
ಬೆಂಗಳೂರು, 17 ನವೆಂಬರ್ (ಹಿ.ಸ.) :
ಆ್ಯಂಕರ್ : ಆರೋಗ್ಯ ವಲಯದಲ್ಲಿ ಭಾರತ ಗಮನಾರ್ಹ ಬೆಳವಣಿಗೆ ಸಾಧಿಸುತ್ತಿದೆ. ಪರಿಣಾಮಕಾರಿ ಔಷಧಗಳ ಸಂಶೋಧನೆ, ತಯಾರಿಕೆ, ಔಷಧೋತ್ಪನ್ನ ರಫ್ತು, ವೈದ್ಯಕೀಯ ಸೇವೆ, ʼಆಯುಷ್ಮಾನ್ʼನಂತಹ ಆರೋಗ್ಯ ರಕ್ಷಣೆ ಯೋಜನೆ ಹೀಗೆ ಸಮಗ್ರ ವಿಧದಲ್ಲೂ ವಿಶ್ವದ ಗಮನ ಸೆಳೆಯುತ್ತಿರುವ ಭಾರತವೀಗ ʼಜಾಗತಿಕ ಹೆಲ್ತ್ ಕೇರ್ ಹಬ್ʼ ಆಗಿ ರೂಪುಗೊಳ್ಳುತ್ತಿದೆ.
ಭಾರತದ ಆರೋಗ್ಯ ಕ್ಷೇತ್ರದ ಪ್ರಗತಿ ಕಂಡು ವಿದೇಶಿ ಹೂಡಿಕೆದಾರರೂ ದೇಶದ ಮಾರುಕಟ್ಟೆಯತ್ತ ಚಿತ್ತ ಹರಿಸಿದ್ದಾರೆ. ಶೇರು ಮಾರುಕಟ್ಟೆಯಲ್ಲೂ ಹೂಡಿಕೆದಾರರ ʼಕಮಾಲ್ʼ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಪರಿವರ್ತನಕಾರಿ ಆರೋಗ್ಯ ಸುಧಾರಣೆ ಕ್ರಮಗಳು ಮತ್ತು ಸಂಶೋಧನೆ-ಆರೋಗ್ಯ-ವೈದ್ಯಕೀಯ ವಲಯಕ್ಕೆ ನೀಡಿದ ಅಭೂತಪೂರ್ವ ಬೆಂಬಲ, ಶಿಸ್ತುಬದ್ಧ ಸೇವೆ ವಿದೇಶಿಗರ ಮನ ಗೆದ್ದಿದೆ.
ಹೂಡಿಕೆದಾರರು ಮತ್ತು ವಿದೇಶಿಗರು ಭಾರತದ ಮೇಲಿಟ್ಟ ಅಗಾಧ ನಂಬಿಕೆ, ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ವಿಸ್ತರಿಸುತ್ತಿರುವ ಆರೋಗ್ಯ ಸೇವಾ ಜಾಲ, ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಯಿಂದಾಗಿ ಭಾರತವಿಂದು ʼಜಾಗತಿಕ ಹೆಲ್ತ್‌ಕೇರ್ ಹಬ್ʼ ಆಗಿ ಬದಲಾಗುತ್ತಿದೆ. ಭಾರತದ ಔಷಧ ಮತ್ತು ಆರೋಗ್ಯ ರಕ್ಷಣಾ ವಲಯ 2025ರ ಮೂರನೇ ತ್ರೈಮಾಸಿಕದಲ್ಲಿ (Q3) ಬೃಹತ್ ಪ್ರಮಾಣದ ಹೂಡಿಕೆ-ವಹಿವಾಟು ದಾಖಲಿಸಿರುವುದೇ ಇದಕ್ಕೆ ನಿದರ್ಶನ.
ಗ್ರಾಂಟ್ ಥಾರ್ನ್ಟನ್ ಭಾರತ್ (Grant Thornton Bharat) ಬಿಡುಗಡೆ ಮಾಡಿದ ಇತ್ತೀಚಿನ ಡೀಲ್‌ಟ್ರಾಕರ್ ವರದಿ ಪ್ರಕಾರ ಭಾರತದ ಆರೋಗ್ಯ ವಲಯದಲ್ಲಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಟ್ಟು $3.5 ಶತಕೋಟಿ ಮೌಲ್ಯದ ವಹಿವಾಟು ನಡೆದಿದ್ದು, ಇದು ದೇಶದ ಮೇಲೆ ಹೂಡಿಕೆದಾರರ ಅದಮ್ಯ ವಿಶ್ವಾಸವನ್ನು ತೋರ್ಪಡಿಸುತ್ತದೆ.
*ಸಾರ್ವಜನಿಕ ಮಾರುಕಟ್ಟೆಯಿಂದ ಬೃಹತ್ ಬಂಡವಾಳ:* ಭಾರತದ ಆರೋಗ್ಯ ಕ್ಷೇತ್ರದಲ್ಲಿ ದಾಖಲಾದ ಒಟ್ಟು ವಹಿವಾಟಿನ ಮೊತ್ತದಲ್ಲಿ ಸಾರ್ವಜನಿಕ ಮಾರುಕಟ್ಟೆಗಳು ಗಣನೀಯ ಕೊಡುಗೆ ನೀಡಿವೆ. ಮೂರು ತಿಂಗಳಲ್ಲಿ ಮೂರು ಯಶಸ್ವಿ ಆರಂಭಿಕ ಸಾರ್ವಜನಿಕ ಕೊಡುಗೆಗಳು (IPO) ದಾಖಲಾಗಿವೆ. ಇದರ ಒಟ್ಟು ಮೌಲ್ಯ $428 ಮಿಲಿಯನ್. ಇದಲ್ಲದೆ, ಅರ್ಹ ಸಾಂಸ್ಥಿಕ ನಿಯೋಜನೆ (QIP) ಮೂಲಕವೂ ಹೆಚ್ಚುವರಿಯಾಗಿ $88 ಮಿಲಿಯನ್ ಬಂಡವಾಳ ಹರಿದು ಬಂದಿದೆ.
*ಖಾಸಗಿ ಹೂಡಿಕೆಯಲ್ಲೂ ತೀಕ್ಷ್ಣ ಏರಿಕೆ:* ಸಾರ್ವಜನಿಕ ಮಾರುಕಟ್ಟೆ ಚಟುವಟಿಕೆಗಳನ್ನು ಹೊರತುಪಡಿಸಿದರೆ ಖಾಸಗಿ ವಲಯವೇ USD 3 ಬಿಲಿಯನ್ ಮೌಲ್ಯದ 68 ವ್ಯವಹಾರಗಳನ್ನು ದಾಖಲಿಸಿದೆ. ಕಳೆದ ಕೆಲವು ತ್ರೈಮಾಸಿಕಗಳಿಂದ ಕುಂಠಿತವಾಗಿದ್ದ ಖಾಸಗಿ ಹೂಡಿಕೆ ಚಟುವಟಿಕೆ ಮತ್ತೆ ಗರಿಗೆದರಿ ವೇಗ ಪಡೆದುಕೊಂಡಿದೆ..
*ಹೈ-ವ್ಯಾಲ್ಯೂ ಡೀಲ್‌ಗಳಿಂದ ಹೆಚ್ಚಿದ ವಹಿವಾಟು:* ವಹಿವಾಟು ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ಏಳು ಒಪ್ಪಂದಗಳು. ಈ ಏಳು ಹೈ-ವ್ಯಾಲ್ಯೂ ಒಪ್ಪಂದಗಳ ಮೌಲ್ಯವೇ ಒಟ್ಟು $2.6 ಶತಕೋಟಿ ದಾಟಿದೆ. ಈ ದೊಡ್ಡ ಮಟ್ಟದ ವಿಸ್ತರಣೆ ಹಣಕಾಸು ಹೂಡಿಕೆಗಳ ಚಲನವಲನವನ್ನು ಮತ್ತಷ್ಟು ಹೆಚ್ಚಿಸಿದೆ.
ಫಾರ್ಮಾ, ಬಯೋಟೆಕ್ ಮತ್ತು ಆಸ್ಪತ್ರೆ ಸೇವಾ ವಲಯಗಳಲ್ಲಿ ಕಂಡುಬಂದ ಚಟುವಟಿಕೆ ಹೂಡಿಕೆಗಳಿಗೆ ಬಲ ನೀಡಿದೆ. ವಿಶೇಷವಾಗಿ ಬಯೋಟೆಕ್ ಸಂಶೋಧನೆ ಮತ್ತು ಆರೋಗ್ಯ ಮೂಲಸೌಕರ್ಯ ವೃದ್ಧಿ ಭಾರತದ ಆರೋಗ್ಯ ವಲಯವನ್ನು ಮತ್ತಷ್ಟು ಆಕರ್ಷಕವಾಗಿಸಿದೆ.
ಕಳೆದ ಕೆಲವು ವರ್ಷಗಳಿಂದ ಭಾರತ ಔಷಧ ಉತ್ಪಾದನೆ, ಬಯೋಫಾರ್ಮಾ ಸಂಶೋಧನೆ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆಯಲ್ಲಿ ಪ್ರಗತಿಯ ನಾಗಾಲೋಟದಲ್ಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಫಾರ್ಮಾ ಕಂಪನಿಗಳ ಸುಭದ್ರ ಸ್ಥಾನಮಾನಗಳು ಹೂಡಿಕೆದಾರರ ವಿಶ್ವಾಸಕ್ಕೆ ಪ್ರತೀಕವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa