
ವಿಜಯಪುರ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025ರ ಅಂಗವಾಗಿ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಇಂದು ನಗರದ ಪ್ರಾಚೀನ ಸ್ಮಾರಕ ಗಗನ ಮಹಲ ಆವರಣದಲ್ಲಿ ನಡೆಯಿತು.
ಪ್ರಾಥಮಿಕ ವಿಭಾಗ, ಹೈಸ್ಕೂಲು ವಿಭಾಗ ಹಾಗೂ ಪಿಯು ಕಾಲೇಜು ವಿಭಾಗ ಒಟ್ಟು ಮೂರು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ಪಾಲ್ಗೋಂಡರು. ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದು ಗಮನ ಸೆಳೆಯಿತು.
ಹೆರಿಟೇಜ್ ರನ್ 21 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುವ ಕ್ರೀಡಾಪಟುಗಳು ಓಡುವ ವಿಜಯಪುರ ನಗರದಲ್ಲಿರುವ ಪ್ರಾಚೀನ ಸ್ಮಾರಕಗಳಾದ ಗೋಳಗುಮ್ಮಟ, ಸುಂದರೇಶ್ವರ ಮಂದಿರ, ಗಗನ ಮಹಲ್, ಶ್ರೀ ನರಸಿಂಹ ದೇವಸ್ಥಾನ, ಬಾರಾಕಮಾನ, ಇಬ್ರಾಹಿಂ ರೋಜಾ, ಶಿಕ್ಷಣ ಸಂಸ್ಥೆಗಳಾದ ಸೈನಿಕ ಶಾಲೆ, ಬಿ.ಎಲ್.ಡಿ.ಇ ಸಂಸ್ಥೆ ಶಾಲೆಗಳು, ಜ್ಞಾನಯೋಗಾಶ್ರಮ ಹಾಗೂ ವಿಜಯಪುರ ನಗರದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನ ಸ್ಮಾರಕಗಳ ಮಹತ್ವ ಸಾರುವ ಚಿತ್ರಗಳನ್ನು ಬಿಡಿಸುವ ವಿಷಯವನ್ನು ನೀಡಲಾಗಿತ್ತು.
ಕೈಯಲ್ಲಿ ಕುಂಚ ಮತ್ತು ಬಣ್ಣ ಹಿಡಿದು ಬಿಳಿಯ ಹಾಳೆಯ ಮೇಲೆ ತಮಗೆ ಇಷ್ಟವಾದ ಸ್ಮಾರಕಗಳನ್ನು ಅಂದವಾಗಿ ಬಿಡಿಸಿದ ಮಕ್ಕಳ ಚಿತ್ರಗಳು ಚಂದವಾಗಿದ್ದವು. ವಿಜಯಪುರ ನಗರದ ನಾನಾ ಶಾಲೆ ಕಾಲೇಜುಗಳು ಸೇರಿದಂತೆ ಗ್ರಾಮೀಣ ಭಾಗದಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಈ ಸ್ಪರ್ಧೆಯ.ಲ್ಲಿ ಪಾಲ್ಗೋಂಡರು.
ಈ ಕುರಿತು ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ವಿಜಯಪುರ ಜಿಲ್ಲೆಯ ಮಕ್ಕಳಲ್ಲಿ ಬಾಲ್ಯದಿಂದಲೇ ಪರಿಸರ, ಕ್ರೀಡೆ, ಪ್ರಾಚೀನ ಸ್ಮಾರಕಗಳು, ಪ್ರವಾಸಿ ತಾಣಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ಬಾರಿ ಎರಡು ವಿಶೇಷ ಸ್ಪರ್ಧೆ ಆಯೋಜಿಸಲಾಗಿದೆ. ಚಿತ್ರ ಬಿಡಿಸುವ ಸ್ಪರ್ಧೆ ಈಗ ನಡೆಯುತ್ತಿದ್ದು, ಮುಂಬರುವ ರವಿವಾರ ನಿಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಕೋಟಿವೃಕ್ಷ ಅಭಿಯಾನ ತಂಡ ವಿಶೇಷ ಮುತುವರ್ಜಿ ವಹಿಸಿ ಈ ಸ್ಪರ್ಧೆ ಆಯೋಜಿಸಿದೆ ಎಂದು ತಿಳಿಸಿದರು.
ಸುಲೋಚನಾ ರಾಜಕುಮಾರ ಕುಮಾನಿ ಮಾತನಾಡಿ, ವೃಕ್ಷಥಾನ್ ಅಂಗವಾಗಿ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಿರುವುದು ಸ್ತುತ್ಯಾರ್ಹವಾಗಿದೆ. ಇಂದು ಮಕ್ಕಳು ಮೊಬೈಲ್, ಟ್ಯಾಬ್ ನಲ್ಲಿ ಬ್ಯೂಸಿಯಾಗಿರುತ್ತಾರೆ. ಇಂಥ ಸ್ಪರ್ಧೆ ಆಯೋಜಿಸಿರುವುದರಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಲು ಒಂದು ವೇದಿಕೆ ಒದಗಿಸಿದಂತಾಗಿದೆ. ಶಾಲೆಯ ಮಕ್ಕಳು ಕೂಡ ಇಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದಾರೆ. ಮಕ್ಕಳಿಗಾಗಿ ಇಂಥ ಬೇರೆ ಬೇರೆ ಸ್ಪರ್ಧೆಗಳನ್ನು ಇನ್ನೂ ಹೆಚ್ಚೆಚ್ಚು ಆಯೋಜಿಸಬೇಕು ಎಂದು ಹೇಳಿದರು.
ಒಂದನೇ ತರಗತಿ ವಿದ್ಯಾರ್ಥಿನಿ ಪ್ರಕೃತಿ ಬಿರಾದಾರ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿರುವುದು ತುಂಬಾ ಖುಷಿ ತಂದಿದೆ. ಇಲ್ಲಿ ಬಹಳಷ್ಟು ಮಕ್ಕಳನ್ನು ಕಂಡು ನನಗೆ ಬಹಳ ಆನಂದವಾಗಿದೆ. ನಾನು ಪ್ರಾಚೀನ ಸ್ಮಾರಕದ ಚಿತ್ರವನ್ನು ಬಿಡಿಸಿದ್ದೇನೆ ಎಂದು ಹೇಳಿದಳು.
ಕಾರ್ಯಕ್ರಮ ನಿರ್ವಹಿಸಿದ ಅಮೀತ ಬಿರಾದಾರ, ಶಿವು ಕುಂಬಾರ ಮತ್ತು ರಮೇಶ ಬಿರಾದಾರ ಮಾತನಾಡಿ, ಮಕ್ಕಳಿಗೆ ಚಿತ್ರ ಬಿಡಿಸಲು ಒಟ್ಟು ಎರಡು ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತ ಮಕ್ಕಳ ಹೆಸರುಗಳನ್ನು ನಂತರ ಪ್ರಕಟಿಸಲಾಗುವುದು. ಮೂರೂ ವಿಭಾಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ರೂ. 10000, ದ್ವಿತೀಯ ಸ್ಥಾನ ಪಡೆಯುವವರಿಗೆ ರೂ. 7000, ತೃತಿಯ ಸ್ಥಾನ ಪಡೆಯುವವರಿಗೆ ರೂ. 5000 ಹಾಗೂ ಇಬ್ಬರಿಗೆ ತಲಾ ರೂ. 2500 ಸಮಾಧಾನಕರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande