ಶಾಸಕ ಜಿ. ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ, ಆತ್ಮಹತ್ಯೆಗೆ ಯತ್ನ
ಗದಗ, 22 ನವೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ ಇಂದು ರಾಜಕೀಯ ಆಕ್ರೋಶಕ್ಕೆ ವೇದಿಕೆಯಾಯಿತು. ರೋಣ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯದ ಮಧ್ಯೆ, ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಡಿಸೇಲ್ ಸುರಿದುಕೊಂಡು ಆತ್ಮಹ
ಫೋಟೋ


ಗದಗ, 22 ನವೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ ಇಂದು ರಾಜಕೀಯ ಆಕ್ರೋಶಕ್ಕೆ ವೇದಿಕೆಯಾಯಿತು. ರೋಣ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯದ ಮಧ್ಯೆ, ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣದಲ್ಲಿ ಭಾರೀ ಉದ್ವಿಗ್ನತೆ ಮೂಡಿಸಿದೆ.

ಕಾಲಕಾಲೇಶ್ವರ ಸರ್ಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದರು. ರೋಣ ಕ್ಷೇತ್ರದ ರಾಜಕೀಯದಲ್ಲಿ ಐವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಿ.ಎಸ್. ಪಾಟೀಲ ನಾಲ್ಕು ಬಾರಿ ಶಾಸಕರಾಗಿದ್ದರೂ ಒಂದು ಬಾರಿ ಸಹ ಸಚಿವ ಸ್ಥಾನ ನೀಡಿಲ್ಲ ಎಂಬ ಅಸಮಾಧಾನ ಕಾರ್ಯಕರ್ತರ ನಡುವೆ ಹೆಚ್ಚಾಗಿತ್ತು.

ಈ ನಡುವೆ, ಪ್ರತಿಭಟನೆಯಲ್ಲಿದ್ದ ಸಂಗಪ್ಪ ತೇಜಿ ಮತ್ತು ರವಿಕುಮಾರ್ ಎಂಬ ಕಾರ್ಯಕರ್ತರು ಏಕಾಏಕಿ ತಮ್ಮ ಹತ್ತಿರ ಇಟ್ಟುಕೊಂಡಿದ್ದ ಡಿಸೇಲ್ ಕ್ಯಾನ್ ನಿಂದ ಡಿಸೇಲ್ ತಮ್ಮ ದೇಹದ ಮೇಲೆ ಸುರಿದುಕೊಂಡರು. ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಕ್ಷಣದಲ್ಲಿ ಅಲ್ಲಿದ್ದ ಸಾರ್ವಜನಿಕರು ಮತ್ತು ಇತರ ಕಾರ್ಯಕರ್ತರು ಚಾಕಚಕ್ಯತೆಯಿಂದ ಅವರನ್ನು ತಡೆದು ರಕ್ಷಿಸಿದರು. ಯಾವುದೇ ದೊಡ್ಡ ಅನಾಹುತ ಸಂಭವಿಸದಿದ್ದರೂ, ಕ್ಷಣಾರ್ಧದಲ್ಲಿ ನಡೆದ ಈ ಘಟನೆ ಪ್ರತಿಭಟನಾಕಾರರನ್ನು ಬೆಚ್ಚಿಬೀಳುವಂತೆ ಮಾಡಿತು.

ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಲಭಿಸುತ್ತಲೇ ಗಜೇಂದ್ರಗಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣದಲ್ಲಿ ಇಟ್ಟರು. ಆತ್ಮಹತ್ಯೆಗೆ ಯತ್ನಿಸಿದ ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪ್ರತಿಭಟನಾಕಾರರು ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಒತ್ತಾಯವನ್ನು ಸಾರಲಿದ್ದಾರೆಂದು ಹೇಳಿದರು. “ನಾಲ್ಕು ಬಾರಿ ಶಾಸಕರಾಗಿರುವ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡದಿರುವುದು ಅನ್ಯಾಯ. ಈ ಬಾರಿ ನೀಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ,” ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಕಾಲಕಾಲೇಶ್ವರ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರು ಹೆಚ್ಚುವರಿ ಭದ್ರತೆ ನಿಯೋಜಿಸಿದ್ದಾರೆ. ಹಿಂಸಾತ್ಮಕ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಸ್ಥಳದಲ್ಲೇ ನಿಗಾವಹಿಸುತ್ತಿದೆ.

ಜಿ.ಎಸ್. ಪಾಟೀಲ ಪರ ಕಾರ್ಯಕರ್ತರಿಂದ ನಡೆದ ಈ ಆತ್ಮಹತ್ಯಾ ಯತ್ನ ಇದೀಗ ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಪಕ್ಷದ ಒಳರಾಜಕೀಯಕ್ಕೂ ಹೊಸ ತಿರುವು ನೀಡಿದೆ. ಪಕ್ಷದ ಹಿರಿಯರು ಈಗ ಪರಿಸ್ಥಿತಿಯನ್ನು ಹೇಗೆ ಹತೋಟಿಗೆ ತರುತ್ತಾರೆ ಎನ್ನುವುದು ಕುತೂಹಲವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande