

ದುಬೈ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ದುಬೈ ಏರ್ ಶೋ 2025ರಲ್ಲಿ ಪ್ರದರ್ಶನದಲ್ಲಿ ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ತೇಜಸ್ ಯುದ್ಧವಿಮಾನ ಶುಕ್ರವಾರ ಮಧ್ಯಾಹ್ನ ಪತನಗೊಂಡು ಸ್ಫೋಟಗೊಂಡಿದೆ. ಈ ಅಪಘಾತದಲ್ಲಿ ವಿಮಾನವನ್ನು ಚಾಲನೆ ಮಾಡುತ್ತಿದ್ದ ಪೈಲಟ್ ಮಾರಣಾಂತಿಕ ಗಾಯಗಳಿಂದ ಸಾವನ್ನಪ್ಪಿರುವುದನ್ನು ಭಾರತೀಯ ವಾಯುಪಡೆಯು ಎಕ್ಸನಲ್ಲಿ ದೃಢಪಡಿಸಿದೆ.
ಸ್ಥಳೀಯ ಸಮಯ ಮಧ್ಯಾಹ್ನ 2:10ಕ್ಕೆ ದುಬೈ ವರ್ಲ್ಡ್ ಸೆಂಟ್ರಲ್‌ನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಹಾರಾಟ ಪ್ರದರ್ಶನದ ವೇಳೆ ತೇಜಸ್ ಯುದ್ಧವಿಮಾನ ನಿಯಂತ್ರಣ ತಪ್ಪಿ ನೆಲದತ್ತ ಧುಮುಕಿ ಬೆಂಕಿಯ ಉಂಡೆಯಂತೆ ಸ್ಫೋಟಗೊಂಡಿದೆ.
ಅಪಘಾತದ ನಂತರ ಘಟನಾ ಸ್ಥಳದ ಮೇಲೆ ಕಪ್ಪು ಹೊಗೆ ಆವರಿಸಿತು. ತುರ್ತು ಸೇವಾ ಸಿಬ್ಬಂದಿ ಕ್ಷಣಾರ್ಧದಲ್ಲಿ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದರು.
ದುಬೈ ಏರ್ ಶೋದಲ್ಲಿ ಈ ವರ್ಷ ಎಮಿರೇಟ್ಸ್ ಮತ್ತು ಫ್ಲೈ ದುಬೈ ವಿಮಾನಯಾನ ಸಂಸ್ಥೆಗಳು ದೊಡ್ಡ ಮಟ್ಟದ ವಿಮಾನ ಆರ್ಡರ್‌ಗಳನ್ನು ಘೋಷಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ವಿಶ್ವದ ಗಮನ ಸೆಳೆದಿತ್ತು. ಆದರೆ ತೇಜಸ್ ಅಪಘಾತವು ಈ ಸಂಭ್ರಮಕ್ಕೆ ಕಪ್ಪು ಚುಕ್ಕೆಯಾಗಿದೆ.
ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಭಾರತೀಯ ವಾಯುಪಡೆಯು ವಿಚಾರಣಾ ನ್ಯಾಯಾಲಯವನ್ನು ರಚಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa