
ಬೆಂಗಳೂರು, 10 ನವೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಉಗ್ರರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬ ವಿಚಾರದಲ್ಲಿ ಸರ್ಕಾರ ತನಿಖೆ ನಡೆಸುತ್ತೇವೆ ಎಂದು ಹೇಳುತ್ತಿದೆ. ಆದರೆ ನಿಜವಾದ ಉಗ್ರರು ವಿಧಾನಸೌಧದಲ್ಲೇ ಇದ್ದಾರೆ. ಅವರ ಬಗ್ಗೆ ಏನು ಮಾಡುವಿರಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಲ್ಲಿ ಅಪರಾಧಿಗಳ ರಕ್ಷಣೆಗೆ ಸೌಲಭ್ಯ ನೀಡಲಾಗುತ್ತಿದೆ . ಕಳೆದ 3–4 ದಿನಗಳಿಂದ ಆ ವಿಡಿಯೋಗಳು ವೈರಲ್ ಆಗಿವೆ. ಸೆಂಟ್ರಲ್ ಜೈಲಿನಲ್ಲಿ ನಡೆಯುತ್ತಿರುವುದು ಹೊಸದಲ್ಲ. ಹಿಂದೆ ಅಧಿಕಾರಿಗಳ ಮಧ್ಯೆ ಘರ್ಷಣೆ ನಡೆದಾಗಲೂ ರಾಜಕೀಯ ನಾಟಕವಾಯಿತು. ಈಗಲೂ ಅದೇ ಮಾದರಿ ಪುನರಾವರ್ತನೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತನಿಖೆ ಮಾಡುತ್ತೇವೆ ಎಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಜೈಲಿನಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೃಹ ಸಚಿವರಿಗೆ ಗೊತ್ತಿಲ್ಲವಾ? ರಾಜ್ಯದ ಜನರು ಮಾಧ್ಯಮಗಳಲ್ಲಿ ಎಲ್ಲವನ್ನೂ ನೋಡಿದ್ದಾರೆ. ನಿಮ್ಮ ಕಣ್ಣ ಮುಂದೆ ನಡೆಯುತ್ತಿರುವುದಕ್ಕೆ ಇನ್ನೇನು ತನಿಖೆ ಬೇಕು ಎಂದು ಕಿಡಿಕಾರಿದ್ದಾರೆ.
ವ್ಯವಸ್ಥೆ ಯಾಕೆ ಹದಗೆಟ್ಟಿದೆ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನೇ ಕೇಳಬೇಕು. ಈ ಸರ್ಕಾರದ ವೈಫಲ್ಯ ಪ್ರತಿದಿನ ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರ ಸರಿಯಾಗಿ ನಡೆಯುತ್ತಿದ್ದರೆ ಇಂಥ ಘಟನೆಗಳೇ ಆಗುತ್ತಿರಲಿಲ್ಲ. ಪ್ರತಿದಿನ ಗುಪ್ತಚರ ವರದಿ ಸಿಗುತ್ತಾ ಇಲ್ಲವಾ ಎಂದು ಪ್ರಶ್ನಿಸಿದ್ದು, ಇಂಥ ವಿಷಯಗಳನ್ನ ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿಯು ಗೃಹ ಸಚಿವರ ರಾಜೀನಾಮೆ ಒತ್ತಾಯಿಸಿದ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಅವರು, “ಈ ಸರ್ಕಾರದಲ್ಲಿ ಯಾರೂ ನೈತಿಕತೆ ಉಳಿಸಿಕೊಂಡವರಲ್ಲ. ರಾಜೀನಾಮೆ ಕೊಡುವ ಪಾವಿತ್ರ್ಯತೆ ಯಾರಲ್ಲೂ ಉಳಿದಿಲ್ಲ. ರಾಜೀನಾಮೆ ಕೊಡಿ ಅಂತ ಹೇಳಿದರೆ ತಕ್ಷಣ ಕೊಡುತ್ತಾರಾ ಎಂದು ಪ್ರಶ್ನಿಸಿದರು.
ತಮ್ಮ “ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳಿದ್ದಾರೆ” ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, “ನಾನು ಹೇಳಿದ್ದು ರಾಜಕೀಯ ಅರ್ಥದಲ್ಲಿ. ವಿಧಾನಸೌಧದ ಒಳಗೆ ಕುಳಿತು ರಾಜ್ಯವನ್ನು ನಾಶಮಾಡುತ್ತಿರುವವರು ಟೆರೆರಿಸ್ಟ್‌ಗಳು. ಪರಪ್ಪನ ಅಗ್ರಹಾರದ ಉಗ್ರರಿಗಿಂತ ವಿಧಾನ ಸೌಧದ ಉಗ್ರರು ಇನ್ನು ಹೆಚ್ಚು ಅಪಾಯಕರರು,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa