ಮೆಕ್ಕೆಜೋಳ ಖರೀದಿ ಕೇಂದ್ರ : ರೈತರ ಒತ್ತಡಕ್ಕೆ ಮಣಿದ ಸರ್ಕಾರ
ಭಾರಿ
ಫೋಟೋ


ಗದಗ, 22 ನವೆಂಬರ್ (ಹಿ.ಸ.) :

ಆ್ಯಂಕರ್ : ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ಜಾರಿಗೆ ತರಬೇಕೆಂಬ ಒತ್ತಾಯ ಇದೀಗ ಗದಗ ಜಿಲ್ಲೆಯಲ್ಲಿ ಭಾರಿ ಜನಆಂದೋಲನದ ರೂಪ ಪಡೆದಿದೆ. ಕಳೆದ ವಾರದಿಂದ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್‌ ಬಳಿ ರೈತ ಒಕ್ಕೂಟಗಳು, ರೈತಸಂಘ-ಸಂಸ್ಥೆಗಳು ಹಾಗೂ ಹಲವಾರು ಸ್ವಾಮೀಜಿಗಳ ನೇತೃತ್ವದಲ್ಲಿ ನಿರಂತರವಾಗಿ ಅಹೋರಾತ್ರಿ ಹೋರಾಟ ನಡೆಯುತ್ತಿದ್ದು, ಸರ್ಕಾರದ ಮೇಲೆ ಭಾರಿ ಒತ್ತಡ ಉಂಟಾಗಿತ್ತು.

ಕಬ್ಬಿಗೆ ಬೆಂಬಲ ಬೆಲೆ ಘೋಷಣೆಗೊಂಡ ಬಳಿಕ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸದಿರುವುದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದಲ್ಲಿ ನಡೆದ ಹೋರಾಟದಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು. ಮೊನ್ನೆಯಷ್ಟೇ ಪಟ್ಟಣ ಬಂದ್ ಕರೆ ಯಶಸ್ವಿಯಾಗಿ ಜರುಗಿದ ಹಿನ್ನೆಲೆಯಲ್ಲಿ ಹೋರಾಟ ಮತ್ತಷ್ಟು ಚುರುಕುಗೊಂಡಿತ್ತು.

ಉಪವಾಸ ಸತ್ಯಾಗ್ರಹ ಆರಂಭಿಸಿದ ಸ್ವಾಮೀಜಿ

ಮೆಕ್ಕೆಜೋಳ ಖರೀದಿ ಕೇಂದ್ರ ತಕ್ಷಣ ಆರಂಭಗೊಳ್ಳಬೇಕೆಂಬ ಒತ್ತಾಯದಡಿ ಆದರಹಳ್ಳಿ ಕುಮಾರಮಹಾರಾಜ ಸ್ವಾಮೀಜಿಗಳು ಐದು ದಿನಗಳ ಹಿಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ದೀರ್ಘಕಾಲ ಉಪವಾಸದಿಂದ ಅವರು ಅಸ್ವಸ್ಥಗೊಂಡಿದ್ದರಿಂದ ಅವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಆಸ್ಪತ್ರೆಯಲ್ಲಿಯೂ ಅವರು ನೀರು, ಆಹಾರ ಸ್ವೀಕರಿಸದೇ ಸತ್ಯಾಗ್ರಹ ಮುಂದುವರೆಸುತ್ತಿದ್ದರು.

ಸ್ವಾಮೀಜಿ ಅಸ್ವಸ್ಥಗೊಂಡಿರುವ ಮಾಹಿತಿ ಹೋರಾಟಗಾರರ ಮನಸ್ಸಿಗೆ ಬೆಂಕಿ ಹಚ್ಚಿದಂತೆ ಆಗಿತ್ತು. “ಸ್ವಾಮೀಜಿಗೆ ಏನಾದರೂ ಆದರೆ ಭಾರಿ ಉಗ್ರ ಹೋರಾಟ ನಡೆಸುತ್ತೇವೆ,” ಎಂದು ರೈತರು ಸ್ಪಷ್ಟ ಎಚ್ಚರಿಕೆ ನೀಡಿದ್ದರು.

ರೈತರ ಒತ್ತಡಕ್ಕೆ ಸರ್ಕಾರ ಮಣಿತು

ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತುರ್ತುವಾಗಿ ಮೆಕ್ಕೆಜೋಳ ಖರೀದಿ ಬಗ್ಗೆ ನಿರ್ಧಾರ ಕೈಗೊಂಡಿದ್ದು, 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ಲಕ್ಷ್ಮೇಶ್ವರದ ಹೋರಾಟ ವೇದಿಕೆಯಲ್ಲಿ ಸಂತಸ ವ್ಯಕ್ತವಾಗಿದ್ದು, ರೈತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಸ್ವತಃ ಹೋರಾಟ ವೇದಿಕೆ ತಲುಪಿ, ಸ್ವಾಮೀಜಿಗೆ ‘ಎಳೆ ನೀರು’ ನೀಡುವುದರ ಮೂಲಕ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಆಸ್ಪತ್ರೆಯಿಂದ ವೇದಿಕೆಯವರೆಗೆ ಸ್ವಾಮೀಜಿಗಳನ್ನು ಕರೆದೊಯ್ಯುವ ದೃಶ್ಯ ಭರಾಟೆಯಾಗಿತ್ತು.

ಹೋರಾಟ ಇನ್ನೂ ಮುಗಿದಿಲ್ಲ

ಸರ್ಕಾರ ಖರೀದಿಗೆ ಒಪ್ಪಿದರೂ, ರೈತರು ಹೋರಾಟವನ್ನು ಸಂಪೂರ್ಣವಾಗಿ ಕೈಬಿಡಲು ನಿರಾಕರಿಸಿದ್ದಾರೆ. “ಖರೀದಿ ಕೇಂದ್ರಗಳು ನೆಲದಲ್ಲಿ ಆರಂಭವಾಗುವವರೆಗೆ ವೇದಿಕೆಯನ್ನು ಬಿಡುವುದಿಲ್ಲ,” ಎಂಬ ಪಟ್ಟು ಹಿಡಿದಿರುವ ರೈತರು, ಶಿಗ್ಲಿ ಕ್ರಾಸ್‌ನಲ್ಲಿ ಹೋರಾಟ ಮುಂದುವರೆಸಿದ್ದಾರೆ.

ಜಿಲ್ಲಾಧಿಕಾರಿ ಶ್ರೀಧರ್ ಸೋಮವಾರ ಅಥವಾ ಮಂಗಳವಾರದೊಳಗೆ ಖರೀದಿ ಕೇಂದ್ರ ಆರಂಭವಾಗುವ ಸಾಧ್ಯತೆ ಇದೆ ಎಂದು ಭರವಸೆ ನೀಡಿದರೂ, ರೈತರ ಪ್ರಶ್ನೆಗೆ ಸ್ಪಷ್ಟ ದಿನಾಂಕ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಬೆಂಬಲ ಬೆಲೆ ಘೋಷಣೆ ಇದ್ದರೂ ಖರೀದಿ ವಿಳಂಬ ಏಕೆ?

ಕೇಂದ್ರ ಸರ್ಕಾರ ಈಗಾಗಲೇ ಮೆಕ್ಕೆಜೋಳಕ್ಕೆ ₹2,400 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಆದರೆ ರಾಜ್ಯ ಸರ್ಕಾರ ಖರೀದಿ ಕ್ರಮ ಜಾರಿಗೆ ತರದೆ ಕಾಲಹರಣ ಮಾಡುತ್ತಿರುವುದು ಅನ್ನದಾತರ ಅಸಮಾಧಾನಕ್ಕೆ ಕಾರಣವಾಗಿತ್ತು. ಈಗಾಗಲೇ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದಾಗಿ ರೈತರು ನಷ್ಟದಲ್ಲಿದ್ದರು. ಕೂಡಲೇ ಖರೀದಿ ಕೇಂದ್ರ ಆರಂಭ ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande