
ಗದಗ, 01 ನವೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ಗದಗ ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗನ ಕಾಟ ನಡೆದಿದೆ.
ರಾಜ್ಯೋತ್ಸವದ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿದ್ದ ವೇಳೆಯಲ್ಲಿ, ಅಚಾನಕ್ ಆಗಿ ಒಂದು ಮಂಗ ಕ್ರೀಡಾಂಗಣದ ಒಳಗೆ ಪ್ರವೇಶಿಸಿ ಭಾರಿ ಗದ್ದಲ ಸೃಷ್ಟಿಸಿದೆ.
ಪರೇಡ್ ವೀಕ್ಷಿಸುತ್ತಿದ್ದಾಗ, ಜನಸಮೂಹದ ಮಧ್ಯೆ ಇದ್ದ ಮಂಗ ಅಚಾನಕ್ ಒಬ್ಬ ವ್ಯಕ್ತಿಯ ಮೇಲೆ ಹಾರಿಬಿದ್ದು “ಡಿಶುಂ” ಮಾಡಿ ಓಡಿ ಹೋದಂತ ದೃಶ್ಯ ಕಣ್ಣಾರೆ ಕಂಡ ಪ್ರೇಕ್ಷಕರು ಬೆಚ್ಚಿಬಿದ್ದರು. ಆ ವ್ಯಕ್ತಿ ನೆಲಕ್ಕೇ ಬಿದ್ದಿದ್ದಾನೆ.
ಆ ಘಟನೆ ಬಳಿಕ ಮಂಗವು ನೇರವಾಗಿ ಶಾಲಾ ಮಕ್ಕಳ ಗ್ಯಾಲರಿಯ ಕಡೆಗೆ ನುಗ್ಗಿದ್ದು, ಮಕ್ಕಳು ಗಾಬರಿಯಿಂದ ಚೀರಾಡಿ ಓಡಾಟ ಆರಂಭಿಸಿದರು. ಕೆಲ ಮಕ್ಕಳು ಶಿಕ್ಷಕರ ಅಡಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಓಡಿಸಲ್ಪಟ್ಟರು. ಕೆಲಕಾಲ ಕಾರ್ಯಕ್ರಮ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಈ ಘಟನೆ ಬಳಿಕ ಸಾರ್ವಜನಿಕರು ಜಿಲ್ಲಾ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚು ಸುರಕ್ಷತಾ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ನಡೆದಿರುತ್ತಿರಲಿಲ್ಲ, ಎಂದು ಪೋಷಕರು ಹಾಗೂ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.
ಮಂಗವನ್ನು ಓಡಿಸುವ ಪ್ರಯತ್ನ ನಡೆಸಿದರು. ಕೆಲವರು ಮಂಗವನ್ನು ಹಿಡಿಯಲು ಪ್ರಯತ್ನಿಸಿದರೂ ಅದು ಮರದ ಮೇಲೇರಿಕೊಂಡು ಕ್ರೀಡಾಂಗಣದ ಬೇಲಿ ದಾಟಿ ಓಡಿಹೋದಿತು.
ಜಿಲ್ಲಾ ಆಡಳಿತದ ಅಧಿಕಾರಿಗಳು, “ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಮಕ್ಕಳಿಗೆ ಭಯ ಮಾತ್ರ ಉಂಟಾಗಿದೆ. ಮುಂದಿನ ಕಾರ್ಯಕ್ರಮಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP