
ವಿಜಯಪುರ, 22 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಸೋಮದೇವರಹಟ್ಟಿ ತಾಂಡಾ ದುರ್ಗಾದೇವಿ ಮಂದಿರ ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಒಂದು ಎಂಬ ಖ್ಯಾತಿ ಗಳಿಸಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾದಲ್ಲಿ ಮಹಾದ್ವಾರದಿಂದ ದೇವಸ್ಥಾನದವರೆಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ರೂ.50 ಲಕ್ಷ ಅನುದಾನದಲ್ಲಿ ಕೈಗೊಳ್ಳಲಿರುವ ಸಿ.ಸಿ ರಸ್ತೆಯ ನಿರ್ಮಾಣಕ್ಕೆ ಚಾಲನೆ, ಅರವಿಂದ ನಾಯಿಕರವರ ಮನೆಯಿಂದ ಹೀರು ವೇಣು ರಾಠೋಡರ ಮನೆವರೆಗಿನ ಮಾರ್ಗಕ್ಕೆ ರೂ.20 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ, ದೇವಸ್ಥಾನದ ಸಮೀಪ ಪಿ.ಆರ್.ಇ.ಡಿ ನಿಧಿಯಲ್ಲಿ ರೂ.11 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಯೊಜನೆಗೆ ಚಾಲನೆ ಹಾಗೂ ರೂ. 5 ಲಕ್ಷ ವೆಚ್ಚದ ಹೈಮಾಸ್ಕ್ ದೀಪದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದೇವಸ್ಥಾನದ ಜಗನು ಮಹಾರಾಜರು ಸೋಮದೇವರಹಟ್ಟಿ ತಾಂಡಾದಲ್ಲಿರುವ ದುರ್ಗಾದೇವಿ ದೇವಸ್ಥಾನವನ್ನು ಇಡೀ ದೇಶಕ್ಕೆ ಪರಿಚಯಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಏಕಾಂಗಿ ಸೈನಿಕ ಮತ್ತು ಸೇನಾಧಿಕಾರಿ(ಒನ್ ಮ್ಯಾನ್ ಆರ್ಮಿ) ರೀತಿಯಲ್ಲಿ ಶ್ರಮಿಸಿದ್ದಾರೆ. ದೇಶದ ನಾನಾ ಭಾಗಳಿಂದ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಚಿವರು, ಶಾಸಕರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಆಹ್ವಾನಿಸಿ ದೇವಸ್ಥಾನದ ಮಹಿಮೆಯನ್ನು ಸಾರಿದ್ದಾರೆ. ರೂ. 75 ಲಕ್ಷ ವೆಚ್ಚದ ಅನುದಾನದಲ್ಲಿ ಸುಂದರವಾದ ಮಂಟಪವನ್ನು ಇಲ್ಲಿ ನಿರ್ಮಿಸಿದ್ದಾರೆ. ರಾಮರಾವ ಮಹಾರಾಜರ ಮಾದರಿಯಲ್ಲಿ ಕ್ಷೇತ್ರವನ್ನು ಆಭಿವೃದ್ಶಿ ಪಡಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರ ಇನ್ನೂ ಶೇಕಡ 100ರಷ್ಟು ಅಭಿವೃದ್ಧಿಯಾಗಲಿದೆ ಎಂದು ಸಚಿವರು ಹೇಳಿದರು.
ಮುಖಂಡ ಡಾ. ಬಾಬುರಾಜೇಂದ್ರ ನಾಯಕ ಮಾತನಾಡಿ, ಸಚಿವ ಎಂ. ಬಿ. ಪಾಟೀಲರ ನೀರಾವರಿ ಮತ್ತೀತರ ಅಭಿವೃದ್ಧಿ ಕೆಲಸಗಳಿಂದ ತಾಂಡಾಗಳ ಜನ ಗುಳೆ ಹೋಗುವುದು ತಪ್ಪಿದೆ. ಜೋಳ ಬೆಳೆಯದ ಹೊಲದಲ್ಲಿ ದ್ರಾಕ್ಷಿ ಬೆಳೆಯುವಂತಾಗಿದೆ. ಜಿಲ್ಲೆಗೆ ಕೈಗಾರಿಕೆಗಳನ್ನು ತರುತ್ತಿದ್ದಾರೆ. ಸಿ.ಎಸ್.ಆರ್ ಅನುದಾನ ಬಳಸಿ ಶಾಲೆಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಸೋಮದೇವರಹಟ್ಟಿ ತಾಂಡಾಕ್ಕೆ ದ್ವಿಪಥ ರಸ್ತೆ ಮಾಡಿಸುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುಂಚೆ ಗ್ರಾಮಕ್ಕೆ ಆಗಮಿಸಿದ ಸಚಿವ ಎಂ. ಬಿ. ಪಾಟೀಲ ಅವರನ್ನು ತಾಂಡಾದ ಜನತೆ ಡೊಳ್ಳು ಬಾರಿಸುತ್ತ ಪಟಾಕಿ ಸಿಡಿಸಿ ಸ್ವಾಗತಿಸಿದರು. ಇದೇ ವೇಳೆ ಸಚಿವರು ದೇವಸ್ಥಾನಕ್ಕೆ ತೆರಳಿ ಮಾತಾ ದುರ್ಗಾದೇವಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮುಖಂಡರಾದ ಜಗನು ಮಹಾರಾಜ, ತಾಲೂಕು ಪಂಚಾಯಿತಿ ಇಓ ಬಸವಂತರಾಯಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಗುರು ಮಾಳಿ, ಸುರೇಶ ಪವಾರ, ಭೀಮು ರಾಥೋಡ, ಅರವಿಂದ್ ನಾಯಕ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande