



ಕೊಪ್ಪಳ, 01 ನವೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಭಾಷೆಯನ್ನು ಕನ್ನಡಿಗರೆಲ್ಲರು ಮಾತನಾಡಿದಾಗ ಮತ್ತು ಬಳಸಿದಾಗ ಮಾತ್ರ ಅದರ ಬೆಳವಣಿಗೆ ಸಾಧ್ಯವಿದೆ. ಕನ್ನಡದ ಲಿಪಿಯನ್ನು ಮುಂದಿನ ಜನಾಂಗಕ್ಕೂ ಬರೆಯಲು ಕಲಿಸಿ ಈ ಭಾಷೆಯನ್ನು ನಾವೆಲ್ಲರೂ ಉಳಿಸಿ, ಬೆಳಸಿಕೊಂಡು ಹೋಗೋಣ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉ ಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಹೇಳಿದ್ದಾರೆ.
ಅವರು ಶನಿವಾರ ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯವು ಏಕೀಕರಣವಾಗಿ 69 ವರ್ಷಗಳು ಪೂರ್ಣಗೊಂಡಿರುವ ಈ ಶುಭ ಸಂದರ್ಭದಲ್ಲಿ ಎಲ್ಲಾ ಕಡೆ ಸುಖ-ಶಾಂತಿ, ನೆಮ್ಮದಿ ನೆಲೆಸುವಂತಾಗಲಿ ಎಂದು ನಾಡದೇವತೆ ತಾಯಿ ಭುವನೇಶ್ವರಿ ದೇವಿಯನ್ನು ನಾನು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಆಲೂರು ವೆಂಕಟರಾವ್ ಅವರು 1905ರಲ್ಲಿಯೇ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸನ್ನು ಕಂಡ ಮೊದಲ ವ್ಯಕ್ತಿಯಾಗಿದ್ದರು. ಬ್ರಿಟಿಷರ ಅಧಿಕಾರದ ಅವಧಿಯಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಏಕೀಕರಣ ಚಳವಳಿ ಮೂಲಕ ಹಲವು ವರ್ಷಗಳವರೆಗೆ ನಿರಂತರ ಹೋರಾಟದ ಪ್ರತಿಫಲವಾಗಿ 1956ರ ನವೆಂಬರ್ 1 ರಂದು ನಮ್ಮ ರಾಜ್ಯ ಉದಯವಾಯಿತು. ರಾಜ್ಯದ ಪ್ರಗತಿಗೆ ಭದ್ರ ಬುನಾದಿ ಹಾಕಿದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸುರವರ ಗಟ್ಟಿ ನಿರ್ಧಾರದಿಂದ 1973ರ ನವೆಂಬರ್ 1 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಅನೇಕ ಮಹನೀಯರಲ್ಲಿ ಸಾಹಿತಿಗಳಾದ ಬಿ.ಎಂ.ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಕೆ.ಶಿವರಾಂ ಕಾರಂತರು, ದ.ರಾ.ಬೇಂದ್ರೆಯವರು ಹಾಗೂ ಕೆ.ಎನ್ ಕೃಷ್ಣರಾವ್ ಮತ್ತು ಇನ್ನೂ ಹಲವು ಮಹನೀಯರನ್ನು ಈ ಸಮಯದಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕೊಪ್ಪಳ ಜಿಲ್ಲೆಯ ಪಾತ್ರವೂ ಅಷ್ಟೇ ಪ್ರಮುಖವಾದುದಾಗಿದೆ. ಕೊಪ್ಪಳ ಜಿಲ್ಲೆಯ ಅಳವಂಡಿ ಶಿವಮೂರ್ತಿಸ್ವಾಮಿ ಅವರು, ಶಿರೂರು ವೀರಭದ್ರಪ್ಪ ತೆಗ್ಗಿನಮನಿ ಅವರು, ಶಂಕರಗೌಡ್ರು, ಪ್ರಭುರಾಜ ಪಾಟೀಲ್ ಸಂಗನಾಳ ಅವರು, ಪಂಚಾಕ್ಷರಿ ಹಿರೇಮಠ ಅವರು, ಸೋಮಪ್ಪ ಡಂಬಳ ಅವರು, ದೇವೇಂದ್ರಕುಮಾರ ಹಕಾರಿ ಅವರು, ಭೀಮನಗೌಡ ಪಾಟೀಲ್ ಅವರು, ಹನುಮರಡ್ಡಿ ಕಲ್ಗುಡಿ ಅವರು, ಪಂಚಪ್ಪ ಶೆಟ್ಟರು, ಹಂಜಿ ಕೊಟ್ರಪ್ಪ, ಮುಂತಾದವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದನ್ನು ನಾವು ಇಂದು ಸ್ಮರಿಸಲೇಬೇಕು ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ವಿವಿಧತೆಯಲ್ಲಿ ಏಕತೆ ನೆಲೆಸಿದೆ. ಕನ್ನಡನಾಡು ಸಂಪನ್ಮೂಲ ಹಾಗೂ ಸಂಸ್ಕøತಿಯಿಂದ ಶ್ರೀಮಂತವಾಗಿದೆ. ಆದಿಕವಿ ವಾಲ್ಮೀಕಿಯಿಂದ ಆರಂಭವಾಗಿ ಪಂಪ, ರನ್ನ ಮೊದಲಾದ ಕವಿಗಳು ತಮ್ಮ ಕಾವ್ಯದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಮನದುಂಬಿ ಹೊಗಳಿದ್ದಾರೆ ಎಂದರು.
ಕನ್ನಡ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗೆ ನಮ್ಮ ಸರಕಾರವು ಹೆಚ್ಚಿನ ಒತ್ತು ನೀಡಿದೆ. ಕನ್ನಡವನ್ನು ಕನ್ನಡಿಗರೆಲ್ಲರು ಮಾತನಾಡಿದಾಗ ಮತ್ತು ಬಳಸಿದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯವಿದೆ. ಕನ್ನಡದ ಲಿಪಿಯನ್ನು ಮುಂದಿನ ಜನಾಂಗಕ್ಕೂ ಬರೆಯಲು ಕಲಿಸಿದಾಗ ಮಾತ್ರ ಈ ಭಾಷೆಯನ್ನು ಉಳಿಸಿ, ಬೆಳಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರ್ಕಾರವು ಕನ್ನಡ ನಾಡು ನುಡಿ ಸೇವೆಗೆ ಸದಾಕಾಲ ಬದ್ಧವಾಗಿದೆ ಎಂದು ಹೇಳಿದರು.
2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬಸಪ್ಪ ಭರಮಪ್ಪ ಚೌಡ್ಕಿ (ಜಾನಪದ ಕ್ಷೇತ್ರ), ದೇವೇಂದ್ರಕುಮಾರ ಪತ್ತಾರ (ಸಂಗೀತ ಕ್ಷೇತ್ರ), ಶೇಖರಗೌಡ ಮಾಲಿಪಾಟೀಲ್ (ಸಹಕಾರ ಕ್ಷೇತ್ರ) ಇವರುಗಳಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.
ನಮ್ಮ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಜನರು ನೆಮ್ಮದಿಯಿಂದ ಬದುಕುವಂತಾಗಿದೆ. ಈ ನಿಟ್ಟಿನಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡುತ್ತಾ ನಾವು ಬರುತ್ತಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತದೆ. ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ 52 ರಿಂದ 56 ಸಾವಿರ ಕೋಟಿ ರೂ.ಗಳನ್ನು ಸರ್ಕಾರದಿಂದ ಖರ್ಚು ಮಾಡಲಾಗುತ್ತಿದೆ. ಈ ಯೋಜನೆಗಳಿಂದ ಬಡ ಜನರಿಗೆ ಅನುಕೂಲವಾಗಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಶಕ್ತಿ ತುಂಬುವಂತಹ ಕೆಲಸವಾಗುತ್ತಿದೆ ಎಂದು ತಿಳಿಸಿದರು.
2023ರ ಜೂನ್ 11 ರಿಂದ ಆರಂಭಗೊಂಡ ಶಕ್ತಿ ಯೋಜನೆಯು ಜನ ಮೆಚ್ಚುಗೆ ಗಳಿಸಿದ ಯೋಜನೆಯಾಗಿದ್ದು, ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣದ ಸೌಲಭ್ಯ ಆರಂಭವಾದಾಗಿನಿಂದ 2025ರ ಸೆಪ್ಟೆಂಬರ್ ಮಾಹೆಯ ಅಂತ್ಯದವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 9.05 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಿ ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಇದಕ್ಕಾಗಿ 329.81 ಕೋಟಿ ರೂ.ಗಳು ವೆಚ್ಚ ಮಾಡಲಾಗಿರುತ್ತದೆ ಎಂದರು.
2025ರ ಸೆಪ್ಟೆಂಬರ್ 30 ರವರೆಗೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ “ಗೃಹ ಜ್ಯೋತಿ” ಯೋಜನೆಯಲ್ಲಿ ಒಟ್ಟು 2 ಲಕ್ಷ 96 ಸಾವಿರದ 448 ಗ್ರಾಹಕರ ಪೈಕಿ 2 ಲಕ್ಷ 87 ಸಾವಿರದ 629 ಫಲಾನುಭವಿಗಳು ನೋಂದಾಯಿಸಿದ್ದು, ಶೇ 97.05 ರಷ್ಟು ಪ್ರಗತಿಯಾಗಿದೆ. ಈ ಯೋಜನೆಯಡಿ ಆಗಸ್ಟ್-2023 ರಿಂದ ಸೆಪ್ಟೆಂಬರ್-2025ರ ವರೆಗೆ ಒಟ್ಟು ರೂ. 319.08 ಕೋಟಿ ಸಬ್ಸಿಡಿ ನೀಡಲಾಗಿರುತ್ತದೆ ಎಂದು ತಿಳಿಸಿದರು.
2023ರ ಡಿಸೆಂಬರ್ 26 ರಂದು ಮುಖ್ಯಮಂತ್ರಿಗಳಿಂದ “ಯುವನಿಧಿ” ಯೋಜನೆ ನೋಂದಣಿಗೆ ಚಾಲನೆ ನೀಡಲಾಗಿತ್ತು. 2024ರ ಜನವರಿ 12 ರಂದು ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು ರೂ.3000 ಹಾಗೂ ಡಿಪ್ಲೊಮಾದಾರರಿಗೆ ಪ್ರತಿ ತಿಂಗಳು ರೂ.1500 ಗಳ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ 2025ರ ಅಕ್ಟೋಬರ್ 24 ರವರೆಗೆ 10,837 ಫಲಾನುಭವಿಗಳು ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು ರೂ. 19 ಕೋಟಿ 25 ಲಕ್ಷ 97 ಸಾವಿರ ನಿರುದ್ಯೋಗ ಭತ್ಯೆಯನ್ನು ನೀಡಲಾಗಿದೆ ಎಂದರು.
ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್‍ನಲ್ಲಿ ನಮೂದಿಸಿರುವಂತೆ ಕುಟುಂಬದ ಅರ್ಹ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ಆರ್ಥಿಕ ಸೌಲಭ್ಯ ನೀಡುವ ಗೃಹಲಕ್ಷ್ಮೀ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಜಿಲ್ಲೆಯಲ್ಲಿ ಜುಲೈ-2025ರ ಅಂತ್ಯಕ್ಕೆ ಒಟ್ಟು 3 ಲಕ್ಷ 27 ಸಾವಿರದ 120 ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಡಿ ನೊಂದಣಿಯಾಗಿದ್ದು, ಇದುವರೆಗೂ 22 ಕಂತುಗಳಲ್ಲಿ ಒಟ್ಟು ಮೊತ್ತ ರೂ. 1340.58 ಕೋಟಿ ರೂಪಾಯಿ ಸಹಾಯ ಧನ ಫಲಾನುಭವಿಗಳ ಖಾತೆಗೆ ಸಂದಾಯವಾಗಿರುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಜೊತೆಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಸೇರಿಸಿ 10 ಕೆಜಿ ಆಹಾರ ಧಾನ್ಯ ಪ್ರತಿ ಸದಸ್ಯರಿಗೆ ವಿತರಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ 36,581 ಅಂತ್ಯೋದಯ, 2 ಲಕ್ಷ 86 ಸಾವಿರದ 526 ಪಿ.ಹೆಚ್.ಹೆಚ್ ಸೇರಿ ಒಟ್ಟು 3 ಲಕ್ಷ 23 ಸಾವಿರದ 107 ಪಡಿತರ ಚೀಟಿಗಳಿಗೆ ಮಾಸಿಕ 12338.100 ಮೆಟ್ರಿಕ್‍ಟನ್ ಆಹಾರಧಾನ್ಯ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ರಾಜ್ಯದ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ಸಂಗ್ರಹಿಸಲಾದ ಜೋಳವನ್ನು ವಿತರಣೆ ಮಾಡಲಾಗುತ್ತಿದೆ. ಅನ್ನಭಾಗ್ಯ ಡಿಬಿಟಿ ಯೋಜನೆಯಲ್ಲಿ ಡಿಸೆಂಬರ್-2024ರ ಮಾಹೆಯವರೆಗೆ 313.92 ಕೋಟಿ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆಯಿಂದ ನಮ್ಮ ಭಾಗದ ಸರ್ವೋತೋಮುಖ ಅಭಿವೃದ್ಧಿಗೆ ತುಂಬಾ ಅನುಕೂಲವಾಗಿದ್ದು, ಈ ಮಂಡಳಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ 5 ಸಾವಿರ ಕೋಟಿ ರೂ. ಅನುದಾನವನ್ನು ನೀಡುವ ಮೂಲಕ ನಮ್ಮ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ 2025-26ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಗೆ ಮೈಕ್ರೋ ವಲಯದಲ್ಲಿ ರೂ. 236.39 ಕೋಟಿ ಹಾಗೂ ಮ್ಯಾಕ್ರೋ ವಲಯದಲ್ಲಿ ರೂ. 99.68 ಕೋಟಿ ಹೀಗೆ ಒಟ್ಟು ರೂ. 336.08 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ. ಜಿಲ್ಲೆಗೆ ನಿಗದಿಪಡಿಸಿದ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 2025-26ನೇ ಸಾಲಿಗೆ 83 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯಿದ್ದು 2025ರ ಸೆಪ್ಟಂಬರ್ 10 ಕ್ಕೆ 48.58 ಲಕ್ಷ ಮಾನವ ದಿನಗಳು ಸೃಜಿಸಿ ಶೇ. 58 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಈ ವರ್ಷ (23 ಸೆಪ್ಟೆಂಬರ್ 2025ರ ವರೆಗೆ) ಜಿಲ್ಲೆಯ ಸರಾಸರಿ ವಾಡಿಕೆ ಮಳೆ 556 ಮಿ.ಮಿ. ಆಗಿದ್ದು, ವಾಸ್ತವಿಕವಾಗಿ 607 ಮಿ.ಮಿ. ಮಳೆಯಾಗಿದ್ದು, ಇದು ಶೇ. 7ರಷ್ಟು ಅಧಿಕವಾಗಿದೆ. ಈ ವರ್ಷ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಹಿಂಗಾರು ಹಂಗಾಮು ಆಶಾದಾಯಕವಾಗಿದೆ. ಜಿಲ್ಲೆಯ ಬಿತ್ತನೆ ಗುರಿ 1.80 ಲಕ್ಷ ಹೆಕ್ಟರ್ ಆಗಿದ್ದು, 0.52 ಲಕ್ಷ ಹೆಕ್ಟರ್ (ಶೇ.29ರಷ್ಟು) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆ ಕಾರ್ಯವು ಚುರುಕಾಗಿರುತ್ತದೆ ಎಂದು ಹೇಳಿದರು.
ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಯೋಜನೆಯು ಅನುಷ್ಠಾನಗೊಂಡಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜೊತೆಗೆ ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿ ಒಟ್ಟು 12 ಜಿಲ್ಲೆಗಳ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ಮಾರುಕಟ್ಟೆ ಒದಗಿ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಈ ಯೋಜನೆಯನ್ನು ಅನುಷ್ಠಾನ ಗೊಳಿಸಲು ಕರ್ನಾಟಕ ಸರಕಾರವು ಕನಕಗಿರಿ ತಾಲ್ಲೂಕಿನ ಸಿರವಾರ ಗ್ರಾಮದಲ್ಲಿ ಲಭ್ಯವಿರುವ ಸರಕಾರಿ ಜಮೀನು 194.33 ಎಕರೆ ಜಮೀನಿನಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್‍ನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿ ಅಂದಾಜು ವೆಚ್ಚ 83.79 ಕೋಟಿ ರೂ. ಮೊತ್ತದಲ್ಲಿ ಸ್ಥಾಪಿಸಲು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ: 17.07.2025 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋಧನೆ ನೀಡಲಾಗಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 78 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 7694 ವಿದ್ಯಾರ್ಥಿಗಳು ಪ್ರವೇಶ ಸೌಲಭ್ಯ ಪಡೆದುಕೊಂಡಿರುತ್ತಾರೆ. 2024-25ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣಕ್ಕೆ ಹೊಸದಾಗಿ 100 ಸಂಖ್ಯಾಬಲದ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಮಂಜೂರಾಗಿದ್ದು, ಸದರಿ ಶಾಲೆಯನ್ನು ಪ್ರಸ್ತುತ ಸಾಲಿನಿಂದ ಪ್ರಾರಂಭಿಸಲು ಕ್ರಮವಹಿಸಲಾಗಿದೆ. ಹಾಗೂ 2025-26ನೇ ಸಾಲಿಗೆ ಡಿ.ದೇವರಾಜ ಅರಸು ಅಲೆಮಾರಿ/ಅರೆಅಲೆಮಾರಿ ಜನಾಂಗದ ವಸತಿ ಶಾಲೆ ಪ್ರಾರಂಭಿಸಲು ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯ ಇಟಗಿ, ಟಣಕನಕಲ್, ತಳುವಗೇರಾ ಹಾಗೂ ಕನಕಗಿರಿ ಸೇರಿ ಜಿಲ್ಲೆಯಲ್ಲಿ ಒಟ್ಟು 4 ಸರಕಾರಿ ಆದರ್ಶ ಪದವಿ ಪೂರ್ವ ಕಾಲೇಜುಗಳನ್ನು 2025-26ನೇ ಸಾಲಿನಿಂದ ಪ್ರಾರಂಭ ಮಾಡಲಾಗಿದೆ. 2024-25ನೇ ಸಾಲಿಗೆ ಕೆ.ಕೆ.ಆರ್.ಡಿ.ಬಿ ಅನುದಾನದಿಂದ ಕುಕನೂರು ತಾಲೂಕಿನ ರಾಜೂರು-ಆಡೂರು ಹಾಗೂ ಯಲಬುರ್ಗಾ ತಾಲೂಕಿನ ಮುಧೋಳ-ಕರಮುಡಿ ಸೇರಿ ಜಿಲ್ಲೆಯಲ್ಲಿ 2 ಹೊಸ ಪದವಿ ಪೂರ್ವ ಕಾಲೇಜುಗಳು ಮಂಜೂರಾಗಿರುತ್ತವೆ. 2025-26ನೇ ಸಾಲಿನಲ್ಲಿ ಅಕ್ಷರ ಆವಿಷ್ಕಾರ ಯೋಜನೆಯಡಿ ಜಿಲ್ಲೆಯ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ರೂ.59.09 ಕೋಟಿಗಳ ಅನುದಾನವು ಮಂಜೂರಾಗಿರುತ್ತದೆ. ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸುವುದು ಪ್ರಗತಿಯಲ್ಲಿವೆ ಎಂದರು.
ತಾಯಿ ಆರೋಗ್ಯ ಕಾರ್ಯಕ್ರಮದಡಿ 2025-26ನೇ ಸಾಲಿನಲ್ಲಿ ಎಪ್ರಿಲ್-2025 ರಿಂದ ಸೆಪ್ಟೆಂಬರ್-2025ರ ವರೆಗೆ ಒಟ್ಟು 14,738 ಗರ್ಭಿಣಿ ನೋಂದಣಿ ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಶೇ.94 ರಷ್ಟು ಗರ್ಭಿಣಿಯರನ್ನು ಮೊದಲನೇ ತ್ರೈಮಾಸಿಕದಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. ತಾಯಿ ಆರೋಗ್ಯ ಕಾರ್ಯಕ್ರಮದಡಿ 2025-26ನೇ ಸಾಲಿನಲ್ಲಿ ಎಪ್ರಿಲ್-2025 ರಿಂದ ಸೆಪ್ಟೆಂಬರ್-2025ರವರೆಗೆ ನಾಲ್ಕು ಬಾರಿ ಒಟ್ಟು 10,031 ಗರ್ಭಿಣಿಯರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಅಮೃತ 2.0 ಯೋಜನೆಯಡಿಯಲ್ಲಿ ಕೊಪ್ಪಳ-ಭಾಗ್ಯನಗರ ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿಗೆ 139.94 ಕೋಟಿ ರೂ. ಯಲಬುರ್ಗಾ-ಕುಕನೂರು ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿಗೆ 242.23 ಕೋಟಿ ರೂ. ಕನಕಗಿರಿ-ಕಾರಟಗಿ ಸಂಯುಕ್ತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ 195.79 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ನೀಡಲಾಗಿದೆ. ಹಾಗೂ ಕುಷ್ಟಗಿ ಕುಡಿಯವ ನೀರಿನ ಯೋಜನೆಯ 28 ಕೋಟಿ ರೂ. ಮೊತ್ತದ ಕಾಮಗಾರಿ ಪ್ರಗತಿಯಲ್ಲಿರುತ್ತವೆ. ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಅಂದಾಜು ಮೊತ್ತ 40 ಕೋಟಿ ರೂ. ಗಂಗಾವತಿ ನಗರ ವ್ಯಾಪ್ತಿಯಲ್ಲಿ ಅಂದಾಜು ಮೊತ್ತ 30 ಕೋಟಿ ರೂ. ಯೋಜನೆ ರೂಪಿಸಲಾಗಿದ್ದು, ಈ ಸಂಬಂಧ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಇನ್ನುಳಿದ 7 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಸಹ ಈ ಯೋಜನೆ ರೂಪಿಸಲು ಡಿಪಿಆರ್ ತಯಾರಿಸುವ ಹಂತದಲ್ಲಿರುತ್ತದೆ ಎಂದರು.
ಮರಣ ಹೊಂದಿದ ಕುರಿ-ಮೇಕೆ ಮಾಲೀಕರಿಗೆ ಅನುಗ್ರಹ ಕೊಡುಗೆ ಯೋಜನೆಯಡಿ ಪರಿಹಾರಧನ ವಿತರಿಸಲಾಗುತ್ತಿದ್ದು, ಆಕಸ್ಮಿಕ ಮರಣಹೊಂದಿದ 3 ರಿಂದ 6 ತಿಂಗಳ ಕುರಿ-ಮೇಕೆ ಮರಿಗಳಿಗೆ ರೂ. 3500 ಮತ್ತು 6 ತಿಂಗಳ ಮೇಲ್ಪಟ್ಟ ಕುರಿ-ಮೇಕೆ ಮಾಲೀಕರಿಗೆ ಗರಿಷ್ಟ ರೂ. 5000 ಗಳ ಪರಿಹಾರಧನವನ್ನು ವಿತರಿಸಲಾಗುತ್ತಿದೆ. ಅದರಂತೆ 2025-26ನೇ ಸಾಲಿನಲ್ಲಿ 4842 ಕುರಿ-ಮೇಕೆಗಳ 4668 ಮಾಲೀಕರಿಗೆ ರೂ. 251.66 ಲಕ್ಷ ಪರಿಹಾರಧನವನ್ನು ವಿತರಿಸಲಾಗಿದೆ. 2025-26ನೇ ಸಾಲಿನಲ್ಲಿ ಈ ಯೋಜನೆಯಡಿ ನೀಡಲಾಗುತ್ತಿರುವ ಪರಿಹಾರಧನದ ಮೊತ್ತವನ್ನು 3 ರಿಂದ 6 ತಿಂಗಳ ಕುರಿ-ಮೇಕೆ ಮರಿಗಳಿಗೆ ರೂ. 3500 ರಿಂದ ರೂ. 5000 ಕ್ಕೆ ಮತ್ತು 6 ತಿಂಗಳ ಮೇಲ್ಪಟ್ಟ ಕುರಿ-ಮೇಕೆ ಮಾಲೀಕರಿಗೆ ಗರಿಷ್ಟ ರೂ. 5000 ರಿಂದ ರೂ. 7500 ಕ್ಕೆ ಹೆಚ್ಚಿಸಲಾಗಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಅಂದಾಜು 2000 ಕೋಟಿ ರೂ.ಮೊತ್ತದ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಅಕ್ಟೋಬರ್ 6ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ಚಾಲನೆ ದೊರೆತದ್ದು, ಆ ದಿನ ಕೊಪ್ಪಳ ಜಿಲ್ಲೆಯ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದಲ್ಲಿ ಆರಂಭಿಸಿರುವ ಸಮೀಕ್ಷೆಯಿಂದಲೂ ಜನತೆಗೆ ಅನುಕೂಲವಾಗಲಿದೆ. ಕೊಪ್ಪಳ ಜಿಲ್ಲೆಯಲ್ಲಿ ನಡೆದ ಸಾಮಾಜಿ ಮತ್ತು ಶೈಕ್ಷಣಿಕ ಗುರಿ ಇಂದಿಗೆ ಶೇ. 100.46 ನಿರೀಕ್ಷೆಗಿಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಿ ರಾಜ್ಯದಲ್ಲಿ ನಮ್ಮ ಜಿಲ್ಲೆ ಉತ್ತಮ ಸ್ಥಾನದಲ್ಲಿರುತ್ತದೆ ಎಂದು ಹೇಳಿದರು.
``ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ'' ಎನ್ನುವ ಕವಿವಾಣಿಯಂತೆ ಕನ್ನಡ ನಮ್ಮೆಲ್ಲರ ಮನೆ-ಮನಗಳಲ್ಲಿ ಬೆಳಗಲಿ ಎನ್ನುತ್ತಾ ಎಲ್ಲರಿಗೂ 70ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.
ಆಕರ್ಷಕ ಪಥಸಂಚಲನ: ಕನ್ನಡ ರಾಜ್ಯೋತ್ಸವದ ನಿಮಿತ್ತ ನಡೆದ ಪಥಸಂಚಲನದಲ್ಲಿ ಪೊಲೀಸ್ ಇಲಾಖೆ, ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕದಳ, ಭಾರತ ಸೇವಾದಳ, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ & ಗೈಡ್ಸ್ ಸೇರಿ ಒಟ್ಟು 13 ತಂಡಗಳು ಭಾಗವಹಿಸಿ ಆಕರ್ಷಕ ಪಥಸಂಚಲನ ನಡೆಸಿ, ಸಚಿವರಿಗೆ ಗೌರವ ವಂದನೆ ಸಲ್ಲಿಸಿದವು.
ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ: ರಾಜ್ಯೋತ್ಸವದ ನಿಮಿತ್ತ ಭಾಗ್ಯನಗರದ ಜ್ಞಾನಬಂಧು ಪಿಯು ಕಾಲೇಜು ಹಾಗೂ ಕೊಪ್ಪಳದ ಕಾಳಿದಾಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಥಸಂಚಲನದಲ್ಲಿ ವಿಜೇತರಾದ ತಂಡಗಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪಾಲ್ಗೊಂಡ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಕ್ರೀಡಾ ಸಾಧಕರಿಗೆ ಸನ್ಮಾನ: ಇತ್ತೀಚೆಗೆ ಹಾಸನದಲ್ಲಿ ಜರುಗಿದ 13 ವರ್ಷದೊಳಗಿನ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚೆಸಫಿಡೆ ರೇಟಿಂಗನಲ್ಲಿ 1524 ಶ್ರೇಣಿ ಪಡೆದ ಕೊಪ್ಪಳದ ಕುಮಾರಿ ಯಶ್ವಿ ರಾಕೇಶ ರಾವಲ್ ವಯಸ್ಸು 12 ವರ್ಷ ಹಾಗೂ ಕಲಬುರಗಿಯಲ್ಲಿ ಜರುಗಿದ 17 ವರ್ಷದೊಳಗಿನ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚೆಸ್ ಫಿಡೇ ರೇಟಿಂಗನಲ್ಲಿ ಕ್ಲಾಸಿಕ್ 1471 ಮತ್ತು ರಾಫಿಡ್ ರೇಟಿಂಗ್ 1460 ಶ್ರೇಣಿ ಪಡೆದ ಕುಷ್ಟಗಿ ತಾಲೂಕಿನ ಜಹಗೀರ ಗುಡದೂರು ಗ್ರಾಮದ ಅಮರನಾಥ ಬಸನಗೌಡ ರಾಮಶೆಟ್ಟಿ ವಯಸ್ಸು 8 ವರ್ಷ ಈ ಚಿಕ್ಕ ವಯಸ್ಸಿನ ಕ್ರೀಡಾ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ ಮತ್ತು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಶಿಲ್ದಾರ ವಿಠ್ಠಲ ಚೌಗಲಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ಮತ್ತು ಇತರೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಎನ್.ಸಿ.ಸಿ, ಭಾರತ ಸ್ಕೌಟ್ಸ್ & ಗೈಡ್ಸ್, ಭಾರತ ಸೇವಾದಳ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.
*ಮೆರವಣಿಗೆ:* 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ನಿಮಿತ್ತ ಬೆಳಿಗ್ಗೆ ಕೊಪ್ಪಳ ತಹಶೀಲ್ದಾರ ಕಚೇರಿಯಿಂದ ಜಿಲ್ಲಾ ಕ್ರೀಡಾಂಗಣದ ವರೆಗೆ ಹಮ್ಮಿಕೊಂಡ ನಾಡ ದೇವತೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಗೆ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹಾಗೂ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ಸಿಇಒ, ಎಸ್ಪಿ, ಎಡಿಸಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್