


ಬಳ್ಳಾರಿ, 17 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಸ್ತುತದಲ್ಲಿ ನಿಯಮಿತವಾಗಿ ದೇಹ ದಂಡನೆ, ಪೌಷ್ಠಿಕ ಆಹಾರ ಸೇವನೆ ಮೂಲಕ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ವಿಭಾಗ ಹಾಗೂ ಬಳ್ಳಾರಿ ನರ್ಸಿಂಗ್ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಧುಮೇಹ ದಿನ ಅಂಗವಾಗಿ ಮಧುಮೇಹ ಮತ್ತು ಯೋಗಕ್ಷೇಮ ಎಂಬ ಘೋಷವಾಕ್ಯದಡಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಜಾಗೃತಿ ವಾಕ್ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಧುಮೇಹ ಎನ್ನುವ ಅನಿಯಂತ್ರಿತ ಕಾಯಿಲೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಬರುತ್ತದೆ. ಮಧುಮೇಹವನ್ನು ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಪೂರ್ವದಲ್ಲಿ ಬರದಂತೆ ನಿಯಂತ್ರಣ ಮಾಡುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಹ ದಂಡನೆ ಮಾಡದೇ ಜೀವನ ನಡೆಸುವಂತಹ ಪ್ರವೃತ್ತಿ ಜನರಲ್ಲಿ ಹೆಚ್ಚಾಗಿರುವುದರಿಂದ ಮಧುಮೇಹದ ತೀವ್ರತೆ ಹೆಚ್ಚಾಗುತ್ತಿದೆ. ನಾವು ತಿನ್ನುವ ಆಹಾರ, ಜೀವನ ಶೈಲಿ ಹಾಗೂ ಸರಳ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ಮಧುಮೇಹ ಕಾಯಿಲೆಯು ಅಸಾಂಕ್ರಾಮಿಕ ರೋಗವಾಗಿದ್ದು, ಜಿಲ್ಲೆಯಲ್ಲಿ ಶೇ.20 ಕ್ಕೂ ಹೆಚ್ಚಿನ ಪ್ರಮಾಣ ಜನರು ಸಕ್ಕರೆ ಖಾಯಿಲೆಯಿಂದ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಹಾಗಾಗಿ 30 ವರ್ಷದ ಮೇಲ್ಪಟ್ಟವರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಗೃಹ-ಆರೋಗ್ಯ ಯೋಜನೆ ರೂಪಿಸಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡಿ, ಉಚಿತವಾಗಿ ಔಷದೋಪಚಾರ ಮಾಡಲಾಗುತ್ತದೆ. ದಿನನಿತ್ಯ ಪೌಷ್ಠಿಕ ಆಹಾರ ಸೇವನೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ಪ್ರಪಂಚದಾದ್ಯ0ತ ಮಧುಮೇಹ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿ ಐದು ಜನರಲ್ಲಿ ಒಬ್ಬರಿಗೆ ಮಧುಮೇಹ ಕಂಡು ಬರುತ್ತದೆ. ದಿನನಿತ್ಯ ನಾವು ಬದುಕುವ ಜೀವನದಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಹೊಂದುವುದು ಅತೀ ಅವಶ್ಯಕವಾಗಿದೆ ಎಂದು ಹೇಳಿದರು.
ಮಧುಮೇಹ ದೇಹದ ಎಲ್ಲ ಭಾಗಗಳಿಗೆ ಬರುತ್ತದೆ. ವ್ಯಾಯಾಮದಲ್ಲಿ ತೊಡಗಿಕೊಂಡು ಡಯಟ್‌ನಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಮಧುಮೇಹ ಕಾಯಿಲೆಯಿಂದ ದೂರ ಉಳಿಯಬಹುದು ಎಂದು ತಿಳಿಸಿದರು.
ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್ ಕೆ.ಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮತೋಲನ ಆಹಾರ ಸೇವನೆ ಮತ್ತು ಉತ್ತಮ ನಿದ್ರೆಯ ಜೀವನ ಶೈಲಿಯಿಂದ ಮಧುಮೇಹ ನಿಯಂತ್ರಣ ಮಾಡಬಹುದು ಎಂದರು.
ಮಧುಮೇಹ ಕಾಯಿಲೆಯು ವಂಶ ಪಾರಂಪರ್ಯವಾಗಿ, ಅನುವಂಶೀಯವಾಗಿ ಅನಿಯಮಿತ ಆಹಾರ ಸೇವನೆ, ಅತಿಯಾದ ಬೊಜ್ಜು ಹಾಗೂ ಹೆಚ್ಚಿನ ತೂಕದಿಂದ ಮಧುಮೇಹ ಖಾಯಿಲೆ ಬರುವ ಸಂಭವವಿದ್ದು, ಬಾಯಾರಿಕೆ, ಹಸಿವು, ಮಸುಕು ದೃಷ್ಟಿ ಸೇರಿದಂತೆ ಇತರೆ ಅನಾರೋಗ್ಯ ಲಕ್ಷಣಗಳು ಕಂಡು ಬ0ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಾಗೃತಿ ವಾಕ್ ಮ್ಯಾರಥಾನ್ :
ವಿಶ್ವ ಮಧುಮೇಹ ದಿನ ಅಂಗವಾಗಿ ಸಾರ್ವಜನಿಕರಲ್ಲಿ ಮಧುಮೇಹ ಕಾಯಿಲೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಆರಂಭವಾಗಿ ಸಂಗ0 ವೃತ್ತ, ಗಡಿಗಿ ಚೆನ್ನಪ್ಪ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ, ಹೆಚ್.ಆರ್ ಗವಿಯಪ್ಪ ವೃತ್ತದಿಂದ ಮರಳಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ತಲುಪಿ ಅಂತ್ಯಗೊಡಿತು.
ಈ ಸಂದರ್ಭದಲ್ಲಿ ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಬಳ್ಳಾರಿ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಶಾಂತಮ್ಮ ಸೇರಿದಂತೆ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್