






ಬಳ್ಳಾರಿ, 18 ನವೆಂಬರ್ (ಹಿ.ಸ.) :
ಆ್ಯಂಕರ್ : ಈ ನಟರೆಲ್ಲಾ ವಿಶೇಷ ಚೇತನರು. ತಮ್ಮಲ್ಲಿರುವ ಕೊರತೆಯನ್ನು ನಿರ್ಲಕ್ಷಿಸಿ ಸಮಾಜದ ಮೇಲ್ಪಂಕ್ತಿಯಲ್ಲಿ ಸದಾಕಾಲ ಕಾಣಿಸಿಕೊಳ್ಳಲು ನಿರಂತರ ಪ್ರಯತ್ನಿಸುತ್ತಿರುವವರ ತಂಡ. ಇವರೆಲ್ಲರೂ ಕಿವುಡರು - ಮೂಗರು. ಕೇವಲ ಸಂಜ್ಞೆಗಳ ಮೂಲಕವೇ ಪ್ರೇಕ್ಷಕರ ಮನಮೆಚ್ಚುವ ರೀತಿಯಲ್ಲಿ ಅಭಯನ ಮಾಡುತ್ತಾರೆ.
ಗದಗ ಜಿಲ್ಲೆಯ ಗಜೇಂದ್ರಗಡದ ನರೇಗಲ್ಲು ಗ್ರಾಮದಲ್ಲಿರುವ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಕಿವುಡ ಮಕ್ಕಳ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ಕಲಾಶ್ರೀಮಂತಿಕೆಯ ಮಾತುಗಳು.
ಈ ವಿದ್ಯಾರ್ಥಿಗಳು `ಕಡ್ಲಿಮಟ್ಟಿ ಕಾಶೀಬಾಯಿ' ಜನಪದ ಕಥವನ್ನು ನಾಟಕ ರೂಪದಲ್ಲಿ ಬಳ್ಳಾರಿಯ ಶ್ರೀ ಕೊಟ್ಟೂರುಸ್ವಾಮಿ ಮಠದಲ್ಲಿ ಪ್ರದರ್ಶನ ಮಾಡಿದ್ದು, ಆರ್.ಕೆ. ಬಾಗವಾನ್ ಅವರು ಪರಿಕಲ್ಪನೆ ಮತ್ತು ವಿನ್ಯಾಸ ರೂಪುಗೊಳಿಸಿದ್ದಾರೆ. ಶ್ರೀಕಾಂತ ನವಲಗರಿ ಅವರು ನಿರ್ದೇಶನ ಮಾಡಿದ್ದಾರೆ. ಎಸ್.ಎ. ಅರಮನಿ ಅವರು ತಂಡದ ಸಂಚಾಲಕತ್ವರಾಗಿದ್ದಾರೆ.
ಪ್ರತಿ ಮಗುವಿನಲ್ಲೂ ಕಲಿಕೆಯ ಧ್ಯಾನವಿದೆ. ಮನಸ್ಸಿನ ತುಡಿತಕ್ಕೆ ಪೂರಕ ಮೌನದ ಪ್ರತಿಕ್ರಿಯೆ ಇದೆ. ಲಿಂಗೈಕ್ಯ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ ಪ್ರೇರಣಾ ಶಕ್ತಿಯು ಇವರಲ್ಲಿ ಸದಾಕಾಲ ಸ್ಫೂರ್ತಿ ತಂದು, ಸದಾಕಾಲ ಕ್ರಿಯಾಶೀಲ, ಸೃಜನಶೀಲರನ್ನಾಗಿ ಇವರ ಉತ್ಸಾಹವನ್ನು ಕಾಪಾಡುತ್ತಿದೆ ಎನ್ನುತ್ತಾರೆ ಆರ್.ಕೆ. ಬಾಗವಾನ್.
ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ಅತ್ಯಾಚಾರ - ಅಪರಾಧ ಪ್ರಜ್ಞೆ ಹೆಚ್ಚುತ್ತಿರುವ ಈ ದಿನಗಳಲ್ಲಿ `ಕಡ್ಲಿಮಟ್ಟಿ ಕಾಶೀಬಾಯಿ' ಜನಪದ ನಾಟಕದ ಮೂಲಕ ಮಹಿಳೆಯ ಚಾರಿತ್ರ್ಯೆಗೆ ಇರುವ ಮಹತ್ವದ ಕುರಿತು ಕಿವುಡ ಮತ್ತು ಮೂಗ ವಿದ್ಯಾರ್ಥಿಗಳು ಮನಮೋಹಕವಾಗಿ ಅಭಿನಯಿಸಿದ್ದಾರೆ. ಕಿವುಡ ಮತ್ತು ಮೂಗರಿಂದ ನಾಟಕ ಮಾಡಿಸುವ ಸವಾಲನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
ಕಾಶೀಬಾಯಿ, ಆಕೆಯ ಪತಿ, ತಂದೆ, ವ್ಯಾಪಾರಿ, ರೈಲ್ವೆ ಸ್ಟೇಷನ್ ಮಾಸ್ಟರ್ ಹೀಗೇ ಪ್ರತಿ ಪಾತ್ರದಲ್ಲೂ ಮಕ್ಕಳ ಅಭಿಯನವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಪಾತ್ರದಾರಿಗಳ ಜೊತೆಯಲ್ಲಿ ಪ್ರೇಕ್ಷಕರೂ ಪಾತ್ರಗಳಲ್ಲಿ ತಲ್ಲೀನರಾಗಿದ್ದು ಕಲಾವಿದರ `ಮೌನ ಭಾಷೆ'ಯ ಅಭಿನಯದ ಕೌಶಲ್ಯಗಳನ್ನು ಪ್ರತಿನಿಧಿಸುತ್ತಿದ್ದುದ್ದು ವಿಶೇಷ.
ಹಿರಿಯ ವಕೀಲರಾದ ಅಯ್ಯಪ್ಪ, ದಾನಿಗಳಾದ ಸಂಗನಕಲ್ಲು ಚನ್ನನಗೌಡ ದಂಪತಿಗಳು, `ಕಿವುಡ - ಮೂಗರ ಅಭಿನಯದಲ್ಲಿ ದೇಹಭಾಷೆ, ಸಂಜ್ಞೆಗಳು ಮತ್ತು ವೇಷಭೂಷಣಗಳು ಅತ್ಯುತ್ತಮವಾಗಿ ರೂಪುಗೊಂಡಿವೆ. ತಂಡದ ಪ್ರತಿ ಕಲಾವಿದರೂ ಅತ್ಯುತ್ತಮವಾಗಿಯೇ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್