
ಹೊಸಪೇಟೆ, 17 ನವೆಂಬರ್ (ಹಿ.ಸ.) :
ಆ್ಯಂಕರ್ : ಸಹಕಾರ ಸಂಸ್ಥೆಗಳ ತತ್ವಗಳು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿ, ಲಕ್ಷಾಂತರ ಕುಟುಂಬಗಳಿಗೆ ಸ್ವಾವಲಂಬನೆಯ ಬದುಕನ್ನು ನೀಡುವಲ್ಲಿ ಸಹಕಾರ ಸಂಸ್ಥೆಗಳು ಪೂರಕವಾಗಿವೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಹಾಗೂ ಹರಪನಹಳ್ಳಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದ್ದಾರೆ.
ನಗರದ ಸುರಭಿ ಕಲ್ಯಾಣ ಮಂಟಪದ ಎಂ.ಪಿ.ರವೀಂದ್ರ ವೇದಿಕೆಯಲ್ಲಿ ರಾಜ್ಯ ಸಹಕಾರಿ ಮಂಡಳಿ, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹೊಸಪೇಟೆ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಅವಳಿ ಜಿಲ್ಲೆಯ ಎಲ್ಲಾ ವರ್ಗದ ಸಹಕಾರಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.
ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಸಹಕಾರ ಸಂಸ್ಥೆಗಳು ಬಹುಮುಖ್ಯ ಪಾತ್ರವನ್ನು ವಹಿಸಲಿವೆ. ಈಗಾಗಲೇ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ. ಜತೆಗೆ ಸಹಕಾರ ಸಂಸ್ಥೆಗಳಲ್ಲಿ ಭಾಗವಹಿಸುವ ಮೂಲಕ ಇನ್ನಷ್ಟು ಸಧೃಡಗೊಳ್ಳಬಹುದಾಗಿದೆ.
ಈ ಬಾರಿಯ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಧ್ಯೇಯ ‘ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಘಗಳು’ ಎಂಬುದಾಗಿದೆ. ಸಹಕಾರ ಸಂಸ್ಥೆಗಳು ದೇಶವನ್ನು ಆರ್ಥಿಕವಾಗಿ ಸದೃಢವಾಗಿಸುವುದರ ಜತೆಗೆ ಕೃಷಿ, ಹಾಲು, ವಸತಿ, ಕೈಗಾರಿಕೆ, ಬ್ಯಾಂಕಿ0ಗ್ ಮತ್ತು ಸೇವಾ ವಲಯದಲ್ಲಿ ಕ್ಷಿಪ್ರ ಸಾಧನೆಯನ್ನು ಮಾಡುತ್ತಿವೆ. ಸಂಸ್ಥೆಗಳು ಪಾರದರ್ಶಕತೆ ಮತ್ತು ನಿಷ್ಠೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದರಿಂದ ಪ್ರಸ್ತುತದಲ್ಲಿ ಸಹಕಾರಿ ಸಂಸ್ಥೆಗಳು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ