸಂಸ್ಕರಣೆ ಘಟಕ‌ ಪ್ರಾರಂಭಿಸಲು ಸಹಾಯ ಮಾಡಲಾಗುತ್ತಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.

ನಿವೃತ್ತ ಶಿಕ್ಷಕ ಅರವಿಂದ ಮಸಳಿ ಮಾತನಾಡಿ, ಗ್ರಾಮದ ವಿದ್ಯಾರ್ಥಿಗಳು ಹೈಸ್ಕೂಲು ಶಿಕ್ಷಣ ಪಡೆಯಲು ಪಕ್ಕದ ಊರಿಗೆ ತೆರಳಲು ಪರದಾಡುತ್ತಿದ್ದರು. ಸಚಿವರು ಈ ಶಾಲೆ ಉನ್ನತೀಕರಿಸಿ ವಿದ್ಯಾರ್ಥಿಗಳು ಮತ್ತು ಪೋಷಕರ ಸಮಸ್ಯೆ ಬಗೆಹರಿಸಿದ್ದಾರೆ. ಅಷ್ಟೇ ಅಲ್ಲ, ಜಿಲ್ಲೆಯ.ಬಡಮಕ್ಕಳಿಗೆ ಶಿಕ್ಷಣಕ್ಕಾಗಿ ನೆರವಾಗುವ ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ. ನೀರಾವರಿ ಮೂಲಕ ರೈತರ ಬಾಳು ಹಸನು ಮಾಡಿದ್ದಾರೆ. ಆರ್ಥಿಕ ಸ್ಥಿತಿ ಸುಧಾರಿಸಲು ಕಾರಣರಾಗಿದ್ದಾರೆ. ಸಚಿವರೆಂದರೆ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ.‌‌ ಪ್ರಜ್ಞಾವಂತರಾದ ನಾವು ಇದನ್ನು ಅರ್ಥ ಮಾಡಿಕೊಂಡು ಬಸವಣ್ಣನವರ ತತ್ವಾದರ್ಶದಡಿ ಕಾಯಕ ಮಾಡುತ್ತಿರುವ ಎಂ. ಬಿ. ಪಾಟೀಲರ ಕೊಡುಗೆಯನ್ನು ಸದಾ ಸ್ಮರಿಸಿ ಅವರಿಗೆ ಚಿರಋಣಿಯಾಗಿರಬೇಕು ಎಂದು ಹೇಳಿದರು.

ವಿಜಯಪುರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ, ಸಚಿವರು ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಈ ಶಾಲೆ ಉನ್ನತೀಕರಣ ಮಾಡುವ ಮೂಲಕ ಈಡೇರಿಸಿದ್ದಾರೆ. ರಾಜ್ಯದಲ್ಲಿಯೇ ಬಬಲೇಶ್ವರ‌ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಆರು ಪ್ರೌಢ ಶಾಲೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಂಡಿದ್ದಾರೆ. ರೂ. 100 ಕೋ. ಸಿ.ಎಸ್.ಆರ್ ಅನುದಾನದಲ್ಲಿ ಮತಕ್ಷೇತ್ರದ 100 ಶಾಲೆಗಳಲ್ಲಿ ತಲಾ ರೂ. 1 ಕೋ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. 80 ಶಾಲೆಗಳಲ್ಲಿ ಹೆಚ್ಚುವರಿ‌ ಕೋಣೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಮತಕ್ಷೇತ್ರದ ಎಲ್ಲ 40 ಪ್ರೌಢ ಶಾಲೆಯಲ್ಲಿ 10ನೇ ತರಗತಿಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಿದ್ದಾರೆ. ಮಮದಾಪುರಕ್ಕೆ ಭೇಟಿ‌ ನೀಡಿದ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಯೊಬ್ಬರು ಅಲ್ಲಿನ ಸುಸಜ್ಜಿತ ಸರಕಾರಿ‌ ಶಾಲೆಯನ್ನು ವೀಕ್ಷಿಸಿ ಸಂತಸ ಪಟ್ಟು ಅದರ ಬ್ಲ್ಯೂಪ್ರಿಂಟ್ ತೆಗೆದುಕೊಂಡು ಹೋಗಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜೊತೆ ಸ್ವಾಸ್ತ್ಯ ಒದಗಿಸಲು ಕ್ರೀಡಾ ಸಲಕರಣೆ ಸೌಲಭ್ಯ ಒದಗಿಸಿದ್ದಾರೆ. ಮೂಲಭೂತ ಸೌಲಭ್ಯ ಒದಗಿಸಿರುವ ಪರಿಣಾಮ ಹೆಚ್ಚಿನ‌ ಸಂಖ್ಯೆಯಲ್ಲಿ ಮಕ್ಕಳು ಸರಕಾರಿ ಶಾಲೆಗಳಲ್ಲಿ ‌ಪ್ರವೇಶ ಪಡೆಯುತ್ತಿದ್ದಾರೆ. ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳ ಕನಸು ನನಸು ಮಾಡಲು ಶಿಕ್ಷಕರು ಮತ್ತು ಸಿಬ್ಬಂದಿ ಶ್ರಮಿಸಲಿದ್ದೇವೆ ಎಂದು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಗಳು ತಮ್ಮೂರಿನ ಶಾಲೆಯನ್ನು ಉನ್ನತೀಕರಿಸಿದ ಸಚಿವ ಎಂ. ಬಿ. ಪಾಟೀಲ ಅವನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಿಜಯಕುಮಾರ ಗುರಸಿದ್ದಯ್ಯ ಹಿರೇಮಠ, ತುಕಾರಾಮ ದಡಕೆ, ರಾಮನಗೌಡ ಸಿದ್ಧನಗೌಡ ಚಾವರ, ನಬಿರಸೂಲ ತೆಲಸಂಗ, ಸಿದ್ದು ಗೌಡನವರ, ಸಿದ್ದು ಬೆಳಗಾವಿ, ಯಾಕೂಬ ಜತ್ತಿ, ಶೈಲೇಂದ್ರ ಬಾವಿಮನಿ, ಸಾಬು‌ ಖಂಡೇಕರ, ಮುರಿಗೆಪ್ಪ ಕೋಟಿ, ಶೋಭಾ ಶೀಳಿನ, ಸುರೇಶಗೌಡ ಪಾಟೀಲ, ಬಸವರಾಜ ನರಳೆ, ಸೀತಾರಾಮ ನರಳೆ, ದುಂಡಪ್ಪ ವಾಲಿಕಾರ, ಅಕ್ಬರ ತಿಕೋಟಿ, ತಹಸೀಲ್ದಾರ ಸುರೇಶ ಚವಲರ, ತಾ. ಪಂ. ಇಓ ಬಸವಂತರಾಯ ಬಿರಾದಾರ, ಸಿಪಿಐ ರಮೇಶ ಅವಜಿ, ಶೋಭಾ, ಮುಂತಾದವರು ಉಪಸ್ಥಿತರಿದ್ದರು.

ಮೆಹತಾಬ್ ಕಾಗವಾಡ ಪ್ರಾರ್ಥಿಸಿದರು. ಪರಶುರಾಮ ಭಜಂತ್ರಿ ನಾಗೀತೆ ಹಾಡಿದರು. ಮಾಲಗಾರ ಸ್ವಾಗತಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande