
ಗದಗ, 17 ನವೆಂಬರ್ (ಹಿ.ಸ.)
ಆ್ಯಂಕರ್:- ಗದಗ ನಗರದಲ್ಲಿ ಅತಿರುದ್ರ ಮಹಾಯಾಗ ಸೇವಾ ಸಮಿತಿ ವತಿಯಿಂದ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ 9 ಅಗ್ನಿಕುಂಡದ ಅತಿ ರುದ್ರ ಮಹಾಯಜ್ಞ ಹಾಗೂ 11111 ಮುತ್ತೈದರಿಂದ ಕಿರಿಯ ಕುಂಭಮೇಳ ಕಾರ್ಯಕ್ರಮಗಳ ಸಮಾರೋಪ ಧರ್ಮಸಭೆ ಹಾಗೂ ಸನ್ಮಾನ ಸಮಾರಂಭ ಇದೇ ದಿ.18ರಂದು ಸಂಜೆ 4 ಗಂಟೆಗೆ ವಿದ್ಯಾದಾನ ಸಮಿತಿ ಮೈದಾನದಲ್ಲಿ ಜರುಗಲಿದೆ ಎಂದು ಅತಿರುದ್ರ ಮಹಾಯಾಗ ಸೇವಾ ಸಮಿತಿಯ ಗೌರವಾಧ್ಯಕ್ಷರು ಹಾಗೂ ಶಾಸಕರಾದ ಸಿ.ಸಿ. ಪಾಟೀಲ ಅವರು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ನಾಗಾಸಾಧುಗಳಾದ ಪೂಜ್ಯಶ್ರೀ ಸಹದೇವಾನಂದ ಗಿರಿಜಿ ಮಹಾರಾಜರು ನೇತೃತ್ವ ವಹಿಸುವರು. ಮಣಕವಾಡದ ಅನ್ನದಾನೇಶ್ವರ ಮಠದ ಪೂಜ್ಯಶ್ರೀ ಅಭಿನಯ ಮೃತ್ಯುಂಜಯ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸುವರು. ಹೊಸಳ್ಳಿ ಪೂಜ್ಯಶ್ರೀ ಅಭಿನವ ಬೂದೀಶ್ವರ ಮಹಾಸ್ವಾಮಿಗಳು, ಬಳಗಾನೂರು ಸುಕ್ಷೇತ್ರದ ಪೂಜ್ಯಶ್ರೀ ಶಿವಶಾಂತವೀರ ಶರಣರು, ನರಗುಂದ ಬೈರನಟ್ಟಿಯ ಪೂಜ್ಯಶ್ರೀ ಶಾಂತಲಿಂಗ ಮಹಾಸ್ವಾಮಿಗಳು, ಸೂಡಿ ಜುಕ್ತಿ ಹಿರೇಮಠದ ಪೂಜ್ಯಶ್ರೀ ಕೊಟ್ಟೂರು ಬಸವೇಶ್ವರ ಮಹಾಸ್ವಾಮಿಗಳು, ಶಿರೋಳದ ಪೂಜ್ಯಶ್ರೀ ಅಭಿನವ ಯಚ್ಚರ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಮಾಜಿ ಶಾಸಕ ಹಾಗೂ ಮಹಾಯಾಗ ಸೇವಾ ಸಮಿತಿಯ ಗೌರಾಧ್ಯಕ್ಷರಾದ ಡಿ. ಆರ್. ಪಾಟೀಲ, ಸಿ.ಸಿ. ಪಾಟೀಲ ಉಪಸ್ಥಿತರಿರುವರು.
ಮಹಾಯಾಗ ಸೇವಾ ಸಮಿತಿಯ ಅಧ್ಯಕ್ಷ ಕಿರಣ ಭೂಮಾ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ಕೆ. ಪಾಟೀಲ, ಸಂಸದರಾದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಶಾಸಕ ಜಿ. ಎಸ್. ಪಾಟೀಲ, ಸಂಸದ ಪಿ. ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ, ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಮುಂತಾದವರು ಆಗಮಿಸುವುದು ಎಂದು ಹೇಳಿದರು.
ಇದೇ ನ. 11 ರಿಂದ 18ರ ವರೆಗೆ ಜರುಗುವ ಈ ಕಿರಿಯ ಕುಂಭಮೇಳದಲ್ಲಿ ಯಜ್ಞದ ಯಜ್ಞಾರ್ಥಿಗಳಿಗೆ ದಶವಿಧಿಗತಿ ಸ್ನಾನ ಮತ್ತು ಸಂಕಲ್ಪ ಮಾಡಲಾಯಿತು. ಯಜ್ಞ ಶಾಲಾ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ 9 ಅಗ್ನಿಕುಂಡಗಳನ್ನು ಒಳಗೊಂಡ ಮಹಾಯಜ್ಞ ದಿನನಿತ್ಯ ನಡೆಯುತ್ತಿದೆ. ಪ್ರತಿನಿತ್ಯ 20 ರಿಂದ 30 ಸಾವಿರ ಭಕ್ತರು ಯಜ್ಞದ ದರ್ಶನ ಪಡೆಯುತ್ತಿದ್ದಾರೆ. ಎಲ್ಲಾ ಭಕ್ತರಿಗೂ ನಿತ್ಯ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳು ಸಮಾಜದ ಪ್ರಮುಖರಿಂದ ಸ್ವಯಂಸೇವಾ ಕಾರ್ಯ ನಡೆಯುತ್ತಿದೆ. ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ನಾಗಾಸಾಧುಗಳು ಮತ್ತು ಸಂತರಿಂದ ರುದ್ರಾಕ್ಷಿ ವಿತರಣೆ ನಡೆಯುತ್ತಿದೆ. ಈಗಾಗಲೇ 4.5 ಲಕ್ಷ ರುದ್ರಾಕ್ಷಿ ವಿತರಣೆ ಮಾಡಲಾಗಿದೆ. ಒಟ್ಟು 5 ಲಕ್ಷ ರುದ್ರಾಕ್ಷಿ ವಿತರಣೆಯನ್ನು ಯಜ್ಞ ಸಭೆ ಮುಗಿಯುವವರೆಗೆ ಮಾಡಲಾಗುವುದು. ನೂರಾರು ಜನರು 108 ಬಾರಿ ಯಜ್ಞ ಶಾಲಾ ಪರಿಕ್ರಮದ ಪ್ರದಕ್ಷಿಣೆ ಮಾಡುವ ಮೂಲಕ ಭಕ್ತಿ ಭಾವವನ್ನು ಪ್ರಕಟಿಸಿದ್ದಾರೆ. ಭಕ್ತಾದಿಗಳಿಗೆ, ಯಜ್ಞಾತಿಗಳಿಗೆ, ವೃತ್ವಜರಿಗೆ ಹಾಗೂ ಸಾಧು-ಸಂತರಿಗೆ ಪ್ರಸಾದ ವ್ಯವಸ್ಥೆ ಜೈನ ಸಮಾಜ ಬಾಂಧವರು ಮಾಡುತ್ತಿದ್ದಾರೆ. ಪೌರಕಾರ್ಮಿಕರು ಸ್ವಚ್ಛತೆ, ಅಗ್ನಿಶಾಮಕದಳದವರು ಮುಂಜಾಗ್ರತೆ ಹಾಗೂ ಪೆÇಲೀಸ್ ಇಲಾಖೆಯಿಂದ ರಕ್ಷಣಾ ಸೇವೆ ನಿರಂತರವಾಗಿ ಸಾಗಿದೆ ಎಂದು ಸಿ.ಸಿ.ಪಾಟೀಲ ಅವರು ಹೇಳಿದರು.
ಇದೇ ನವೆಂಬರ್ 18ರಂದು ಅತಿರುದ್ರ ಮಹಾಯಾಗದ ಪೂರ್ಣಾವತಿ ಕಾರ್ಯಕ್ರಮ ಜರುಗಲಿದೆ. ಧಾರ್ಮಿಕ ವಿಧಿವಿಧಾನ ಮತ್ತು ಯಜ್ಞ ಯಾಗವನ್ನು ನಾನು ಜೀವಮಾನದಲ್ಲಿ ಮೊದಲ ಬಾರಿಗೆ ನೋಡುತ್ತಿದ್ದೇನೆ ಪ್ರತಿದಿನ ಬೆಳಿಗ್ಗೆ 8 ರಿಂದ ಸಂಜೆ 6:30 ಶಾಸ್ತ್ರೋಕ್ತವಾಗಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆಯೋಜಿಸಿ ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳುವಂತೆ ಮಾಡಿ ನಮ್ಮನ್ನೆಲ್ಲ ಪಾವನಗೊಳಿಸಿದ್ದಾರೆ. ದೇಶದ ಎಲ್ಲ ಪವಿತ್ರ ನದಿಯ ನೀರನ್ನು ತಂದು ಒಂಬತ್ತು ದಂಪತಿಗಳಿಗೂ ಸ್ನಾನ ಮಾಡಿಸಿ ಪೂಜಾ ಮಾಡಿಸುತ್ತಿರುವುದು ಪುಣ್ಯದ ಕೆಲಸವಾಗಿದೆ. ಇದು ಜಾತ್ಯಾತೀತ, ಧರ್ಮಾತೀತವಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು ನಾನು ಕೂಡ ಇಲ್ಲಿ ಒಬ್ಬ ಭಕ್ತನಾಗಿ ಬಂದು ಸೇವೆ ಸಲ್ಲಿಸುತ್ತಿದ್ದೇನೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಬೇರೆ ಬೇರೆ ಜಿಲ್ಲೆಗಳಲ್ಲಿಯೂ ನಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಗಾಸಾಧು ಪೂಜ್ಯಶ್ರೀ ಸಹದೇವಾನಂದ ಗಿರಿಜಿ ಮಹಾರಾಜರು ಮಾತನಾಡಿ, ಈ ಕಾರ್ಯಕ್ರಮದಿಂದ ಗದುಗಿನ ಜನತೆ ಸೇರಿದಂತೆ ಎಲ್ಲರಿಗೂ ಪುಣ್ಯಪ್ರಾಪ್ತಿವಾಗಲಿದೆ. ಈ ಹಿಂದೆ ಸಮುದ್ರ ಮಂಥನದಿಂದ ಸುರ-ಅಸುರಸುರ ಸಂಘರ್ಷದಲ್ಲಿ ಮೊದಲ ಉತ್ಪತ್ತಿಯಾದ ವಿಷವನ್ನು ಶಿವನು ತಾನೆ ಕುಡಿದು ನಂತರದ ಅಮೃತವನ್ನು ದೇವತೆಗಳಿಗೆ ನೀಡಿದಂತೆ. ಜೀವನದಲ್ಲಿ ಒಳ್ಳೆಯ ಕೆಲಸಗಳಿಗಾಗಿ ಮಾಡುವ ಸಂಘರ್ಷದಿಂದ ಮೊದಲು ವಿಷ ಉತ್ಪತ್ತಿಯಾಗುತ್ತದೆ ನಂತರದ ಪ್ರಯತ್ನದಿಂದ ಅಮೃತಧಾರೆಯಾಗಿ ಹರಿದು ಬರುತ್ತದೆ. ಅದೇರೀತಿ ಈ ಕಿರಿಯ ಕುಂಭಮೇಳದಿಂದ ಇಲ್ಲಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಲಭಿಸಲಿದೆ. ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ ನಾಗಾಸಾಧು ಹಾಗೂ ಸಂತರ ದರ್ಶನಾಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಿರಿಯ ಕುಂಭಮೇಳದ ಗೌರವಾಧ್ಯಕ್ಷರಾದ ಎಸ್. ಹೆಚ್. ಶಿವನಗೌಡರ, ಅಧ್ಯಕ್ಷರಾದ ಕಿರಣ ಭೂಮಾ ಹಾಗೂ ಪದಾಧಿಕಾರಿಗಳಾದ ಬಸವರಾಜ ಬಿಂಗಿ, ರವಿ ಗುಂಜಿಕರ, ರಾಜು ಕುರಡಗಿ, ರಮೇಶ ಸಜ್ಜಗಾರ, ಪ್ರಶಾಂತ ನಾಯ್ಕರ, ಪ್ರಕಾಶ ಅಂಗಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP