
ಕೊಪ್ಪಳ, 17 ನವೆಂಬರ್ (ಹಿ.ಸ.)
ಆ್ಯಂಕರ್: ತೊಗರಿಯಲ್ಲಿನ ಕಂಡು ಬರುವ ಗೊಡ್ಡು ರೋಗದ ನಿರ್ವಹಣೆಗಾಗಿ ಕೃಷಿ ಇಲಾಖೆಯಿಂದ ಕೆಲವು ಸಲಹೆಗಳನ್ನು ನೀಡಲಾಗಿದೆ.
ಹಾನಿಯ ಲಕ್ಷಣಗಳು:
ತೊಗರಿಯಲ್ಲಿ ಗೊಡ್ಡು ರೋಗ ಬಂದ ಗಿಡಗಳು ಸಣ್ಣ ಗಾತ್ರದ, ಮೇಲ್ಬಾಗದಲ್ಲಿ ತಿಳಿ ಮತ್ತು ದಟ್ಟ ಹಳದಿ ಬಣ್ಣದ ಮೋಜಾಯಿಕ್ ತರಹದ ಮಚ್ಚೆಗಳನ್ನು ಹೊಂದಿ ಮುಟುರಿಕೊಂಡಿರುವ, ಹೆಚ್ಚಿನ ಸಂಖ್ಯೆಯ ಎಲೆಗಳನ್ನು ಹೊಂದಿ ಹೂ ಕಾಯಿಗಳಿಲ್ಲದೆ ಗೊಡ್ಡಾಗಿ ಉಳಿಯುತ್ತವೆ. ಬೆಳೆಯ ಎಳೆಯ ವಯಸ್ಸಿನಲ್ಲಿ ಈ ರೋಗ ಬಂದರೆ ಕಾಂಡವು ಉದ್ದವಾಗಿ ಬೆಳೆಯದೆ ಸಣ್ಣ ಟೊಂಗೆಗಳು ಹಾಗೂ ತಿಳಿ ಹಳದಿ ಬಣ್ಣದ ಚಿಕ್ಕ ಗಾತ್ರದ ಮುಟುರಿಕೊಂಡಿರುವ ಎಲೆಗಳ ಗುಂಪಿನಿಂದ ಕೂಡಿ ಕಂಟಿಯಂತಾಗಿ ಗೊಡ್ಡು ಆಗುವುದು. ಈ ರೋಗವು ಶೇ. 30ರಷ್ಟು ಹಾನಿ ಮಾಡುತ್ತದೆ.
ರೋಗದ ನಿರ್ವಹಣೆ: ತೊಗರಿಯಲ್ಲಿ ಗೊಡ್ಡು ರೋಗ ಬಂದ ಗಿಡಗಳನ್ನು ಕಿತ್ತು ನಾಶಮಾಡಬೇಕು. ನುಸಿ ನಾಶಕಗಳಾದ ಡಿಕೋಫಾಲ್ 18.5 ಇ.ಸಿ. 2.5 ಮಿ.ಲೀ. ಅಥವಾ ನೀರಿನಲ್ಲಿ ಕರಗುವ ಗಂಧಕ 2.5 ಗ್ರಾಂ ಅಥವಾ ಇಥಿಯಾನ್ 50 ಇ.ಸಿ. 2 ಮಿ.ಲೀ. ಅಥವಾ ಫೆನಾಜ್ಕ್ವಿನ್ 10 ಇ.ಸಿ. 2.00 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಅಥವಾ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್