
ಬೆಳಗಾವಿ, 01 ನವೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ರಾಜ್ಯೋತ್ಸವದ ಸಂಭ್ರಮ ನಡೆಯುತ್ತಿದ್ದ ದಿನವೇ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಅನುಮತಿಯಿಲ್ಲದೆ ಕರಾಳ ದಿನಾಚರಣೆ ನಡೆಸಿ ಪುಂಡಾಟಕ್ಕೆ ಮೆರೆದಿದ್ದಾರೆ.
ಈ ವೇಳೆ ಕಾರ್ಯಕರ್ತರು ಕರ್ನಾಟಕ ಸರ್ಕಾರಕ್ಕೆ ಧಿಕ್ಕಾರ, ಕೇಂದ್ರ ಸರ್ಕಾರಕ್ಕೆ ಧಿಕ್ಕಾರ” ಎಂದು ಕೂಗಿ ಕರ್ನಾಟಕ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಎಂಇಎಸ್ ಕಾರ್ಯಕರ್ತರು ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಮತ್ತು ಭಾಲ್ಕಿ ಸೇರಿದಂತೆ ಹಲವು ಗಡಿಯ ಪ್ರದೇಶಗಳನ್ನು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿದರು.
ರಾಜ್ಯೋತ್ಸವದ ದಿನದಂದೇ ನಡೆದ ಕರಾಳ ದಿನಾಚರಣೆಯಿಂದ ನಗರದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿತ್ತು. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಅಧಿಕೃತ ಅನುಮತಿ ಪಡೆಯದೆ ಕರಾಳ ದಿನಾಚರಣೆ ಆಯೋಜಿಸಿದ್ದಕ್ಕಾಗಿ ಎಂಇಎಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa