
ಗದಗ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ಮಾಡುವ ಕೂಲಿಕಾರರ ಹಾಜರಾತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ-ಕೆವೈಸಿ ಕಾರ್ಯದಲ್ಲಿ ನರಗುಂದ ತಾಲೂಕು ಪಂಚಾಯತ ಗದಗ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ತಾಲೂಕಿನಲ್ಲಿ ಶೇಕಡಾ ೮೯.೭೬ ರಷ್ಟು ಸಾಧನೆ ಮಾಡುವುದರ ಮೂಲಕ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ನರೇಗಾ ಸಕ್ರಿಯ ಕೂಲಿಕಾರರ ಇ-ಕೆವೈಸಿ ಮಾಡಿದ ಹೆಗ್ಗಳಿಕೆಗೆ ನರಗುಂದ ತಾಲೂಕು ಪಾತ್ರವಾಗಿದೆ.
ನರಗುಂದ ತಾಲೂಕಿನಲ್ಲಿ ಒಟ್ಟು ೧೩ ಗ್ರಾಮ ಪಂಚಾಯತಿಗಳ ಪೈಕಿ ೧೯೩೦೪ ಸಕ್ರಿಯ ನರೇಗಾ ಕೂಲಿಕಾರರು ಇದ್ದಾರೆ. ರವಿವಾರದ ಎಂ.ಐ.ಎಸ್ ವರದಿ ಪ್ರಕಾರ ೧೭೩೨೭ ಸಕ್ರಿಯ ಕೂಲಿಕಾರರ ಇ-ಕೆವೈಸಿ ಮಾಡುವುದರ ಮೂಲಕ ೮೯.೭೬ ಪ್ರತಿಶತ ಸಾಧನೆ ಮಾಡುವುದರ ಮೂಲಕ ಗದಗ ಜಿಲ್ಲೆಯ ಇನ್ನುಳಿದ ತಾಲೂಕುಗಳಿಗಿಂತ ಹೆಚ್ಚಿನ ಪ್ರಗತಿ ಮಾಡಿದೆ. ಗದಗ ತಾಲೂಕು ೭೯.೮%, ಗಜೇಂದ್ರಗಡ-೮೩.೩೪%, ಲಕ್ಷ್ಮೇಶ್ವರ-೮೮.೧೫%, ಮುಂಡರಗಿ-೭೯.೯೮%, ರೋಣ-೮೨.೦೬ ಹಾಗೂ ಶಿರಹಟ್ಟಿ ತಾಲೂಕು ೮೮.೮ ರಷ್ಟು ನರೇಗಾ ಸಕ್ರಿಯ ಕೂಲಿಕಾರರ ಇ-ಕೆವೈಸಿ ಪ್ರಗತಿ ಸಾಧಿಸಿವೆ.
ತಾಲೂಕಿನಲ್ಲಿ ಕೊಣ್ಣೂರು ಹೊರತು ಪಡಿಸಿ ಉಳಿದ ಗ್ರಾಮ ಪಂಚಾಯತಗಳಲ್ಲಿ ಗ್ರಾಮ ಕಾಯಕ ಮಿತ್ರರು ಇಲ್ಲದೇ ಇದ್ದರೂ ನರೇಗಾ ಬಿ. ಎಫ. ಟಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ತಾಲೂಕಿನ ವ್ಯಾಪ್ತಿಯ ಎಲ್ಲಾ ಮನೆ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ನರೇಗಾ ಸಕ್ರಿಯ ಕೂಲಿಕಾರರನ್ನು ಮನವೊಲಿಸಿ ಮುಂಜಾನೆ ಮತ್ತು ಸಾಯಂಕಾಲ ರೈತಾಪಿ ವರ್ಗ ಲಭ್ಯವಿರುವ ಅವಧಿಯಲ್ಲಿ ಭೇಟಿ ಮಾಡಿ, ಮನವೊಲಿಸಿರುವದರ ಪರಿಣಾಮವೇ ಈ ಪ್ರಗತಿಗೆ ಕಾರಣವಾಗಿದೆ. ನರಗುಂದ ತಾಲೂಕಿನ ಸುರಕೋಡ ಗ್ರಾಮ ಪಂಚಾಯತ ೯೮.೨೨ ರಷ್ಟು ಹಾಗೂ ವಾಸನ ಗ್ರಾಮ ಪಂಚಾಯತಿ ೯೩.೪೪ ರಷ್ಟು ಪ್ರಗತಿ ಸಾಧಿಸುವ ಮೂಲಕ ಜಿಲ್ಲೆಗೆ ಪ್ರಥಮ ಮತ್ತು ತೃತಿಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿವೆ..
ಗ್ರಾಮೀಣ ಪ್ರದೇಶಗಳ ಕೂಲಿಕಾರರ ಜೀವನೋಪಾಯದ ಅಭಿವೃದ್ಧಿ ಮತ್ತು ಹಳ್ಳಿಗಳಲ್ಲಿ ವಲಸೆ ತಡೆಗಟ್ಟಿ ಇರುವ ಗ್ರಾಮದಲ್ಲಿ ಕೂಲಿಕಾರರಿಗೆ ಕೆಲಸ ಕೊಡುವ ಉದ್ದೇಶದಿಂದ ನರೇಗಾ ಯೋಜನೆ ಜಾರಿಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಹಾಜರಾತಿ ನಿರ್ವಹಣೆಯಲ್ಲಿ ಕೆಲವು ಕಡೆ ಆರೋಪಗಳು ಕಂಡು ಬಂದಿದ್ದವು. ಹೀಗಾಗಿ ಕೇಂದ್ರ ಸರ್ಕಾರ ನರೇಗಾ ಕೂಲಿಕಾರರ ಹಾಜರಾತಿಯಲ್ಲಿ ಕಡ್ಡಾಯವಾಗಿ ಇ-ಕೆವೈಸಿ ಜಾರಿಗೊಳಿಸುವುದರ ಮೂಲಕ ಕೂಲಿಕಾರರ ಹಾಜರಾತಿಯಲ್ಲಿ ಪಾರದರ್ಶಕತೆ ತರಲು ಮುಂದಾಗಿದೆ.
ನರಗುಂದ ತಾಲೂಕಿನ ಒಟ್ಟು ೧೯೩೦೪ ನರೇಗಾ ಕೂಲಿಕಾರರು ಇದ್ದಾರೆ. ಈವರೆಗೂ ೧೭೩೨೭ ಕೂಲಿಕಾರರ ಇ-ಕೆವೈಸಿ ಆಗಿದ್ದು, ಬಾಕಿಯಿರುವ ೧೯೭೭ ಕೂಲಿಕಾರರು ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇ-ಕೆವೈಸಿ ಮಾಡಿಸಿಕೊಳ್ಳದ ನರೇಗಾ ಕೂಲಿಕಾರರು ಈಗಲೇ ಹತ್ತಿರದ ಗ್ರಾಮ ಪಂಚಾಯತಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳವುದು. ಇಲ್ಲದಿದ್ದಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ದೊರಕುವುದಿಲ್ಲಾ ಎಂದು ನರಗುಂದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ.ಇನಾಮದಾರ ಹೇಳಿದ್ದಾರೆ.
ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸ್ವಚ್ಚತಾ ವಾಹಿನಿ ಮೂಲಕ, ಸಾಮಾಜಿಕ ಮಾದ್ಯಮಗಳ ಮೂಲಕ, ಪತ್ರಿಕೆಗಳ ಮೂಲಕ ಇ-ಕೆವೈಸಿ ಮಹತ್ವದ ಬಗ್ಗೆ ಪ್ರಚಾರ ಮಾಡಲಾಗಿದೆ. ನರಗುಂದ ತಾಲೂಕಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಮತ್ತು ನರೇಗಾ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಕೈವೈಸಿ ಮಾಡಿದ್ದಾರೆ.. ಈ ಸಾಧನೆಗೆ ಗ್ರಾಪಂ ಸಿಬ್ಬಂದಿಗಳು ಮತ್ತು ನರೇಗಾ ಸಿಬ್ಬಂದಿಗಳ ಪರಿಶ್ರಮವೇ ಕಾರಣ ಎಂದು ನರಗುಂದ ತಾಲೂಕು ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP