
ಗುವಾಹಟಿ, 01 ನವೆಂಬರ್ (ಹಿ.ಸ.) :
ಆ್ಯಂಕರ್ : ಈಶಾನ್ಯ ರಾಜ್ಯಗಳು ಸೂರ್ಯಘರ್ ಮತ್ತು ಪಿಎಂ ಕುಸುಮ್ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದರು.
ಗುವಾಹಟಿಯಲ್ಲಿ ಶುಕ್ರವಾರ ಸಂಜೆ ನವೀಕರಿಸಬಹುದಾದ ಇಂಧನ ಪ್ರಾದೇಶಿಕ ಕಾರ್ಯಾಗಾರ ಉದ್ಘಾಟಿಸಿ, ಈಶಾನ್ಯ ರಾಜ್ಯಗಳು ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಬಳಕೆಗೆ ಹೆಚ್ಚಿನ ಆಸಕ್ತಿ ತೋರಬೇಕು. ಇದಕ್ಕಾಗಿ ಈಶಾನ್ಯ ರಾಜ್ಯಗಳು ಮತ್ತು ಕೈಗಾರಿಕಾ ಪಾಲುದಾರರ ನಡುವೆ ಪರಸ್ಪರ ಸಹಕಾರ ಅತ್ಯಗತ್ಯ ಎಂದು ಸಲಹೆ ನೀಡಿದರು.
ಈಶಾನ್ಯದಲ್ಲಿ ಕೇವಲ 54,545 ಮನೆಗಳು ಮಾತ್ರ ಪಿಎಂ-ಸೂರ್ಯ ಘರ್ ಯೋಜನೆ ಪ್ರಯೋಜನ ಪಡೆದಿವೆ. ಈ ಸೌರ ವಿದ್ಯುತ್ ಯೋಜನೆಗಳು ಜನಸಾಮಾನ್ಯರು ಮತ್ತು ರೈತ ಸಮುದಾಯದ ಸಬಲೀಕರಣ ಜತೆಗೆ ದೇಶದ ಆರ್ಥಿಕ ಸುಸ್ಥಿರತೆಗೆ ಅಮೂಲ್ಯ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ಸೌರ, ಸಣ್ಣ ಜಲ ವಿದ್ಯುತ್ ಮತ್ತು ಅಲ್ಲಿ ಈಶಾನ್ಯ ಭಾರತ ಅಗಾಧ ಸಾಮರ್ಥ್ಯ ಹೊಂದಿದೆ. ಅಂತೆಯೇ ಈ ಭಾಗದಲ್ಲಿ ಪಿಎಂ-ಸೂರ್ಯ ಘರ್ ಮತ್ತು ಪಿಎಂ-ಕುಸುಮ್ ಯೋಜನೆಗಳ ತ್ವರಿತ ಅನುಷ್ಠಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈಶಾನ್ಯಕ್ಕೆ ಪ್ರಯೋಜನವಾಗುವಂತೆ ಶೀಘ್ರದಲ್ಲೇ ಹೊಸ ಸಣ್ಣ ಜಲ ವಿದ್ಯುತ್ ನೀತಿಯನ್ನು MNRE ಪ್ರಾರಂಭಿಸಲಿದೆ. ಈ ಪ್ರದೇಶದಲ್ಲಿ ಶುದ್ಧ ಇಂಧನ ಅಭಿವೃದ್ಧಿಗೆ ನೀತಿ ಮತ್ತು ಆರ್ಥಿಕ ಬೆಂಬಲ ಸಹ ಒದಗಿಸುವ MNRE ತನ್ನದೇಯಾದ ಬದ್ಧತೆ ಹೊಂದಿದೆ ಎಂದು ಹೇಳಿದರು.
ಸಮಗ್ರ ಶುದ್ಧ ಇಂಧನ ನೀತಿ ಪ್ರಕಟಿಸಿದ ಭಾರತದ ಮೊದಲ ರಾಜ್ಯಗಳಲ್ಲಿ ಅಸ್ಸಾಂ ಒಂದಾಗಿದೆ. ಕೇವಲ 5.1 ಗಿಗಾವ್ಯಾಟ್ ಸ್ಥಾಪನೆಯಿಂದ ಇದೀಗ 122 ಗಿಗಾವ್ಯಾಟ್ ನವೀಕರಿಸಬಹುದಾದ ಸಾಮರ್ಥ್ಯ ಹೊಂದಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ಅಸ್ಸಾಂ ಶುದ್ಧ ಇಂಧನದಲ್ಲಿ ಮುನ್ನಡೆದಿದೆ ಎಂದು ಶ್ಲಾಘಿಸಿದರು.
ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಸಿಕ್ಕಿಂ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳ ಇಂಧನ ಸಚಿವರು ನವೀಕರಿಸಬಹುದಾದ ಇಂಧನ ಅನುಷ್ಠಾನದ ಪ್ರಗತಿ ಮತ್ತು ಸವಾಲುಗಳನ್ನು ಹಂಚಿಕೊಂಡರು.
ಕಾರ್ಯಾಗಾರದಲ್ಲಿ ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ ಮತ್ತು ಪ್ರಾದೇಶಿಕ ಸಹಯೋಗ, ಆರ್ಥಿಕ ಸೌಲಭ್ಯಗಳ ಕುರಿತು ಚರ್ಚೆ ನಡೆಸಲಾಯಿತು. PM-KUSUM ಅಡಿಯಲ್ಲಿ ತ್ರಿಪುರ ಮತ್ತು ಅರುಣಾಚಲ ಪ್ರದೇಶ ಹಾಗೂ PM-Surya Ghar ಅಡಿಯಲ್ಲಿ ಅಸ್ಸಾಂ ಮತ್ತು ಮಿಜೋರಾಂ ಸಾಧನೆ ಶ್ಲಾಘಿಸಿದ ಸಚಿವರು ಪ್ರಮಾಣಪತ್ರ ಸಹ ವಿತರಿಸಿದರು. ಅತ್ಯುತ್ತಮ ಪ್ರದರ್ಶನ ನೀಡಿದ ಡಿಸ್ಕಾಮ್, ಜಿಲ್ಲೆ ಮತ್ತು ಈಶಾನ್ಯ ಪ್ರದೇಶದ ಮಾರಾಟಗಾರರನ್ನು ಸನ್ಮಾನಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa