
ಶ್ರೀನಗರ, 10 ನವೆಂಬರ್ (ಹಿ.ಸ.) :
ಆ್ಯಂಕರ್ : ಭಯೋತ್ಪಾದಕ ಜಾಲದ ತನಿಖೆಯ ಭಾಗವಾಗಿ ಬಂಧಿತ ವೈದ್ಯನಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಹರಿಯಾಣದ ಫರಿದಾಬಾದ್‌ನಲ್ಲಿ ಸ್ಫೋಟಕಗಳು ಮತ್ತು ದಾಳಿ ರೈಫಲ್‌ಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ, ಸಂಯುಕ್ತ ಕಾರ್ಯಾಚರಣೆಯಲ್ಲಿ ಸುಮಾರು 300 ಕಿಲೋಗ್ರಾಂ ಸ್ಫೋಟಕ ತಯಾರಿಕಾ ವಸ್ತು, ಒಂದು ಎಕೆ-47 ದಾಳಿ ರೈಫಲ್, ಮತ್ತು ಹಲವು ಮದ್ದುಗುಂಡುಗಳು ಪತ್ತೆಯಾಗಿವೆ. ಈ ಪತ್ತೆ ಇತ್ತೀಚೆಗೆ ಬಂಧಿಸಲಾದ ಇಬ್ಬರು ವೈದ್ಯರ ವಿಚಾರಣೆಯ ಫಲಿತಾಂಶವಾಗಿದೆ.
ಬಂಧಿತರಲ್ಲಿ ಒರ್ವನಾದ ಡಾ. ಅದೀಲ್ ಅಹ್ಮದ್ ರಾಥರ್ ಖಾಜಿಗುಂಡ್ ನಿವಾಸಿ ಹಾಗೂ ಅನಂತನಾಗ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ನಿವಾಸಿಯಾಗಿ ಅಕ್ಟೋಬರ್ 24, 2024ರವರೆಗೆ ಸೇವೆ ಸಲ್ಲಿಸಿದ್ದ. ಇನ್ನೊಬ್ಬ ವೈದ್ಯ ಡಾ. ಮುಜಮ್ಮಿಲ್ ನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಇಬ್ಬರೂ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 7/25, ಜೊತೆಗೆ ಯುಎಪಿಎ ಕಾಯ್ದೆಯ ಸೆಕ್ಷನ್‌ಗಳು 13, 28, 38 ಮತ್ತು 39 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಈ ಜಾಲದ ವ್ಯಾಪ್ತಿ ಮತ್ತು ಅದರ ಹಣಕಾಸು ಮೂಲಗಳ ಬಗ್ಗೆ ಪೊಲೀಸರು ಗಂಭೀರ ಪರಿಶೀಲನೆ ನಡೆಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa