
ರಿಯಾದ್, 17 ನವೆಂಬರ್ (ಹಿ.ಸ.) :
ಆ್ಯಂಕರ್ : ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಭಾರತೀಯ ಉಮ್ರಾ ಯಾತ್ರಿಕರನ್ನು ಹೊತ್ತ ಬಸ್ ಭಾನುವಾರ ರಾತ್ರಿ ಭೀಕರ ಅಪಘಾತಕ್ಕೊಳಗಾಗಿದೆ. ಭಾರತೀಯ ಸಮಯ ರಾತ್ರಿ 1.30ರ ಸುಮಾರಿಗೆ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿದೆ. ಅಪಘಾತದಲ್ಲಿ ಕನಿಷ್ಠ 42 ಯಾತ್ರಿಕರು ಸಾವನ್ನಪ್ಪಿದಾರೆಂದು ಶಂಕಿಸಲಾಗಿದೆ. ಮೃತರಲ್ಲಿ 11 ಮಹಿಳೆಯರು ಮತ್ತು 10 ಮಕ್ಕಳು ಸೇರಿದ್ದಾರೆಂದು ಮೂಲಗಳು ತಿಳಿಸಿವೆ. ಇನ್ನೂ ಅಧಿಕೃತ ಸಂಖ್ಯೆಯನ್ನು ಸೌದಿ ಅಧಿಕಾರಿಗಳು ದೃಢಪಡಿಸಬೇಕಿದೆ.
ಅಪಘಾತ ಮದೀನಾದಿಂದ 160 ಕಿಮೀ ದೂರದ ಮುಹ್ರಾಸ್-ಮುಫ್ರಿಹಾತ್ ಪ್ರದೇಶದಲ್ಲಿ ಸಂಭವಿಸಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಡಿಕ್ಕಿ ನಂತರ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಶವಗಳನ್ನು ಗುರುತಿಸುವುದು ಕಷ್ಟವಾಗಿರುವುದಾಗಿ ಸೌದಿ ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ತೀವ್ರ ಸುಟ್ಟಗಾಯಗಳಿಂದ ಓರ್ವ ಯಾತ್ರಿಕರನ್ನು ರಕ್ಷಿಸಲಾಗಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ ಸೌದಿ ನಾಗರಿಕ ರಕ್ಷಣಾ ಪಡೆ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ದಳವು ಹಲವಾರು ಗಂಟೆಗಳ ನಿರಂತರ ಪ್ರಯತ್ನದಿಂದ ಬೆಂಕಿಯನ್ನು ನಂದಿಸಲಾಗಿದೆ. ಮೃತರ ಶವಗಳನ್ನು ಗುರುತಿಸುವ ಕಾರ್ಯ ಮುಂದುವರಿದಿದೆ.
ಈ ಘಟನೆ ಬಳಿಕ ಭಾರತೀಯ ರಾಯಭಾರ ಕಚೇರಿ, ಸ್ಥಳೀಯ ಉಮ್ರಾ ಏಜೆನ್ಸಿಗಳು ಮತ್ತು ಸೌದಿ ಅಧಿಕಾರಿಗಳು ಬಲಿಪಶುಗಳ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿವೆ. ಹೆಚ್ಚಿನವರು ಭಾರತದ ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳವರಾಗಿರುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa