ಕಡೆ ಕಾರ್ತಿಕ ಸೋಮವಾರ-ಸಹಸ್ರಾರು ಮಂದಿ ಭಕ್ತರಿಂದ ಅಂತರಗಂಗೆ ಕಾಶಿ ವಿಶ್ವೇಶ್ವರನ ದರ್ಶನ
ಕಡೆ ಕಾರ್ತಿಕ ಸೋಮವಾರ-ಸಹಸ್ರಾರು ಮಂದಿ ಭಕ್ತರಿಂದ ಅಂತರಗಂಗೆ ಕಾಶಿ ವಿಶ್ವೇಶ್ವರನ ದರ್ಶನ
ಚಿತ್ರ : ಕಡೆ ಕಾರ್ತಿಕ ಸೋಮವಾರ-ಸಹಸ್ರಾರು ಮಂದಿ ಭಕ್ತರಿಂದ ಕೋಲಾರ ನಗರ ಹೊರವಲಯದ ಅಂತರಗಂಗೆ ಕಾಶಿ ವಿಶ್ವೇಶ್ವರನ ದರ್ಶನ ಪಡೆದರು.


ಕೋಲಾರ, ೧೭ ನವಂಬರ್ (ಹಿ.ಸ.) :

ಆ್ಯಂಕರ್ : ದಕ್ಷಿಣ ಕಾಶಿ ಎಂದೇ ಖ್ಯಾತಿಯಾದ ನಗರದ ಅಂತರಗಂಗೆಯ ವಿಶ್ವೇಶ್ವರ ಸನ್ನಿಧಿಯಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಪೂಜೆ ನಡೆದಿದ್ದು, ಜಿಲ್ಲೆ, ರಾಜ್ಯ,ಹೊರರಾಜ್ಯಗಳಿಂದ ಬೃಹತ್ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಲ್ಲಿನ ಬಸವನ ಬಾಯಿಂದ ಬರುವ ಪವಿತ್ರ ಜಲ ಪ್ರೋಕ್ಷಣೆ ಮಾಡಿಕೊಂಡು ಪುನೀತರಾದರು. ಕಲ್ಲಿನ ಬಸವನ ಬಾಯಿಂದ ಬರುವ ನೀರು ಪವಿತ್ರ ಗಂಗಾನದಿಯಿಂದಲೇ ಬರುತ್ತಿದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದ್ದು, ಮುಂಜಾನೆಯ ಚಳಿಯಲ್ಲೂ ಭಕ್ತರು ಅಂತರಗಂಗೆ ಬೆಟ್ಟದತ್ತ ದಾಪುಗಾಲು ಹಾಕಿದ್ದು, ಬಜರಂಗದಳ, ವಿಶ್ವ ಹಿಂದೂ ಪರಿಷತ್ ವತಿಯಿಂದ ಉಚಿತ ಸಾರಿಗೆ ಸೇವೆಯನ್ನು ನಗರದ ಬಸ್ ನಿಲ್ದಾಣದ ಸಮೀಪದಿಂದ ವ್ಯವಸ್ಥೆ ಮಾಡಿದ್ದರು.

ಕೋಲಾರ ನಗರದ ಬಸ್ ನಿಲ್ದಾಣದ ಸಮೀಪ ಭಕ್ತಾದಿಗಳಿಗೆ ಸುಸ್ವಾಗತ ಕೋರುವ ಬೃಹತ್ ಕಮಾನುಗಳೊಂದಿಗೆ ಇಡೀ ಪ್ರದೇಶ ಕೇಸರೀಮಯ ವಾಗಿದ್ದು, ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಬಜರಂಗದಳದ ಬೃಹತ್ ಕಮಾ ನುಗಳು, ಬಂಟಿಂಗ್ಗಳು, ಭಗವ ಧ್ವಜಗಳೊಂದಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಬೆಟ್ಟದ ತಪ್ಪಲಲ್ಲಿನ ಜಲಕಂಠೇಶ್ವರ ಸನ್ನಿಧಿಯಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಗೋಕುಲ ಮಿತ್ರಬಳಗ, ಸತ್ಯ ನಾರಾಯಣ ಜ್ಯುವೆಲರ್ಸ್ನ ವೆಂಕಟೇಶ್ ಸೇರಿದಂತೆ ವಿವಿಧ ಸಂಘಟನೆಗಳಿಂದ ಉಚಿತ ಅನ್ನದಾನ ಮತ್ತು ಪ್ರಸಾದ ವಿನಿಯೋಗ ಇಡೀ ದಿನ ನಡೆಯಿತು. ಕಲ್ಲಿನ ಬಸವನ ಬಾಯಲ್ಲಿ ಬರುವ ಅಂತರಗಂಗೆಯ ಪವಿತ್ರ ಜಲಪ್ರೋಕ್ಷಣೆಗಾಗಿ ಸಾವಿರಾರು ಭಕ್ತರು ಆಗಮಿಸಿದ್ದು, ಸ್ವಾಮಿಯ ದರ್ಶನಕ್ಕೆ ಉದ್ದೂದ್ದ ಸರದಿ ಸಾಲು ಕಂಡು ಬಂತು.

ಗಂಗೆಯನ್ನು ಶಿರದಲ್ಲಿ ಧರಿಸಿರುವ ಗಂಗಾಧರ ಇಲ್ಲಿ ಕಾಶಿವಿಶ್ವೇಶ್ವರನಾಗಿದ್ದಾನೆ. ಜಲಕಂಠೇಶ್ವರ ಸನ್ನಿಧಿಯೂ ಇಲ್ಲಿದೆ. ಒಟ್ಟಾರೆ ಅಂತರಗಂಗೆ ಅಸಂಖ್ಯಾತ ಭಕ್ತರ ಪಾಲಿಗೆ ದಕ್ಷಿಣ ಕಾಶಿಯೆಂದೇ ನಾಡಿನಾದ್ಯಂತ ಖ್ಯಾತಿ ಪಡೆದುಕೊಂಡಿದೆ.

ಬಜರಂಗದಳ, ವಿಹಿಂಪ ನೇತೃತ್ವದಲ್ಲಿ ವ್ಯವಸ್ಥೆ ಮಾಡಿದ್ದ ಉಚಿತ ಬಸ್ ಸೇವೆಗೆ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಲಪತಿ, ಹಿಂದೂಗಳ ಪವಿತ್ರ ಕ್ಷೇತ್ರವಾದ ಅಂತರಗಂಗೆಯ ಅಭಿವೃದ್ದಿಗೆ ಮತ್ತಷ್ಟು ಸ್ಪಂದನೆ ಅಗತ್ಯವಿದೆ, ಪ್ರತಿ ವರ್ಷ ನಿರಂತರವಾಗಿ ಉಚಿತ ಬಸ್ ಸೇವೆ ಒದಗಿಸುವ ಮೂಲಕ ಹಿಂದೂ ಸಂಘಟನೆಗಳು ಈ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಲು ಕಾರಣವಾಗಿದೆ ಎಂದರು.

ಸಿಎಂಆರ್.ಶ್ರೀನಾಥ್ ಮಾತನಾಡಿ, ಜಿಲ್ಲೆಗೆ ಒಳ್ಳೆಯ ಮಳೆ,ಬೆಳೆಯಾಗಲಿ, ಜನತೆ ಶಾಂತಿ ನೆಮ್ಮದಿಯಿಂದ ಇರಲು ದಕ್ಷಿಣ ಕಾಶಿ ವಿಶ್ವೇಶ್ವರ ಆಶೀರ್ವದಿಸಲಿ ಎಂದು ಪ್ರಾರ್ಥಿಸಿದರು. ಕಡೆ ಕಾರ್ತಿಕ ಸೋಮವಾರದ ಅಂತರಗಂಗೆ ಜಾತ್ರೆಗಾಗಿ ಹಿಂದೂ ಸಂಘಟನೆಗಳ ಮನವಿಗೆ ಸ್ಪಂದಿಸಿ ಅನೇಕರು ಉಚಿತ ಬಸ್ ಮತ್ತು ವಾಹನ ಸೇವೆಯನ್ನು ಒದಗಿಸಿದ್ದು, ಅಂಬಿಕಾ ಡ್ರಿಪ್ ಇರಿಗೇಷನ್, ಬಾಲಕೃಷ್ಣ ಜ್ಯುವೆಲರ್ಸ್, ಅನಂತ್ ಜ್ಯುವೆಲರ್ಸ್, ಜಿಲ್ಲಾ ಚಿನ್ನಬೆಳ್ಳಿ ವರ್ತಕರ ಸಂಘ, ನಾಗರಾಜ ಸ್ಟೋರ್ಸ್,ಭಜರಂಗದಳದಿಂದ ಮತ್ತಿತರರು ನೆರವಾದರು.

ಅಂತರಗಂಗೆಯ ದಕ್ಷಿಣ ಕಾಶಿ ಕ್ಷೇತ್ರದಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರದಂದು ವಿಶೇಷ ಪೂಜೆ, ಅಭಿಷೇಕ ನಡೆಯುತ್ತಿದೆ. ಕಾರ್ತಿಕ ಮಾಸದ ಕೊನೆ ಸೋಮವಾರವಾದ ಇಂದು ವಿಶ್ವ ಹಿಂದೂ ಪರಿಷತ್ ಸಹಕಾರ ಹಾಗೂ ಭಜರಂಗದಳದ ನೇತೃತ್ವದಲ್ಲಿ ನಡೆಯುವ ಜಾತ್ರೆಯಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಳ್ಳುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಬಜರಂಗದಳ ಹಾಗೂ ವಿಹಿಂಪ ಕಳೆದ ೨೬ ವರ್ಷಗಳಿಂದ ಭಕ್ತರಿಗೆ ಉಚಿತ ಬಸ್ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿದೆ.

ಕಾರ್ತಿಕ ಮಾಸದ ಕೊನೆಸೋಮವಾರ ಅಂತರಗಂಗೆ ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ದ ಪ್ರಯುಕ್ತ ಶ್ರೀ ಸ್ವಾಮಿ ಯವರಿಗೆ ಪ್ರಾತಃ ಕಾಲದಲ್ಲಿ ವಿಶೇಷ ಫಲ ಪಂಚಾಮೃತ ಅಭಿಷೇಕ ರುದ್ರಭಿಷೇಕ ವಿಶೇಷ ಅಲಂಕಾರ ಅರ್ಚನೆ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮಗಳು ದೇವಾಲಯದ ಪ್ರಧಾನ ಅರ್ಚಕರಾದ ಡಾ ||ಕೆ. ಎಸ್. ಮಂಜುನಾಥ ದೀಕ್ಷಿತ್ ಹಾಗೂ ವೆಂಕಟೇಶ್ ದೀಕ್ಷಿತ್ ನೆರವೇರಿಸಿದರು.

ಶಿವಲಿಂಗ ದರ್ಶನಕ್ಕೆ ಸುಗಮ ವ್ಯವಸ್ಥೆ ಮಾಡಿಕೊಡಲು ಹಲವು ಸ್ವಯಂ ಸೇವಕರು ಕಾರ್ಯನಿರ್ವಹಿಸಿದರು.

ಸಿದ್ದತಾ ಕಾರ್ಯದಲ್ಲಿ ಬಜರಂಗದಳ ಮುಖಂಡರಾದ ಬಾಲಾಜಿ, ಬಾಬು ಅಪ್ಪಿ, ವಿಶ್ವನಾಥ್, ವಿಹಿಂಪದ ಡಾ.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದು, ಜಾತ್ರೆಯ ಯಶಸ್ಸಿಗೆ ಸಹಕರಿಸಿದ ವಿವಿಧ ಸಂಘ ಸಂಸ್ಥೆಗಳು, ದಾನಿಗಳು, ಪೊಲೀಸ್ ಇಲಾಖೆ, ಸ್ವಚ್ಚತಾ ಕಾರ್ಯ ನಡೆಸಿದ ನಗರಸಭೆಗೆ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಜರಂಗದಳ ಮುಖಂಡ ಬಾಲಾಜಿ, ಬಾಬು,ಅಪ್ಪಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ವಿಜಯಕುಮಾರ್, ಬಿಜೆಪಿ ನಗರಘಟಕ ಯುವಮೋರ್ಚಾ ಅಧ್ಯಕ್ಷ ಸಾಯಮಾಳಿ, ವಿಶ್ವನಾಥ್, ಮಂಜು, ದೀಪು, ಸಾಯಿಸುಮನ್, ಸಾಯಿಮೌಳಿ, ರಾಜೇಶ್, ಭವಾನಿ, ವೆಂಕಿ, ಯಶ್, ವಿಶಾಖ, ಕೊಂಡೇ, ಮಹೇಶ್, ಸಾಯಿಕುಮಾರ್, ಪ್ರವೀಣ್, ಪ್ರಸನ್ನ, ಗೌತಮ್, ಹರೀಶ್, ಗಿರಿ, ಕಿರಣ್, ಸೋಮಶೇಖರ್, ಆನಂದ್, ಅರ್ಜುನ್, ಸುಧಾಕರ್, ಮೋಹನ್, ನಿತಿನ್, ಪವನ್, ನಿಥುನ್, ಸೋಮು, ಗೌತಮ್, ಮುರಳಿ, ದರ್ಶನ್, ಜಗದೀಶ್, ವಿನಯ್, ಲೋಹಿತ್, ರಾಮು, ನಾಮಲ ಮಂಜು,ಸಾಮಾಬಾಬು, ಮತ್ತಿತರರು ಸ್ವಯಂಸೇವಕರಾಗಿ ಕಾಶಿ ವಿಶ್ವೇಶ್ವರನ ದರ್ಶನಕ್ಕೆ ಭಕ್ತರಿಗೆ ನೆರವಾದರು.

ಚಿತ್ರ : ಕಡೆ ಕಾರ್ತಿಕ ಸೋಮವಾರ-ಸಹಸ್ರಾರು ಮಂದಿ ಭಕ್ತರಿಂದ ಕೋಲಾರ ನಗರ ಹೊರವಲಯದ ಅಂತರಗಂಗೆ ಕಾಶಿ ವಿಶ್ವೇಶ್ವರನ ದರ್ಶನ ಪಡೆದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande