
ಕೋಲಾರ, ೨೨ ನವಂಬರ್ (ಹಿ.ಸ.) :
ಆ್ಯಂಕರ್ : ಕಾರ್ಮಿಕರಿಗೆ ಸಂಬಂಧಿಸಿದ ೨೯ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು. ಈ ನೀತಿಯಿಂದಾಗಿ ದುಡಿಯುವ ವರ್ಗವನ್ನು ಬೀದಿಗೆ ತಂದು ನಿಲ್ಲುಸುವ ಉನ್ನಾರವಾಗಿದೆ ಕಾರ್ಮಿಕ ವಿರೋಧಿ ಈ ಸಂಹಿತೆಗಳನ್ನು ರದ್ದುಗೊಳಿಸಿ ಕಾರ್ಮಿಕ ವರ್ಗದ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಲಿ ಎಂದು ನಗರದ ಮೆಕ್ಕೆ ವೃತ್ತದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂದ ನಂತರದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಇತ್ತಿಚೆಗೆ ನಡೆದ ಬಿಹಾರ್ ರಾಜ್ಯದ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿ ಅಧಿಕಾರಕ್ಕೆ ಬಂದ ತಕ್ಷಣವೇ ಕಾರ್ಮಿಕರ ಸಂಹಿತೆಗಳು ಜಾರಿ ಮಾಡಿ ಕಾರ್ಮಿಕರನ್ನು ಬೀದಿಗೆ ನಿಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ ದೇಶದಲ್ಲಿ ಶೇಕಡಾ ೭೦ರಷ್ಟು ದುಡಿಯುವ ವರ್ಗದ ಕಾರ್ಮಿಕರು ಈ ಸಂಹಿತೆಗಳ ವ್ಯಾಪ್ತಿಗೆ ಒಳಪಡುವುದೇ ಇಲ್ಲ. ಕಾರ್ಮಿಕ ಸಂಘಗಳ ಮುಷ್ಕರದ ಹಕ್ಕುಗಳನ್ನು ಹಂತ ಹಂತವಾಗಿ ನಿರ್ಬಂಧಿಸಲಾಗುತ್ತಿದೆ. ಸಂಘಟಿತರಾಗಿ ಕಾರ್ಯಕ್ರಮಗಳನ್ನು ನಡೆಸಿದರೆ ಅದೂ ಅಪರಾಧ ಆಗುತ್ತದೆ. ಬಂಡವಾಳಶಾಹಿಗಳ ಹಿತಕ್ಕಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಖಜಾಂಚಿ ಹೆಚ್.ಬಿ ಕೃಷ್ಣಪ್ಪ ಮಾತನಾಡಿ ನರೇಂದ್ರ ಮೋದಿ ಅವರು ದೇಶವನ್ನು ಹಿಂದುತ್ವದ ಆಧಾರದಲ್ಲಿ ಕಟ್ಟಬೇಕು ಎನ್ನುತ್ತಾರೆ. ಇಲ್ಲಿ ಕೆಲಸ ಮಾಡುವ ಬಹುತೇಕರು ಹಿಂದೂಗಳೇ ಆಗಿದ್ದಾರೆ. ಆದರೆ ಹಿಂದೂ ಎನ್ನುವ ಪದವನ್ನು ಬಂಡವಾಳಶಾಹಿಗಳ ಹಿತ ಕಾಯಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಕಾರ್ಮಿಕರನ್ನು ಜೀತದಾಳು ಮಾಡಲು ಹೊರಟಿದೆ ಈ ಸಂಹಿತೆಗಳು ಅನುಷ್ಠಾನವಾದರೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇರುವುದಿಲ್ಲ. ೮ ಗಂಟೆಗಳ ಬದಲಾಗಿ ೧೨ ಗಂಟೆ ಕೆಲಸ ಮಾಡಬೇಕು. ಹೀಗೆ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಗೊಳಿಸುವಂತೆ ನಡೆಸುತ್ತಿರುವ ಹೋರಾಟವು ಅಪರಾಧದ ರೀತಿಯಲ್ಲಿ ಬಿಂಬಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ದೇಶದಲ್ಲಿರುವ ಅಸಂಘಟಿತ, ಅನೌಪಚಾರಿಕ ಕಾರ್ಮಿಕರನ್ನು ಕಾರ್ಮಿಕ ಕಾನೂನಿನ ಅಡಿ ತರಬೇಕು ಎನ್ನುವ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ತಿರಸ್ಕರಿಸಿದೆ ಇದರಿಂದ ಕಾರ್ಮಿಕರು ನಾನಾ ಸೌಲಭ್ಯ ವಂಚಿತರಾಗುತ್ತಾರೆ ಮುಷ್ಕರ ಮಾಡುವವರಿಗೆ, ಬೆಂಬಲ ಸೂಚಿಸುವವರಿಗೆ ಜೈಲು, ದಂಡ, ಕೆಲಸದಿಂದ ತೆಗೆಯುವ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಇದರಿಂದ ಇನ್ನು ಮುಂದೆ ಮುಷ್ಕರ ಮಾಡುವಂತಿಲ್ಲ. ಸಂಘಗಳನ್ನು ಕಟ್ಟುವಂತಿಲ್ಲ. ಇಂತಹ ಮಾರಕವಾದ ಅಂಶಗಳನ್ನು ಈ ಕಾಯಿದೆಯಲ್ಲಿ ಅಡಕಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಪಿ.ಆರ್.ಎಸ್ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ , ತಾಲೂಕು ಅಧ್ಯಕ್ಷ ಅಲಹಳ್ಳಿ ವೆಂಕಟೇಶ್, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಸಿಐಟಿಯು ಜಿಲ್ಲಾ ಪದಾಧಿಕಾರಿಗಳಾದ ಎಂ.ಭೀಮರಾಜ್, ಬಿ.ಎಲ್.ಕೇಶವರಾವ್, ಕೆ.ವಿ ಮಂಜುನಾಥ್ ಎನ್.ಕಲ್ಪನಾ, ಮಂಜುಳ, ವೆಂಕಟಲಕ್ಷ್ಮಿ, ಲಕ್ಷ್ಮಿದೇವಿ, ಲೋಕೇಶ್ವರಿ, ಮೋಹನ್, ಅಪ್ಪಯ್ಯಣ್ಣ, ಆರೋಗ್ಯನಾಥನ್, ಶಿವರಾಜ್, ಅಂಜಿನಪ್ಪ ಮುಂತಾದವರು ಇದ್ದರು .
ಚಿತ್ರ : ಕಾರ್ಮಿಕ ಸಂಹಿತೆಗಳು ರದ್ದುಗೊಳಿಸಲು ಒತ್ತಾಯಿಸಿ ಸಿಐಟಿಯು ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್