ಸಹಕಾರಿ ಬ್ಯಾಂಕುಗಳು ಯುವಕರ ಸಬಲೀಕರಣದ ಕೇಂದ್ರವಾಗಬೇಕು : ಅಮಿತ್ ಶಾ
ನವದೆಹಲಿ, 10 ನವೆಂಬರ್ (ಹಿ.ಸ.) : ಆ್ಯಂಕರ್ : ದೇಶದ ನಗರ ಸಹಕಾರಿ ಬ್ಯಾಂಕುಗಳು ಈಗ ಮಹತ್ವಾಕಾಂಕ್ಷಿ ಯುವಕರು, ಸಣ್ಣ ಉದ್ಯಮಿಗಳು ಹಾಗೂ ಕೆಳವರ್ಗದ ಜನರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಪ್ರಮುಖ ಸಾಧನವಾಗಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು. ರಾಷ್ಟ್ರೀಯ ನಗರ ಸಹಕಾರಿ
Amit sha


ನವದೆಹಲಿ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ದೇಶದ ನಗರ ಸಹಕಾರಿ ಬ್ಯಾಂಕುಗಳು ಈಗ ಮಹತ್ವಾಕಾಂಕ್ಷಿ ಯುವಕರು, ಸಣ್ಣ ಉದ್ಯಮಿಗಳು ಹಾಗೂ ಕೆಳವರ್ಗದ ಜನರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಪ್ರಮುಖ ಸಾಧನವಾಗಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.

ರಾಷ್ಟ್ರೀಯ ನಗರ ಸಹಕಾರಿ ಬ್ಯಾಂಕುಗಳು ಮತ್ತು ಸಾಲ ಸಂಘಗಳ ಒಕ್ಕೂಟ ಹಾಗೂ ಸಹಕಾರ ಸಚಿವಾಲಯ ಜಂಟಿಯಾಗಿ ಆಯೋಜಿಸಿದ್ದ ‘ಸಹಕಾರ ಕುಂಭ 2025’ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಗರ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳು ಇತ್ತೀಚಿನ ವರ್ಷಗಳಲ್ಲಿ ಹೊಸ ಉತ್ಸಾಹ ಮತ್ತು ದೃಢಸಂಕಲ್ಪದೊಂದಿಗೆ ಮುನ್ನಡೆಯುತ್ತಿವೆ. ನಾಫ್‌ಕಬ್ ಮತ್ತು ಇತರ ಸಂಸ್ಥೆಗಳು ‘ನೈತಿಕ ಮಾರ್ಗಸೂಚಿ ರೂಪಿಸಬೇಕು, ಅದರ ಆಧಾರದ ಮೇಲೆ ಪ್ರತಿಯೊಂದು ಬ್ಯಾಂಕ್ ತನ್ನ ಹಣಕಾಸು ರಚನೆಯನ್ನು ಮರು ವಿನ್ಯಾಸಗೊಳಿಸಬೇಕು ಎಂದು ಅಮಿತ್ ಶಾ ಹೇಳಿದರು.

ಅವರು ವಿಶ್ವ ಶ್ರೇಯಾಂಕದಲ್ಲಿ ಉನ್ನತ ಸ್ಥಾನ ಪಡೆದಿರುವ ಅಮುಲ್ ಮತ್ತು ಇಫ್ಕೊ ಸಂಸ್ಥೆಗಳನ್ನು ಅಭಿನಂದಿಸಿದರು. ಅಮುಲ್ ದೇಶದಲ್ಲಿ ಶ್ವೇತ ಕ್ರಾಂತಿಯನ್ನು ವೇಗಗೊಳಿಸಿ ಪ್ರತಿದಿನ 30 ಮಿಲಿಯನ್ ಲೀಟರ್ ಹಾಲು ಸಂಗ್ರಹಿಸುತ್ತದೆ, ಇಫ್ಕೊ ಹಸಿರು ಕ್ರಾಂತಿಗೆ 9.3 ಮಿಲಿಯನ್ ಟನ್ ಯೂರಿಯಾ ಮತ್ತು ಡಿಎಪಿ ಉತ್ಪಾದನೆ ಮೂಲಕ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು. ಇಫ್ಕೊಯ ನ್ಯಾನೊ ಉತ್ಪನ್ನಗಳು ಈಗ 40 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಆಗುತ್ತಿವೆ ಎಂದು ಶಾ ವಿವರಿಸಿದರು.

ಈ ಸಂದರ್ಭದಲ್ಲಿ ಅವರು ‘ಸಹಕಾರ್ ಡಿಜಿ-ಪೇ’ ಮತ್ತು ‘ಸಹಕಾರ್ ಡಿಜಿ-ಲೋನ್’ ಆಪ್‌ಗಳನ್ನು ಬಿಡುಗಡೆ ಮಾಡಿದರು. “ಭಾರತದಲ್ಲಿ ಡಿಜಿಟಲ್ ಪಾವತಿಗಳ ಹೊಸ ಯುಗ ಪ್ರಾರಂಭವಾಗಿದೆ. ಈಗ ಸಹಕಾರಿ ಸಂಸ್ಥೆಗಳೂ ಈ ಪಾವತಿ ವ್ಯವಸ್ಥೆಯ ಭಾಗವಾಗಬೇಕು, ಜನರಿಗೆ ತಲುಪುವ ಹಣಕಾಸು ಸೇವೆಗಳನ್ನು ನೀಡಬೇಕು” ಎಂದು ಶಾ ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರತಿಯೊಂದು ನಗರದಲ್ಲೂ ನಗರ ಸಹಕಾರಿ ಬ್ಯಾಂಕ್ ಸ್ಥಾಪನೆ ಗುರಿಯಾಗಿದೆ ಎಂದು ಶಾ ಹೇಳಿದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಹಕಾರ ರಾಜ್ಯ ಸಚಿವ ಕೃಷ್ಣ ಪಾಲ್ ಗುರ್ಜರ್, ಕರ್ನಾಟಕದ ಸಹಕಾರ ಸಚಿವ ಡಾ. ಎಚ್.ಕೆ. ಪಾಟೀಲ್, ನಾಫ್‌ಕಬ್ ಅಧ್ಯಕ್ಷೆ ಲಕ್ಷ್ಮಿ ದಾಸ್, ಸಹಕಾರ ಕಾರ್ಯದರ್ಶಿ ಡಾ. ಆಶಿಷ್ ಕುಮಾರ್ ಭೂತಾನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande