
ರಾಯ್ಪುರ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢದಲ್ಲಿ ಐಸಿಸ್ ಜಾಲದ ಚಟುವಟಿಕೆ ಕುರಿತು ಭಯೋತ್ಪಾದನಾ ನಿಗ್ರಹ ದಳ ಮಹತ್ವದ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಸೂಚನೆಗಳಿಗೆ ಒಳಗಾಗಿದ್ದ ಇಬ್ಬರು ಅಪ್ರಾಪ್ತ ವಯಸ್ಕರನ್ನು ಎಟಿಎಸ್ ಗುರುತಿಸಿದ್ದು, ಇವರಲ್ಲಿ ಓರ್ವ ರಾಯ್ಪುರ ಹಾಗೂ ಮತ್ತೋರ್ವ ಭಿಲಾಯಿಯ ಮೂಲದವರಾಗಿದ್ದಾರೆ.
ಗುಪ್ತಚರ ಸಂಸ್ಥೆಗಳು ಈ ಯುವಕರ ಮೇಲೆ ಒಂದೂವರೆ ವರ್ಷದ ಕಾಲ ನಿಗಾ ಇಟ್ಟಿತ್ತು, ಇವರ ಮೊಬೈಲ್‌ಗಳಲ್ಲಿ ಮೂಲಭೂತವಾದಿ ಚಿಂತನೆಗೆ ಪ್ರಚೋದಿಸುವ ಸಂದೇಶಗಳು ಮತ್ತು ವೀಡಿಯೊಗಳು ಪತ್ತೆಯಾಗಿವೆ. ಪ್ರಾರಂಭಿಕ ತನಿಖೆಯಲ್ಲಿ, ಈ ಹುಡುಗರು ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ನೇರ ಸಂಪರ್ಕದಲ್ಲಿದ್ದುದೂ ದೃಢಪಟ್ಟಿದೆ.
ಎಟಿಎಸ್ ಮೂಲಗಳ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ ರಚಿಸಲಾದ ನಕಲಿ ಖಾತೆಗಳ ಮೂಲಕ ಯುವಕರನ್ನು ಗುರಿಯಾಗಿಸಿ, ಗುಂಪು ಚಾಟ್‌ಗಳಿಗೆ ಸೇರಿಸಿ, ಜಿಹಾದಿ ಸಿದ್ಧಾಂತ, ಮೂಲಭೂತವಾದಿ ಪ್ರಚಾರ ಮತ್ತು ಐಸಿಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಚೋದಿಸಲಾಗುತ್ತಿತ್ತು. ಛತ್ತೀಸ್‌ಗಢದಲ್ಲಿ ಐಸಿಸ್ ಮಾಡ್ಯೂಲ್ ರೂಪಿಸುವ ಉದ್ದೇಶವೂ ಇದಕ್ಕೆ ಹಿನ್ನೆಲೆಯಾಗಿರುವುದಾಗಿ ಶಂಕಿಸಲಾಗಿದೆ.
ನಿನ್ನೆ ತಡರಾತ್ರಿ, ಎಟಿಎಸ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ (1967) ಅಡಿಯಲ್ಲಿ ಮೊದಲ ಎಫ್‌ಐಆರ್ ದಾಖಲಿಸಿದೆ. ಮಾಹಿತಿ ಪ್ರಕಾರ, ಬಂಧಿತರಲ್ಲಿ ಒಬ್ಬನ ತಂದೆ ಕೇಂದ್ರ ಮೀಸಲು ಪೊಲೀಸ್ ಪಡೆ ಜವಾನ್ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa